More

    ಜೇನು ಕೃಷಿಯತ್ತ ಗಮನಹರಿಸಿ

    ಶಿರಸಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಜೇನು ಕೃಷಿ ಉತ್ತಮವಾಗಿ ಫಲ ನೀಡಲಿದ್ದು, ಪ್ರತಿಯೊಬ್ಬರೂ ಇದರತ್ತ ಒಲವು ತೋರಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎನ್. ಕೆ. ಹೆಗಡೆ ಹೇಳಿದರು.

    ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಗಳ ಆಶ್ರಯದಲ್ಲಿ ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಜೇನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟ ಪ್ರದೇಶವು ಜೇನು ಸಾಕಾಣಿಕೆಗೆ ಸೂಕ್ತವಾಗಿರುವ ಪ್ರದೇಶವಾಗಿದೆ. ಈ ಕೃಷಿಯೆಡೆ ಪ್ರತಿಯೊಬ್ಬರೂ ಆಸಕ್ತ ತಳೆಯಬೇಕು ಎಂದರು. ಪ್ರತಿನಿತ್ಯ ಜೇನು ತುಪ್ಪವನ್ನು ಸೇವಿಸುವುದರಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.

    ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜು ಎಂ.ಜೆ. ಮಾತನಾಡಿ, ಜೇನು ಸಾಕಾಣಿಕೆಯಿಂದ ಉತ್ತಮ ಆದಾಯ ಪಡೆಯುವುದಲ್ಲದೆ, ರೈತರು ಜೇನು ಸಾಕಾಣಿಕೆಯ ಬಗ್ಗೆ ತರಬೇತಿಯನ್ನು ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಪಡೆಯಬಹುದೆಂದು ತಿಳಿಸಿದರು.

    ಕೀಟ ತಜ್ಞೆ ಡಾ. ರೂಪಾ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಅತಿಯಾದ ಪೀಡೆನಾಶಗಳ ಬಳಕೆಯಿಂದ ಜೇನು ನೊಣಗಳ ವಿನಾಶಕಾರಿಗೆ ಕಾರಣವಾಗಿದೆಯೆಂದು ತಿಳಿಸಿದರು.

    ಪ್ರಗತಿಪರ ಜೇನು ಕೃಷಿಕ ರವೀಂದ್ರ ಹೆಗಡೆ, ಸಂತೇಮನೆ ಮಾತನಾಡಿ, ಶಿರಸಿಯಲ್ಲಿ ಜೇನು ಸಾಕಾಣಿಕೆಯಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಜೇನು ಸಾಕಾಣಿಕೆ ಸೂಕ್ತ. ರೈತರಿಗೆ ಜೇನು ಹುಳುಗಳಲ್ಲಿ ವಿವಿಧ ಜಾತಿಯ ಪ್ರಭೇದಗಳಿವೆ. ಅವುಗಳಲ್ಲಿ ಸೂಕ್ತ ಪ್ರಭೇದಗಳನ್ನು ಆರಿಸಿಕೊಳ್ಳುಬೇಕೆಂದು ರೈತರಿಗೆ ತಿಳಿಸಿದರು.

    ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ. ಪ್ರಶಾಂತ ಎ. ಸ್ವಾಗತಿಸಿದರು. ಡಾ. ಪುಷ್ಪಾ ಪಿ. ನಿರೂಪಿಸಿದರು. ಡಾ. ಮನುಕುಮಾರ್ ಎಚ್. ಆರ್. ವಂದಿಸಿದರು. ನಂತರ ಜೇನು ಪೆಟ್ಟಿಗೆ ಮಾದರಿ ಮತ್ತು ಜೇನು ತೆಗೆಯುವ ಯಂತ್ರ, ಜೇನು ಉತ್ಪನ್ನ ತೆಗೆಯುವ ವಿಧಾನ ಹಾಗೂ ಜೇನು ಉತ್ಪನ್ನಗಳು ಹಾಗೂ ಅದರ ಸಂಸ್ಕರಣೆ ಕುರಿತು ಪ್ರಾತ್ಯಕ್ಷಿಕೆಯನ್ನು ತಜ್ಞರಾದ ಡಾ. ಪ್ರಶಾಂತ ಎ., ಡಾ. ಮನುಕುಮಾರ್ ಎಚ್. ಆರ್., ಡಾ. ಚಂದನ್ ಕೆ., ಡಾ. ಹರ್ಷವರ್ಧನ್ ಎಂ. ಮತ್ತು ಡಾ. ಸುಧೀಶ್ ಕುಲಕರ್ಣಿ ತಿಳಿಸಿಕೊಟ್ಟರು. ಲಾಕ್​ಡೌನ್ ಮಾರ್ಗಸೂಚಿಗಳನ್ನು ಅನುಸರಿಸುವ ಜತೆ ಮಾಸ್ಕ್ ಧರಿಸಿ, ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರವನ್ನು ಕೈಗೊಂಡು ಕಾರ್ಯಕ್ರಮ ಸಂಘಟಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts