More

    ಟನ್ ಕಬ್ಬಿಗೆ 3 ಸಾವಿರ ರೂ. ನಿಗದಿಪಡಿಸಿ

    ಮೂಡಲಗಿ, ಬೆಳಗಾವಿ: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರನ್ನ ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಿಲರಿ, ವಿದ್ಯುತ್ ಉತ್ಪಾದನೆ ವ್ಯವಸ್ಥೆ ಇಲ್ಲದಿದ್ದರೂ ಸಹ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಟನ್ ಕಬ್ಬಿಗೆ 2,900 ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಉಳಿದ ಕಾರ್ಖಾನೆಗಳಲ್ಲಿ ವಿವಿಧ ಉತ್ಪಾದನೆ ಇರುವುದರಿಂದ 3,000 ಸಾವಿರ ರೂ. ದರ ನಿಗದಿಮಾಡಿ, ಕಾರ್ಖಾನೆ ಪ್ರಾರಂಭಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. ಪಟ್ಟಣದ ಮಹಾಲಕ್ಷ್ಮೀ ಸೊಸೈಟಿ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಬೆಳಗಾವಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 2022-23ನೇ ಸಾಲಿಗೆ ಅಂದಾಜು 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.17 ಕೋಟಿ ಮೆಟ್ರಿಕ್ ಟನ್ ಕಬ್ಬು ಬೆಳೆಯಲಾಗಿದೆ. ಕೇಂದ್ರ ಸರ್ಕಾರ 2022-23ನೇ ಸಾಲಿನ ಎ್.ಆರ್.ಪಿ ಯನ್ನು ಮೂಲ ರಿಕವರಿ ದರವಾದ ಶೇ.10.25ರಂತೆ ಪ್ರತಿ ಟನ್‌ಗೆ 3,050 ರೂ. ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಕೂಡ ಎಸ್.ಎ.ಪಿ ದರ ಶೀಘ್ರ ಘೋಷಣೆ ಮಾಡಬೇಕೆಂದರು.

    ಕೇವಲ ಸಕ್ಕರೆ ಉತ್ಪಾದನೆ ಮಾತ್ರವಲ್ಲದೇ ಕಾರ್ಖಾನೆಯ ಉಪ ಉತ್ಪಾದನೆಗಳಾದ ವಿದ್ಯುತ್, ಡಿಸ್ಟಿಲರಿ ಸೇರಿ ಇನ್ನುಳಿದ ಉತ್ಪಾದನೆ ಆಧಾರದ ಮೇಲೆ ಲಾಭಾಂಶದಲ್ಲಿ ಶೇ.70 ರೈತರಿಗೆ ಹಂಚಿಕೆ ಮಾಡಬೇಕು. ಇದುವರೆಗೂ ಕಾರ್ಖಾನೆಗಳೂ ಲಾಭಾಂಶ ಹಂಚಿಕೆ ಮಾಡಿಲ್ಲ. ಜತೆಗೆ ಸರ್ಕಾರ ಕೂಡ ಪ್ರೋತ್ಸಾಹಧನ ನೀಡಿ ರೈತರ ಏಳಿಗೆಗೆ ಮುಂದಾಗಬೇಕು ಎಂದರು. ಕಾರ್ಖಾನೆಗಳು ಕಬ್ಬು ಕಟಾವು ಮತ್ತು ಸಾಗಣೆಯ ಪ್ರತಿ ಟನ್‌ಗೆ 750 ರೂ. ರೈತರಿಗೆ ನೀಡುವ ಬಿಲ್‌ನಲ್ಲಿ ಕಡಿತವಾಗುತ್ತಿದ್ದು, ಇದು ಸಹ ಅವೈಜ್ಞಾನಿಕವಾಗಿದೆ. ಸರ್ಕಾರ ಕಾರ್ಖಾನೆಗಳನ್ನು ಸ್ಥಾಪನೆ ಮಾಡುವ ಸಂದರ್ಭದಲ್ಲಿ ಪ್ರದೇಶ ನಿಗದಿ ಮಾಡಿಕೊಡಲಾಗಿರುತ್ತದೆ. ಆದರೆ, ಕಾರ್ಖಾನೆಗಳು ಬೇರೆ ಪ್ರದೇಶಗಳಿಂದ ಕಬ್ಬು ಕಟಾವು ಮಾಡುತ್ತಿರುವುದರಿಂದ ಕಟಾವು ಮತ್ತು ಸಾಗಣೆ ವೆಚ್ಚವು ರೈತರಿಗೆ ಹೊರೆಯಾಗುತ್ತಿದೆ. ಸರ್ಕಾರ ಇದರ ಕುರಿತು ಚಿಂತನೆ ನಡೆಸಬೇಕೆಂದರು. ಬಿಜೆಪಿ ಮುಖಂಡ ಪ್ರಕಾಶ ಮಾದರ, ಸಂತೋಷ ಪಾರ್ಶಿ, ರೈತ ಮುಖಂಡ ಆನಂದ ಮೂಡಲಗಿ, ಶ್ರೀಶೈಲ ಪೂಜೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts