More

    ಜೀವ ರಕ್ಷಣೆಗೆ ಎರಡು ಕುಟುಂಬಗಳ ನಡುವೆ ಕಿಡ್ನಿ ದಾನ ಒಪ್ಪಂದ

    ಪಂಚನಹಳ್ಳಿ: ಒಬ್ಬ ಬಾಗಲಕೋಟೆಯ 12 ವರ್ಷದ ಬಾಲಕ, ಮತ್ತೊಬ್ಬ ಕಡೂರು ತಾಲೂಕಿನ ಬಿ. ಬಸವನಹಳ್ಳಿ ತಾಂಡಾದ 38 ವರ್ಷದ ಯುವಕ. ಇಬ್ಬರಿಗೂ ಕಿಡ್ನಿ ವೈಫಲ್ಯವಾಗಿದೆ. ಇಬ್ಬರಿಗೂ ಅವರ ಕುಟುಂಬದವರು ಕಿಡ್ನಿ ದಾನ ಮಾಡಿ ಅವರನ್ನು ಉಳಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ ರಕ್ತದ ಗುಂಪು ಮತ್ತಿತರ ಕಾರಣಗಳಿಂದ ಅವರ ಕಿಡ್ನಿಯನ್ನು ಜೋಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸ್ಥಿತಿಯಲ್ಲಿ ವೈದ್ಯರ ಸಕಾಲಿಕ ಚಿಂತನೆ ಮತ್ತು ಪ್ರಯತ್ನದಿಂದ ಯುವಕ ಮತ್ತು ಬಾಲಕನನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಬಾಗಲಕೋಟೆಯ ಬಾಲಕನಿಗೆ ಬಿ. ಬಸವನಹಳ್ಳಿ ತಾಂಡಾದ ಯುವಕನ ಪತ್ನಿ, ಬಿ. ಬಸವನಹಳ್ಳಿ ತಾಂಡಾದ ಯುವಕನಿಗೆ ಬಾಗಲ ಕೋಟೆಯ ಬಾಲಕನ ತಾಯಿ ಕಿಡ್ನಿ ಕೊಡಲು ಮುಂದೆ ಬಂದಿದ್ದಾರೆ.

    ಕಡೂರು ತಾಲೂಕಿನ ಬಿ.ಬಸವನಹಳ್ಳಿ ತಾಂಡಾದ 38 ವರ್ಷದ ಮೋಹನ್ ನಾಯ್ಕ ಎಂಬುವವರಿಗೆ ಎರಡೂ ಕಿಡ್ನಿಗಳು ವಿಫಲವಾಗಿ ಜೀವನ್ಮರಣದ ಹೋರಾಟದಲ್ಲಿದ್ದರು. ಪತ್ನಿ ಅಂಬಿಕಾ ಗಂಡನಿಗೆ ಒಂದು ಕಿಡ್ನಿ ನೀಡಲು ಮುಂದಾದರೂ ರಕ್ತದ ಗುಂಪು ಬೇರೆಯಾಗಿದ್ದರಿಂದ ಹೆಂಡತಿ ಕಿಡ್ನಿ ಗಂಡ ಮೋಹನ್ ನಾಯ್ಕನಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಮೋಹನ್ ನಾಯ್ಕ ಬದುಕಿನ ಭರವಸೆ ಕಳೆದುಕೊಂಡಿದ್ದ.

    ಇದು ಒಂದು ಕುಟುಂಬದ ಕಥೆಯಾದರೆ ಬಾಗಲಕೋಟೆಯ ಬಾಲಕ ಆಕಾಶ ಮತ್ತೊಂದು ಕಥೆ. ಈ ವರ್ಷ 8ನೇ ತರಗತಿಗೆ ಪ್ರವೇಶ ಪಡೆದಿರುವ 12 ವರ್ಷದ ಆಕಾಶ ಛಲವಾದಿ ಎಂಬ ಬಾಲಕನ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಆಕಾಶ್ ತಾಯಿ ದ್ರಾಕ್ಷಾಯಿಣಿ ಮಗನಿಗೆ ಕಿಡ್ನಿ ನೀಡಲು ಸಿದ್ಧ್ದದ್ದರೂ ರಕ್ತದ ಗುಂಪು ಬೇರೆ ಬೇರೆಯಾಗಿದ್ದರಿಂದ ತಾಯಿಯ ಕಿಡ್ನಿ ಮಗ ಆಕಾಶ್ ಛಲವಾದಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಈ ಎರಡೂ ಕುಡುಂಬಗಳು ಡಯಾಲಿಸಿಸ್​ಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ಆವರಣದಲ್ಲಿರುವ ಯೂರಾಲಜಿ ಆಸ್ಪತ್ರೆಗೆ ತಿಂಗಳಿಗೊಮ್ಮೆ ತೆರಳುತ್ತಿದ್ದವು. ಈ ವೇಳೆ ಅಲ್ಲಿನ ವೈದ್ಯರು ಪರಸ್ಪರ ಪರಿಚಯ ಮಾಡಿಕೊಟ್ಟು ಆಕಾಶ್ ತಾಯಿ ದ್ರಾಕ್ಷಾಯಿಣಿ ಅವರ ಕಿಡ್ನಿಯನ್ನು ಮೋಹನ್ ನಾಯ್್ಕಗೆ, ಮೋಹನ್ ನಾಯ್್ಕ ಪತ್ನಿ ಅಂಬಿಕಾ ಅವರ ಕಿಡ್ನಿ ಆಕಾಶ್​ಗೆ ಹೊಂದಾಣಿಕೆಯಾಗಲಿದೆ ಎಂಬ ವಿಷಯ ತಿಳಿಸಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆ ಇದ್ದರೆ ಕಿಡ್ನಿಯನ್ನು ಅದಲು ಬದಲು ದಾನ ಮಾಡುವಂತೆ ಸಲಹೆ ನೀಡಿದ್ದಾರೆ.  ವೈದ್ಯರ ಸಲಹೆ ಮೇರೆಗೆ ಮೋಹನ್ ನಾಯ್್ಕ ಪತ್ನಿ ಅಂಬಿಕಾ ಬಾಗಲಕೋಟೆಯ ಆಕಾಶ್​ಗೆ ಹಾಗೂ ದ್ರಾಕ್ಷಾಯಿಣಿ ಅವರು ಮೋಹನ್ ನಾಯ್್ಕಗೆ ಕಿಡ್ನಿ ದಾನ ಮಾಡುತ್ತಿದ್ದಾರೆ.

    ಎರಡೂ ಕುಟುಂಬಗಳು ಕೂಲಿ ಮಾಡಿ ಜೀವನ ನಡೆಸುತ್ತಿರುವುದರಿಂದ ಹಣ ನೀಡಿ ಕಿಡ್ನಿ ಖರೀದಿಸಲು ಸಾಧ್ಯವಿರಲಿಲ್ಲ. ಪ್ರತಿ ತಿಂಗಳೂ ಡಯಾಲಿಸಿಸ್ ಸೇರಿದಂತೆ ಇತರೆ ಔಷಧಕ್ಕೆ ಖರ್ಚಾಗುತ್ತಿದ್ದ 15 ಸಾವಿರ ರೂ. ಹೊಂದಿಸುವ ಸಾಮರ್ಥ್ಯ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪರಸ್ಪರ ಕಿಡ್ನಿ ದಾನ ಮಾಡುವಂತೆ ವೈದ್ಯರು ನೀಡಿದ ಸಲಹೆ ಎರಡು ಕುಟುಂಬಗಳ ಬದುಕಿಗೆ ಆಶಾಕಿರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts