More

    ಜ್ಞಾನದ ಭಂಡಾರ ಡಾ. ಅಂಬೇಡ್ಕರ್

    ಹಾವೇರಿ: ಕರೊನಾ ಹಿನ್ನೆಲೆಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಜಿಲ್ಲೆಯಾದ್ಯಂತ ಸರಳವಾಗಿ ಆಚರಿಸಲಾಯಿತು.

    ಮಂಗಳವಾರ ಬೆಳಗ್ಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹಾಗೂ ಶಾಸಕ ನೆಹರು ಓಲೇಕಾರ ಮಾಲಾರ್ಪಣೆ ಮಾಡಿದರು.

    ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಧಿಕಾರಿಗಳು, ಗಣ್ಯರು ಪುಷ್ಪನಮನ ಸಲ್ಲಿಸಿದರು. ಶಾಸಕ ನೆಹರು ಓಲೇಕಾರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಮುತ್ಸದ್ದಿ, ಜ್ಞಾನದ ಭಂಡಾರವಾಗಿದ್ದರು. ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಶ್ರಮಿಸಿದರು. ಶಿಕ್ಷಣ ಸಂಘಟನೆ, ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯಲು ಕರೆ ಕೊಟ್ಟರು. ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರು ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿ, ಜಾತಿ, ವರ್ಗ ರಹಿತ, ಲಿಂಗಸಮಾನತೆ, ಸಮ ಸಮಾಜ ನಿರ್ವಣಕ್ಕೆ ಶ್ರಮಿಸಿದ ಮಹಾನ್ ಸಮಾಜ ಸುಧಾರಕ ಎಂದು ಬಣ್ಣಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಮಾತನಾಡಿದರು. ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಹಾಗೂ ವಿವಿಧ ಇಲಾಖಾಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

    ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ನಾಯಕ

    ರಾಣೆಬೆನ್ನೂರ: ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

    ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಅಂಬೇಡ್ಕರ್ ಅವರು ದೀನ ದಲಿತರ ಪರವಾಗಿ ಹೋರಾಡಿ, ದೇಶದಲ್ಲಿ ಕ್ರಾಂತಿ ಸೃಷ್ಟಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಜಗತ್ತಿನಲ್ಲಿ ಜಾತಿ ಎಂಬ ಪಿಡುಗು ದೂರು ಮಾಡಲು ಹೋರಾಟ ಮಾಡಿದ ಅಂಬೇಡ್ಕರ್ ಇಂದು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

    ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ತಹಸೀಲ್ದಾರ್ ಬಸನಗೌಡ ಕೋಟೂರು, ತಾಪಂ ಇಒ ಎಸ್.ಎಂ. ಕಾಂಬಳೆ, ನಗರಸಭೆ ಪೌರಾಯುಕ್ತ ಡಾ. ಎನ್. ಮಹಾಂತೇಶ, ಡಿವೈಎಸ್ಪಿ ಟಿ.ವಿ. ಸುರೇಶ, ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಹಿಂದುಳಿದವರಿಗೆ ಮೀಸಲಾತಿ ಕೊಟ್ಟ ನಾಯಕ

    ಹಿರೇಕೆರೂರ: ಡಾ. ಬಿ.ಆರ್.ಅಂಬೇಡ್ಕರ್ ಅವರು ದೀನ, ದಲಿತರ, ಬಡವರ, ಹಿಂದುಳಿದವರ ಪರ ಧ್ವನಿ ಎತ್ತಿರದಿದ್ದರೆ ಇದುವರೆಗೆ ಅಸ್ಪೃಶ್ಯತೆ, ಬಡತನವನ್ನು ಹೋಗಲಾಡಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

    ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ಭವ್ಯವಾದ ಸಂವಿಧಾನವನ್ನು ರಚಿಸಿಕೊಡುವ ಮೂಲಕ ಹಿಂದುಳಿದ ವರ್ಗದವರಿಗೆ ಮೀಸಲಾತಿಯ ಅವಕಾಶ ಕಲ್ಪಿಸಿಕೊಟ್ಟರು. ಇದರಿಂದ ಈ ಸಮಾಜದವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಅವರ ಆದರ್ಶವನ್ನು ಪಾಲಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

    ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ದುರ್ಗಪ್ಪ ನೀರಲಗಿ, ಪ್ರಾಚಾರ್ಯರಾದ ಡಾ. ಎಸ್.ಬಿ. ಚನ್ನಗೌಡ್ರ, ಬಿ.ಪಿ. ಹಳ್ಳೇರ, ಮುಖ್ಯಶಿಕ್ಷಕರಾದ ಸಿ.ಆರ್. ಹುಲ್ಲತ್ತಿ, ಆರ್.ಕೆ. ಲಮಾಣಿ, ಬಿ.ವಿ. ಸನ್ನೇರ, ಹರೀಶ ಅರ್ಕಾಚಾರಿ ಇದ್ದರು.

    ಶೋಷಣೆ ವಿರುದ್ಧ ಹೋರಾಟ

    ರಟ್ಟಿಹಳ್ಳಿ: ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

    ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮಾಜದಲ್ಲಿನ ಮೂಢನಂಬಿಕೆ, ಶೋಷಣೆ, ಅನ್ಯಾಯ, ಅಸಮಾನತೆ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಅವಶ್ಯವಿರುವ ಸಂವಿಧಾನ ರಚಿಸಿದರು ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ರಮೇಶ ಭೀಮಪ್ಪನವರ, ಬಾಬು ವೀರಾಪುರ, ಪರಮೇಶಪ್ಪ ಕಟ್ಟೇಕಾರ, ಶಿವರಾಜ ಹೊಳಜೋಗಿ, ನಜೀರ್​ಸಾಬ್ ಸೈಕಲಗಾರ, ಖಲೀಲ ಅಹ್ಮದ್ ಸವಣೂರ ಇದ್ದರು.

    ಕ್ರಾಂತಿಕಾರಿ ಬದಲಾವಣೆಯ ಕನಸು

    ಹಾನಗಲ್ಲ: ಅಹಿಂಸಾ ತತ್ತ್ವದ ಮೂಲಕ ಸಮಾಜ ಸುಧಾರಣೆ ಮಾಡಿ, ಜನಸಾಮಾನ್ಯರ ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಬೇಕು ಎನ್ನುವುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

    ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶೋಷಿತರನ್ನು ಶಿಕ್ಷಣದ ಮೂಲಕ ಜಾಗ್ರತಗೊಳಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಆಶಯ ಹೊಂದಿದ್ದರು ಎಂದರು.

    ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ, ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ್, ಚಂದ್ರಣ್ಣ ಹರಿಜನ, ಮಾರುತಿ ತಾಂದಳೆ, ಸಂತೋಷ ಟೀಕೋಜಿ, ಮಂಜುನಾಥ ಬಸವಂತಕರ, ಸಂತೋಷ ಭಜಂತ್ರಿ, ರವಿರಾಜ ಕಲಾಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts