More

    ಜಿಲ್ಲೆಯ ಜವಾಬ್ದಾರಿ ಹೊತ್ತ ನಾರಿಯರು

    ಮಂಜುನಾಥ ಅಂಗಡಿ ಧಾರವಾಡ

    ಜಿಲ್ಲೆಯಲ್ಲಿ ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳು ಸಮರ್ಥ ನಾಯಕತ್ವ ವಹಿಸಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯಿಂದ ಪಾದರಸದಂತೆ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಜನರ ಮನ ಗೆದ್ದಿದ್ದಾರೆ.

    ದೀಪಾ ಚೋಳನ್: ಮಾರ್ಚ್ ಮೊದಲ ವಾರ ಆಗಷ್ಟೇ ರಾಜ್ಯದಲ್ಲಿ ಕರೊನಾ ಸದ್ದು ಕೇಳುತ್ತಿತ್ತು. ಜಾಗೃತರಾದ ಜಿಲ್ಲಾಧಿಕಾರಿ ದೀಪಾ, ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ಸೋಂಕು ಶಂಕಿತರ ಐಸೋಲೇಷನ್​ಗಾಗಿ 10 ಬೆಡ್​ಗಳ ಪ್ರತ್ಯೇಕ ವಾರ್ಡ್ ನಿರ್ವಿುಸಿದರು.

    ಲಾಕ್​ಡೌನ್ ಜಾರಿಯಾಗುತ್ತಿದ್ದಂತೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಂಡರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಎಲ್ಲ ವಾರ್ಡ್​ಗಳಿಗೂ ತಳ್ಳುವ ಗಾಡಿ, ಆಟೋಗಳ ಮೂಲಕ ತರಕಾರಿ ಪೂರೈಸಲು ಅವಕಾಶ ನೀಡಿ, ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದನ್ನು ಕಡಿಮೆಗೊಳಿಸಿದರು.

    ಜನ ಎಚ್ಚೆತ್ತುಕೊಳ್ಳದಿದ್ದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತದಿಂದ ಜಾಗೃತಿ ಕಾರ್ಯಕ್ರಮ ರೂಪಿಸಲಾಯಿತು. ವಿವಿಧ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರು. ಕರೊನಾ ಸೋಂಕು ಹರಡುವಿಕೆ ತಡೆ, ಆರೋಗ್ಯ ಸೇವೆ, ಇತರ ಕಾರ್ಯಗಳ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಿತ್ಯ ಸಭೆ ನಡೆಸಿ, ತೀರ್ವನಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡರು.

    ದೆಹಲಿಯ ತಬ್ಲಿಘಿ ಸಮಾರಂಭದ ನಂತರ ಕರೊನಾ ಬಗ್ಗೆ ಧಾರ್ವಿುಕ ಸಾಮರಸ್ಯ ಹಾಳು ಮಾಡುವಂಥ ಯತ್ನ ನಡೆದವು. ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸಿದರು. ಅಂಥ ಕೆಲ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿಯೂ ಆಗಿದ್ದು ವಿಶೇಷ.

    ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಯಾದಾಗ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನವಾಗುವ ಕಾರ್ಯ ಕೈಗೊಂಡರು. ಮಹಿಳಾ ಜನಧನ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆ ಜರುಗಿಸಿದರು.

    ವಿಜಯವಾಣಿ ನೇರ ಫೋನ್​ಇನ್: ಕರೊನಾ ತಡೆಗೆ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ್ದು ‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮ. ಜಿಲ್ಲಾಧಿಕಾರಿ ದೀಪಾ ಚೋಳನ್ ಭಾಗಿಯಾಗಿ, ಆತಂಕಗೊಂಡವರಿಗೆ ಅಪ್ಯಾಯಮಾನ ಸಲಹೆಗಳನ್ನು ನೀಡಿದರು. ಮನೆಯಲ್ಲಿರುವುದು ಹಾಗೂ ಕೈ ತೊಳೆಯುವುದರ ಮಹತ್ವ, ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದ್ದರು. ಕ್ವಾರಂಟೈನ್​ಗೆ ಒಳಪಟ್ಟವರು ಹೊರಬಂದರೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದರು. ಕರೊನಾ ಬಗೆಗಿನ ಆತಂಕ, ಗೊಂದಲ, ಊಹಾಪೋಹಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಿ ಕರೆ ಮಾಡಿದವರಿಗೆ ಧೈರ್ಯ ತುಂಬಿದ್ದರು.

    ಎಸ್​ಪಿ ವರ್ತಿಕಾ ಕಟಿಯಾರ್: ಧಾರವಾಡದ ಮತ್ತೋರ್ವ ಹಿರಿಯ ಮಹಿಳಾ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠೆ (ಎಸ್​ಪಿ) ವರ್ತಿಕಾ ಕಟಿಯಾರ್. ಜಿಲ್ಲೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಹೋಬಳಿಗಳು, ಜಿಲ್ಲೆಯನ್ನು ಸಂರ್ಪಸುವ ಪ್ರಮುಖ ರಸ್ತೆಗಳಲ್ಲಿನ ಚೆಕ್​ಪೋಸ್ಟ್​ಗಳಿಗೆ ಸ್ವತಃ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನಗತ್ಯವಾಗಿ ಸುತ್ತಾಡುವ ಸವಾರರ ಬೈಕ್​ಗಳನ್ನು ಜಪ್ತಿ ಮಾಡಿ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಲಾರಿ ಚಾಲಕ-ಕ್ಲೀನರ್​ಗಳು ಸೇರಿ ಹಲವರು ಲಾಕ್​ಡೌನ್ ಪರಿಣಾಮವಾಗಿ ಅಲ್ಲಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಊಟೋಪಚಾರ ಕೂಡ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಎಸ್​ಪಿ ವರ್ತಿಕಾ ಕಟಿಯಾರ್, ಇಲಾಖೆ ವತಿಯಿಂದಲೇ ಬಿಸಿ ಬಿಸಿ ಅಡುಗೆ ಮಾಡಿಸಿ ತರಿಸಿ, ಸ್ವತಃ ಸೌಟು ಹಿಡಿದು ಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಗಲಿರುಳೆನ್ನದೆ ದುಡಿಯುವ ಅಧೀನ ಅಧಿಕಾರಿ-ಸಿಬ್ಬಂದಿ ವರ್ಗದವರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಂಡು ಕರೊನಾ ವಿರುದ್ಧದ ಹೋರಾಟದಲ್ಲಿ ಸಮರ್ಥವಾಗಿ ತೊಡಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts