More

    ಜಿಲ್ಲೆಯ ವಿವಿಧೆಡೆ ಕೆಂಪೇಗೌಡ ಜಯಂತಿ ಆಚರಣೆ, ಸೇವಾ ಕಾರ್ಯಗಳ ಮೂಲಕ ಸ್ಮರಣೆ

    ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

    ಜಿಲ್ಲಾ ಕೇಂದ್ರದಲ್ಲಿನ ತಾಲೂಕು ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆರೆ-ಕುಂಟೆ, ದೇವಾಲಯಗಳು, ವಿವಿಧ ವ್ಯಾಪಾರ ಬಡಾವಣೆಗಳ ನಿರ್ಮಾಣ ಮೂಲಕ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಬಣ್ಣಿಸಿದರು.

    ತಹಸೀಲ್ದಾರ್ ನಾಗಪ್ರಶಾಂತ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮತ್ತಿತರರು ಇದ್ದರು.
    ಸಂಘದಿಂದ ಆಚರಣೆ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದಿಂದ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಉಪಾಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಚಿನ್ನಪ್ಪರೆಡ್ಡಿ, ಮುಖಂಡರಾದ ಪಿ.ಎನ್.ಮೋಹನ್, ನಾರಾಯಣಸ್ವಾಮಿ, ಆರ್.ಎ.ನಾರಾಯಣಸ್ವಾಮಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದರು.

    ಮಂಚನಬಲೆಯಲ್ಲಿ ಆಚರಣೆ : ತಾಲೂಕಿನ ಮಂಚನಬಲೆಯ ಗ್ರಾಪಂ ಆವರಣದಲ್ಲಿ ಮಂಚನಬಲೆ ಒಕ್ಕಲಿಗರ ಸಂಘ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದಿಂದ ಜಯಂತಿ ನಡೆಯಿತು. ಬೆಂಗಳೂರು ನಗರವನ್ನು ನಿರ್ಮಿಸಿ, ಬೆಂದಕಾಳೂರು ಎಂಬ ಹೆಸರಿಟ್ಟ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅಲ್ಲಿನ ಚಿಕ್ಕಪೇಟೆ, ಬಿನ್ನಿಪೇಟೆ, ತಿಗಳರ ಪೇಟೆ, ಚಾಮರಾಜಪೇಟೆ, ಅರಳೇಪೇಟೆ, ಅಕ್ಕಿಪೇಟೆ, ದೊಡ್ಡಪೇಟೆ, ನಗರ್ತರಪೇಟೆ, ಬಳ್ಳಾಪುರ ಪೇಟೆ, ಸುಣ್ಣಕಲ್ಲು ಪೇಟೆ, ಸುಲ್ತಾನಪೇಟೆ, ತರಗುಪೇಟೆ, ಬಳೆಪೇಟೆ, ಕುಂಬಾರರಪೇಟೆಗಳು ನಾಡಪ್ರಭು ವಿವಿಧ ಸಮುದಾಯಗಳಿಗೆ ನೀಡಿದ ಆದ್ಯತೆಯನ್ನು ಸಾರುತ್ತವೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಟಿ.ಎಸ್.ನಾಗರಾಜ್, ಮುಖಂಡರಾದ ಸದಾಶಿವಾರೆಡ್ಡಿ, ವೆಂಕಟನಾರಾಯಣಪ್ಪ, ಎಂ.ಎಸ್.ಶ್ರೀಧರ್, ವೆಂಕಟೇಶ್, ಎಂ.ರಾಮಕೃಷ್ಣಾರೆಡ್ಡಿ, ಟಿ.ಆರ್.ಹರೀಶ್‌ಕುಮಾರ್, ಅಭಿಷೇಕ್, ರಮೇಶ್, ಮಂಜುನಾಥ್, ಬೈಯಣ್ಣ, ಮುನಿಕೃಷ್ಣ, ಗುಂಡ್ಲಗುರ್ಕಿ ರಮೇಶ್, ಜಯಚಂದ್ರ, ಸುಮನ್, ರಾಧಾಮಣಿ, ವಿಮಲಮ್ಮ ಇತರರಿದ್ದರು.

    ಸಸಿ ನೆಟ್ಟು ಆಚರಣೆ : ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥ್ ರೆಡ್ಡಿ ನೇತೃತ್ವದಲ್ಲಿ ನಗರದ ವಿವಿಧೆಡೆ ಸಸಿ ನೆಡುವ ಮೂಲಕ ಜಯಂತಿ ಆಚರಿಸಲಾಯಿತು. ಗಿಡಕ್ಕೆ ನೀರುಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಮಹನೀಯರ ಕಾರ್ಯಕ್ರಮಗಳನ್ನು ಸೇವಾ ಕಾರ್ಯಕ್ರಮಗಳೊಂದಿಗೆ ಆಚರಿಸಬೇಕು. ಆಗ ಮಾತ್ರ ಸ್ಮರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
    ತಹಸೀಲ್ದಾರ್ ನಾಗಪ್ರಶಾಂತ್, ಸಬ್ ಇನ್‌ಸ್ಪೆಕ್ಟರ್ ಚೇತನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts