More

    ಜ್ಯೋತಿ ಸ್ವರೂಪಿಣಿ ಕಮಲಪೀಠದ ಭೂತ್ಯಮ್ಮ: ಬೆಟ್ಟದ ತುದಿಯಲ್ಲಿ ರಾತ್ರಿಯಿಡೀ ಉರಿಯುವ ದೀಪ, ಹೊಸವರ್ಷ ಹೊಸಬೆಳಕಲ್ಲಿ ದೇವಿ ಮುನ್ನಡೆಸುತ್ತಾಳೆಂಬ ನಂಬಿಕೆ

    ಕೋಲಾರ: ಸೌಂದರ್ಯೋಪಾಸಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಟೇಕಲ್‌ನ ಭೂತ್ಯಮ್ಮನ ಬೆಟ್ಟ ಆಸ್ತಿಕ ಮಹಾಶಯರಿಗೆ ಪವಿತ್ರ ಧಾರ್ಮಿಕ ತಾಣ.

    ಚೆನ್ನೈನಿಂದ ಬೆಂಗಳೂರು ರೈಲು ವಾರ್ಗದ ಬದಿ ಹೆಬ್ಬಂಡೆಗಳನ್ನು ಹೊದ್ದು ಮಲಗಿದ ಬೆಟ್ಟದ ಮತ್ತೊಂದು ತಪ್ಪಲಿನ ಉಳ್ಳೇರಹಳ್ಳಿಯಲ್ಲಿ ಕಮಲಪೀಠದ ಮೇಲೆ ಶಕ್ತಿದೇವತೆಯಾಗಿ ನೆಲೆಸಿರುವ ಭೂತ್ಯಮ್ಮ ಯುಗಾದಿಗೆ ಜ್ಯೋತಿ ಸ್ವರೂಪಿಣಿಯಾಗಿ ದರ್ಶನ ನೀಡುವುದು ವಿಶೇಷ.
    ವಾಲೂರು ತಾಲೂಕು ಟೇಕಲ್‌ನಿಂದ ವೀರಕಪುತ್ರ ಅಗ್ರಹಾರದ ತನಕ ನಾಲ್ಕೈದು ಕಿ.ಮೀ ಉದ್ದದ ಭೂತ್ಯಮ್ಮನ ಬೆಟ್ಟ, ಹುಣಸಿಕೋಟೆಯಿಂದ ಉಳ್ಳೇರಹಳ್ಳಿ ವೀರಕಪುತ್ರದ ತನಕವಿರುವ ಚಿಕ್ಕಬೆಟ್ಟ, ಸೀತಮ್ಮನ ಬೆಟ್ಟಗಳು ಭೂತ್ಯಮ್ಮನ ನೆಲೆಬೀಡು.

    ನೂರಾರು ವರ್ಷದ ಐತಿಹಾಸಿಕ ಹಿನ್ನೆಲೆಯುಳ್ಳ ಭೂತ್ಯಮ್ಮನ ದೇಗುಲವನ್ನು ಇತ್ತೀಚೆಗೆ ಜೀರ್ಣೋದ್ಧಾರಗೊಳಿಸಲಾಗಿದೆ. ಭೂತ್ಯಮ್ಮನ ಜಾತ್ರೆಗೆ ಬೆಂಗಳೂರು, ಆಂಧ್ರ, ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ.

    ಇತಿಹಾಸ: ಉಳ್ಳೇರಹಳ್ಳಿ ಪೂರ್ವಕ್ಕಿದ್ದ ಸೀತಮ್ಮನ ಬೆಟ್ಟದಲ್ಲಿ ಸೀತಾದೇವಿ ವನವಾಸದಲ್ಲಿದ್ದಾಗ ಲವ-ಕುಶರೊಂದಿಗೆ ವಾಸವಿದ್ದು, ಅದಕ್ಕೆ ಕುರುಹುಗಳಾಗಿ ತೊಟ್ಟಿಲು, ಒನಕೆ ಹೋಲುವ ಕಲ್ಲುಗಳು, ಕೊಳ ಇದ್ದವು ಎನ್ನಲಾಗುತ್ತಿದೆ. ಅಲ್ಲಿಯೇ ನೆಲೆಸಿದ್ದ ಭೂತ್ಯಮ್ಮನಿಗೆ ಅನಾದಿ ಕಾಲದಿಂದಲೂ ಪೂಜೆ ಸಲ್ಲಿಸಲಾಗುತ್ತಿತ್ತು. ಒಮ್ಮೆ ಪೂಜಾರಿ ಬೇಡರ ಕದಿರೆಪ್ಪಗೆ ದೇವಿ ಆವಾಹನೆಯಾಗಿ ತಾನಿಲ್ಲಿ ಇರಲಾರೆ, ಗ್ರಾಮದಲ್ಲಿ ನೆಲೆ ಒದಗಿಸಿ ಎಂದಳಂತೆ. ಆಗ ಗ್ರಾಮದ ಹಿರಿಯರಾದ ಕಮಲಮ್ಮ ಇತರರು ದೇವಿ ವಿಗ್ರಹವನ್ನು ಅಲ್ಲಿಂದ ತಂದು ಊರಹೊರಗೆ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾದರಂತೆ ಎಂದು ಗ್ರಾಮಸ್ಥರಾದ ರಮೇಶ್‌ಕುವಾರ್, ನಾಗರಾಜರಾವ್ ತಿಳಿಸುತ್ತಾರೆ.
    ಅಲ್ಲಿಂದ ಭೂತ್ಯಮ್ಮ ಉಳ್ಳೇರಹಳ್ಳಿ ಆರಾಧ್ಯದೇವತೆಯಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿದ್ದಾಳೆ. ಉತ್ಸವ ಮೂರ್ತಿಯನ್ನು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೆರವಣಿಗೆ ವಾಡುವುದು ರೂಢಿಯಾಗಿದೆ. ಪ್ರತಿವರ್ಷ ಯುಗಾದಿಗೆ ಉಳ್ಳೇರಹಳ್ಳಿಯಲ್ಲಿ ಜಾತ್ರೆ ನಡೆಯುತ್ತದೆ.

    ನೂರಾರು ಹಳ್ಳಿಗಳಿಗೆ ಜ್ಯೋತಿ ದರ್ಶನ: ಭೂತ್ಯಮ್ಮನ ಬೆಟ್ಟದ ತುತ್ತತುದಿಯಲ್ಲಿ ಬೃಹತ್ ಬಂಡೆಗಲ್ಲಿನ ಮೇಲೆ ಭೂತ್ಯಮ್ಮನ ಜ್ಯೋತಿ ಬೆಳಗಿಸುವ ಸಂಪ್ರದಾಯ ಶತವಾನಗಳಿಂದ ಚಾಲ್ತಿಯಲ್ಲಿದೆ. ಹೊಸವರ್ಷಕ್ಕೆ ಹೊಸಬೆಳಕಲ್ಲಿ ದೇವಿ ಮುನ್ನಡೆಸುತ್ತಾಳೆಂಬ ನಂಬಿಕೆ ಈ ಭಾಗದ ಜನರದ್ದು. ಬೆಟ್ಟದ ಮೇಲೇರಲು ದಾರಿ ಇಲ್ಲದಿದ್ದರೂ, ಬಂಡೆಗಲ್ಲುಗಳ ಮೇಲೆ, ಗುಹೆಗಳ ಒಳಗೆ ತೆರಳಿ ಜ್ಯೋತಿ ಬೆಳಗುವ ಗುಟ್ಟೆ ತಲುಪಬೇಕು. ಮೇಲೆ ಹೋಗುವ ತಂಡ 25ಲೀ ಎಣ್ಣೆ, ತುಪ್ಪ, ದೊಡ್ಡಬಾನೆ (ಮಡಕೆ), ಹರಳು ಬೀಜ ಮತ್ತು ಹೊಸ ಬಟ್ಟೆಯಿಂದ ತಯಾರಿಸಿದ ಎರಡೂವರೆ ಅಡಿ ಉದ್ದದ ಬತ್ತಿ, ಬೇವಿನ ಸೊಪ್ಪು, ಪಂಚಗವ್ಯ ತೆಗೆದುಕೊಂಡು ಹೋಗುತ್ತಾರೆ. ಉಪವಾಸ ವ್ರತದಲ್ಲಿರುವ ದೇವಸ್ಥಾನದ ಅರ್ಚಕ ಯುಗಾದಿ ದಿನ ಚಂದ್ರದರ್ಶನವಾಗುತ್ತಿದ್ದಂತೆ ದೀಪ ಹಚ್ಚುತ್ತಾರೆ.

    ಜ್ಯೋತಿ ಸ್ವರೂಪಿಣಿ ಕಮಲಪೀಠದ ಭೂತ್ಯಮ್ಮ: ಬೆಟ್ಟದ ತುದಿಯಲ್ಲಿ ರಾತ್ರಿಯಿಡೀ ಉರಿಯುವ ದೀಪ, ಹೊಸವರ್ಷ ಹೊಸಬೆಳಕಲ್ಲಿ ದೇವಿ ಮುನ್ನಡೆಸುತ್ತಾಳೆಂಬ ನಂಬಿಕೆ

    ಬೆಳಗ್ಗೆಯೇ ಅಭ್ಯಂಜನ ವಾಡಿ ಹೊಸ ಬಟ್ಟೆ ತೊಟ್ಟು ಹಬ್ಬದಾಚರಣೆಯಲ್ಲಿ ತೊಡಗುವ ಜನ ಸಂಜೆ ಜ್ಯೋತಿ ಕಣ್ತುಂಬಿಕೊಂಡ ನಂತರ ಮನೆಗಳಲ್ಲಿ ದೀಪ ಬೆಳಗಿಸುವುದು ವಾಡಿಕೆ. ಈ ಜ್ಯೋತಿ ವಾಲೂರು, ಬಂಗಾರಪೇಟೆ, ಕೋಲಾರ ತಾಲೂಕುಗಳ ನೂರಾರು ಹಳ್ಳಿಗಳಿಗೆ ಕಾಣುತ್ತದೆ. ಹಲವು ಹಳ್ಳಿಗಳಲ್ಲಿ ಜ್ಯೋತಿ ನೋಡಿ ಊರಮುಂದೆ ಜನರಿಗೆ ಬೇಯಿಸಿದ ಅವರೆ, ಉರುಳಿಕಾಳು ಪ್ರಸಾದವಾಗಿ ಹಂಚುತ್ತಿದ್ದುದೂ ಉಂಟು. ಜ್ಯೋತಿ ವಾರನೇ ದಿನ ಮಧ್ಯಾಹ್ನ 3 ಗಂಟೆ ತನಕ ಪ್ರಜ್ವಲಿಸುತ್ತಿರುತ್ತದೆ.

    ಬಸವಣ್ಣ ದೇವರಿಗೇ ಡೈನಾಮೈಟ್!: ಭೂತ್ಯಮ್ಮನ ಗುಹೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶತವಾನಗಳಷ್ಟು ಹಳೆಯದಾದ ಬಸವಣ್ಣ(ನಂದಿ)ನ ವಿಗ್ರಹಕ್ಕೆ ನಿಧಿಗಳ್ಳರು ಡೈನಾಮೈಟ್ ಇಟ್ಟು ಸ್ಫೋಟಿಸಿ ನಿಧಿ ಶೋಧಿಸಿದ್ದಾರೆ. ಗ್ರಾಮಸ್ಥರು ಅದೇ ಜಾಗದಲ್ಲಿ ಮತ್ತೊಂದು ವಿಗ್ರಹ ಪ್ರತಿಷ್ಠಾಪಿಸಿದ್ದಾರೆ.

    ಇತರ ದೇವಾಲಯಗಳೂ ಇವೆ: ತಮಿಳುನಾಡಿನ ಕಂಚಿಗೆ ಸಮನಾಂತರವಾಗಿ ತೇಕಂಚಿ (ಟೇಕಲ್) ಗ್ರ್ರಾಮವನ್ನು ವಾಡಬೇಕೆಂಬ ಹಂಬಲ ಹೊಂದಿದ್ದ ಪೂರ್ವಿಕರು, ಮತ್ತು ಈ ಭಾಗವನ್ನಾಳಿದ್ದ ರಾಜಮನೆತನಗಳು 101 ದೇವಾಲಯಗಳನ್ನು ಸ್ಥಾಪಿಸಿದ್ದರಂತೆ. ಆದರೆ ಅವುಗಳಲ್ಲಿ ಬೆರಳೆಣಿಕೆಯಷ್ಟು ವಾತ್ರ ಈಗ ಉಳಿದಿದ್ದು, ಉಳ್ಳೇರಹಳ್ಳಿಯಲ್ಲಿ ವ್ಯಾಸರಾಯರು ಪ್ರತಿಷ್ಠಾಪಿಸಿದ ಆಂಜನೇಯ, ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ, ಸಪ್ತವಾತೃಕೆ ಗಂಗಮ್ಮ ದೇವಾಲಯಗಳೂ ಇವೆ.

    ಹೀಗೆ ತಲುಪಬಹುದು: ಉಳ್ಳೇರಹಳ್ಳಿಗೆ ಟೇಕಲ್ ರೈಲು ನಿಲ್ದಾಣದಿಂದ ಕೋಲಾರ ವಾರ್ಗದಲ್ಲಿ 3 ಕಿ.ಮೀ ಕ್ರಮಿಸಬೇಕು. ಕೋಲಾರದಿಂದ 18 ಕಿ.ಮೀ, ಬಂಗಾರಪೇಟೆಯಿಂದ 12 ಕಿ.ಮೀ, ವಾಲೂರಿನಿಂದ 20 ಕಿ.ಮೀ ದೂರದಲ್ಲಿದೆ. ಟೇಕಲ್‌ಗೆ ಚೆನ್ನೈ ಮತ್ತು ಬೆಂಗಳೂರಿನಿಂದ ಉತ್ತಮ ರೈಲು ಸಂಪರ್ಕವಿದೆ. ಬಂಗಾರಪೇಟೆಯಿಂದ ಕಾರಮಂಗಲ ವಾರ್ಗವಾಗಿ ಹಾಗೂ ಕೋಲಾರದಿಂದ ಹುಣಸಿಕೋಟೆ ಬಳಿ ತಿರುವು ಪಡೆದು ತಲುಪಬಹುದು. ಬಸ್ ಸೌಕರ್ಯವಿಲ್ಲ.

    ದೇವಾಲಯದಲ್ಲಿ ನಿತ್ಯ ಬೆಳಗ್ಗೆ 6 ಗಂಟೆಗೆ ನಂತರ ಸಂಜೆ 6ಕ್ಕೆ ಪೂಜೆ ಇರುತ್ತದೆ. ಹಬ್ಬ, ಹರಿದಿನ ಮತ್ತು ವಿಶೇಷ ದಿನಗಳಲ್ಲಿ ದಿನವಿಡೀ ದೇವಾಲಯ ಬಾಗಿಲು ತೆರೆದಿರುತ್ತದೆ. ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತದೆ.
    ನವೀನ್, ಪೂಜಾರಿ. ಮೊ.ಸಂ. 7795033852

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts