More

    ಜೋಳದ ಹಸಿರು ತಿಂದು 62 ಕುರಿ ಸಾವು

    ನರೇಗಲ್ಲ: ಕೊಯ್ಲಿನ ನಂತರ ಕೊಳೆಯಲ್ಲಿ ಚಿಗುರಿದ್ದ ಬಿಳಿ ಜೋಳದ ಹಸಿರನ್ನು (ವಿಷಕಾರಿ ಅಂಶ)ತಿಂದು 62 ಕುರಿಗಳು ಮೃತಪಟ್ಟು, 10 ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ಪಟ್ಟಣದ ಯರೇಹಂಚಿನಾಳ ರಸ್ತೆ ಪಕ್ಕದ ಜಮೀನೊಂದರಲ್ಲಿ ಬುಧವಾರ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದ ಸಿದ್ದಪ್ಪ ಮಾಯಪ್ಪ ಪೂಜಾರ ಎಂಬುವವರಿಗೆ ಸೇರಿದ 20 ಕುರಿಗಳು, ಅಜೀತ ಮಾಯಾಪ್ಪ ಪೂಜಾರ ಎಂಬುವವರ 24 ಕುರಿಗಳು ಹಾಗೂ ಕಾಳಿನಹಳ್ಳಿ ಗ್ರಾಮದ ಶಂಕ್ರಪ್ಪ ಮಾಯಪ್ಪ ಪೂಜಾರ ಎಂಬುವವರಿಗೆ ಸೇರಿದ 18 ಕುರಿಗಳು ಮೃತಪಟ್ಟಿವೆ.

    ಪ್ರತಿದಿನದಂತೆ ಕುರಿಗಳು ಮೇಯಲು ಬುಧವಾರ ಜಮೀನುಗಳಿಗೆ ಹೋಗಿದ್ದವು. ಯರೇಹಂಚಿನಾಳ ರಸ್ತೆಯ ಪಕ್ಕದಲ್ಲಿರುವ ಜಮೀನೊಂದರಲ್ಲಿ ಜೋಳದ ಚಿಗರು ಕಂಡು ಮೇಯಲು ಆರಂಭಿಸಿವೆ. ತಿಂದ ಕೆಲವೇ ನಿಮಿಷದಲ್ಲಿ ಕುರಿಗಳು ಬಿದ್ದು ಒದ್ದಾಡುವುದನ್ನು ಕಂಡ ಕುರಿಗಾಹಿಗಳು ತಕ್ಷಣ ಪಶು ವೈದ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ವೈದ್ಯಾಧಿಕಾರಿ ಡಾ. ಎಲ್.ಎಸ್. ಗೌರಿ ಹಾಗೂ ಆರ್.ಆರ್. ಕುಲಕರ್ಣಿ ತಂಡವು ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಡಾ. ಎಲ್.ಎಸ್. ಗೌರಿ, ‘ಜೋಳದ ಕೊಯ್ಲಿನ ನಂತರ ಜಮೀನಿನಲ್ಲಿ ಗೊಬ್ಬರವಾಗಲಿ ಎಂದು ಸಹಜವಾಗಿ ಕೊಳೆಯನ್ನು ಅಲ್ಲಿಯೇ ಬೀಡುತ್ತಾರೆ. ಇತ್ತೀಚೆಗೆ ಮಳೆ ಆಗಿರುವುದರಿಂದ ಕೊಳೆ ಚಿಗುರೊಡೆದಿದೆ. ಕೊಳೆಯಲ್ಲಿ ವಿಷಕಾರಿ ಅಂಶ ಇರುವುದರಿಂದ ಕುರಿಗಳು ತಿಂದ ತಕ್ಷಣವೇ ಮೃತಪಟ್ಟಿವೆ. ಅಲ್ಲದೆ, ನಿಖರ ವರದಿ ಪಡೆಯಲು ಬಾಗಲಕೋಟೆಯಲ್ಲಿರುವ ಪಶು ಆರೋಗ್ಯ ಸಂಸ್ಥೆಗೆ ಕಳೆಬರ ರವಾನಿಸಲಾಗಿದೆ’ ಎಂದರು.

    ವ್ಯಕ್ತಿ ನಾಪತ್ತೆ, 5 ವರ್ಷದ ಬಳಿಕ ದೂರು

    ಲಕ್ಷ್ಮೇಶ್ವರ: ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದು, ಐದು ವರ್ಷದ ಬಳಿಕ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೇ 8ರಂದು ದೂರು ದಾಖಲಾಗಿದೆ. ಹಿರೇಬಣದ ನಿಂಗನಗೌಡ ರಾಮನಗೌಡ ಪಾಟೀಲ ಎಂಬುವವರು ತಮ್ಮ ಮಗ ಮಹಾಂತೇಶ ಪಾಟೀಲ (36) 2015 ಜೂನ್ 26ರಂದು ಮನೆ ಬಿಟ್ಟು ಹೋಗಿದ್ದು, ಇದುವರೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಕಾಣೆಯಾದ ವ್ಯಕ್ತಿಯ ಗುರುತು ದೊರೆತಲ್ಲಿ ದೂ.ಸಂ. 08372-100/ 944808 04400ಗೆ ತಿಳಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.

    ಯುವಕನ ಕೊಲೆ ಶಂಕೆ

    ಶಿರಹಟ್ಟಿ: ತಾಲೂಕಿನ ಮಾಚೇನಹಳ್ಳಿಯಲ್ಲಿ ಕೆರೆಯಲ್ಲಿ ಯುವಕನೊಬ್ಬನ ಶವ ಮಂಗಳವಾರ ಪತ್ತೆಯಾಗಿದೆ.

    ಮೃತನನ್ನು ಮಾಚೇನಹಳ್ಳಿ ಗ್ರಾಮದ ಮಂಜುನಾಥ ಅಶೋಕ ಮರಾಠೆ (22) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಮಾನಪ್ಪ ರಾಮಪ್ಪ ಮರಾಠೆ, ಫಕೀರಪ್ಪ ಮುದಕಪ್ಪ ಮರಾಠೆ, ಮುತ್ತಪ್ಪ ಅಂದಾನೆಪ್ಪ ಕಾಟಗಿ, ಸುನೀಲ ಉಮೇಶ ಮರಾಠೆ ಮತ್ತು ಅರ್ಜುನ ಖಂಡಪ್ಪ ಮರಾಠೆ ಎಂಬುವವರ ವಿರುದ್ಧ ಮೃತನ ಸಹೋದರ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್​ಐ ಸುನೀಲಕುಮಾರ ನಾಯಕ ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಟಿಪ್ಪರಿಗೆ ಬೈಕ್ ಡಿಕ್ಕಿ, ಸವಾರ ಸಾವು

    ಕೆರೂರ: ಸಮೀಪದ ಅಗಸನಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-218 ರಲ್ಲಿ ನಿಂತ ಟಿಪ್ಪರ್​ಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸವಾರ ಬಾಪುಗೌಡ ಶಿರಿಯಪ್ಪಗೌಡ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗದಗ ಜಿಲ್ಲೆಯ ಕೊಣ್ಣೂರ ಗ್ರಾಮದ ಬಾಪುಗೌಡ, ಮುಧೋಳ ಹತ್ತಿರದ ತಿಮ್ಮಾಪುರದ ಶ್ವಾನ ದಳದ ಸಂಶೋಧನಾ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ನಸುಕಿನ ಜಾವದಲ್ಲಿ ಕೊಣ್ಣೂರದಿಂದ ಬಾಗಲಕೋಟೆಗೆ ಹೋಗುವ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ.

    ಟಿಪ್ಪರ್​ಗೆ ಹಿಂದುಗಡೆ ರೇಡಿಯಂ ಇಂಡಿಕೇಟರ್ ಇಲ್ಲದೆ ರಸ್ತೆ ಮೇಲೆ ನಿಲ್ಲಿಸಿದ್ದರಿಂದ ಟಿಪ್ಪರ್ ನಿಂತಿದ್ದು ಸ್ಪಷ್ಟವಾಗಿ ಕಾಣದ ಕಾರಣ ಬೈಕ್ ಅದಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎಂದು ಮೃತನ ತಂದೆ ಯಂಕನಗೌಡ ಶಿರಿಯಪ್ಪಗೌಡ ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಸಿಪಿಐ ರಮೇಶ ಹಾನಾಪುರ ತನಿಖೆ ಕೈಗೊಂಡಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts