More

    ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಹಾವೇರಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 22ರಿಂದಲೇ ಸಂಪೂರ್ಣವಾಗಿ ಡಿಪೋ ಸೇರಿದ್ದ ಸಾರಿಗೆ ಸಂಸ್ಥೆಯ ಬಸ್​ಗಳು ಸೋಮವಾರ ಮರಳಿ ರಸ್ತೆಗಿಳಿದಿವೆ.

    ಸೋಮವಾರದಿಂದ ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರಿಂದ 65ಬಸ್​ಗಳ ಸಂಚಾರವನ್ನು ಬೆಳಗ್ಗೆಯಿಂದ ಆರಂಭಿಸಲಾಯಿತು. ಮಧ್ಯಾಹ್ನದ ವೇಳೆಗೆ ಮತ್ತಷ್ಟು ಬೇಡಿಕೆ ಬಂದಿದ್ದರಿಂದ 8ಹೆಚ್ಚುವರಿ ಬಸ್​ಗಳ ಓಡಾಟವನ್ನು ಆರಂಭಿಸಲಾಯಿತು. ಇದರಿಂದ ಗ್ರಾಮೀಣ ಪ್ರದೇಶಗಳಿಂದ ದುಡಿಯಲು ಬಂದು ನಗರಗಳಲ್ಲಿ ಲಾಕ್ ಆಗಿದ್ದ ಕಾರ್ವಿುಕರು ಬೆಳ್ಳಂಬೆಳಗ್ಗೆ ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ಬಸ್​ನಿಲ್ದಾಣಕ್ಕೆ ಆಗಮಿಸಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

    ಹೊರಜಿಲ್ಲೆಯವರ ಕ್ವಾರಂಟೈನ್: ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವ ಕಾರ್ವಿುಕರನ್ನು ಜಿಲ್ಲೆಯ 4 ತಾಣಗಳಲ್ಲಿ ಇಳಿಸಿ ಕ್ವಾರೆಂಟೈನ್ ವಾಚ್​ಆಪ್​ನಲ್ಲಿ ಮಾಹಿತಿ ನೋಂದಾಯಿಸಿಕೊಂಡು ಅವರವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

    ಬೆಂಗಳೂರಿನಿಂದ ಉತ್ತರಕರ್ನಾಟಕ ಭಾಗಕ್ಕೆ 35 ಬಸ್​ಗಳು ಹೊರಟಿವೆ. ಭಾನುವಾರ ಹಾವೇರಿಗೆ ಎರಡು ಬಸ್​ಗಳು ಬಂದಿವೆ. ಸೋಮವಾರ ಎಂಟು ಬಸ್​ಗಳು ಬರಲಿವೆ ಎಂದು ಮಾಹಿತಿ ದೊರೆತಿದೆ.

    ಈ ಪೈಕಿ ಹಾವೇರಿ ಜಿಲ್ಲೆಗೆ ಬರುವ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ಪ್ರಯಾಣಿಕರನ್ನು ಜಿಲ್ಲೆಯ ಮಾಕನೂರು ಚೆಕ್​ಪೋಸ್ಟ್, ರಾಣೆಬೆನ್ನೂರ, ಹಾವೇರಿ ಹಾಗೂ ಶಿಗ್ಗಾಂವಿಯಲ್ಲಿ ಇಳಿಸಿಕೊಂಡು ಅಲ್ಲಿಂದ ಕ್ವಾರೆಂಟೈನ್ ವಾಚ್ ಆಪ್ ನಲ್ಲಿ ನೋಂದಾಯಿಸಿಕೊಂಡು ಸ್ಥಳೀಯ ಬಸ್​ಗಳಲ್ಲಿ ಅವರವರ ಊರಿಗೆ ಕಳುಹಿಸಿಕೊಡಲಾಯಿತು.

    ಪ್ರತಿ ಪ್ರಯಾಣಿಕರಿಗೆ ಹೋಮ್ ಕ್ವಾರೆಂಟೈನ್ ಸೀಲ್​ಹಾಕಿ 14ದಿನ ಗೃಹಪ್ರತ್ಯೇಕತೆಯಲ್ಲಿರಿಸಿ ನಿಗಾ ವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದರು.

    ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳು ಜಿಲ್ಲೆಯೊಳಗೆ ಬೆಳಗ್ಗೆಯೇ ಆರಂಭಗೊಂಡವು. ಪ್ರತಿ ತಾಲೂಕು ಕೇಂದ್ರದಿಂದ ಇನ್ನೊಂದು ತಾಲೂಕು ಕೇಂದ್ರಕ್ಕೆ ಹಾಗೂ ತಾಲೂಕು ಕೇಂದ್ರದಿಂದ ಹೋಬಳಿ ಕೇಂದ್ರಗಳಿಗೆ, ದೊಡ್ಡ ದೊಡ್ಡ ಗ್ರಾಮಗಳಿಗೆ ಆರಂಭಿಕವಾಗಿ ಬಸ್ ಸಂಚಾರ ಆರಂಭಿಸಲಾಯಿತು.

    ಪ್ರತಿ ತಾಲೂಕಿನ ಡಿಪೋದಿಂದ 10ರಿಂದ 15ಬಸ್​ಗಳ ಸಂಚಾರ ಆರಂಭಿಸಲಾಯಿತು. ಜನರ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆಗಳನ್ನು ಹೆಚ್ಚಳ ಮಾಡಲಾಗಿದೆ. ಬಸ್​ನಲ್ಲಿ 24ರಿಂದ 25ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್, ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಬಸ್​ನಿಲ್ದಾಣದಲ್ಲಿ ಪ್ರಯಾಣಿಕರ ಕೈ ತೊಳೆಯಲು ಸೋಪು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.

    ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರ ಆರಂಭಿಸಲಾಗಿದೆ. ಬೇಡಿಕೆ ಇರುವ ಕಡೆಗಳಲ್ಲಿ ಮಾತ್ರ ಬಸ್ ಬಿಡಲಾಗಿದೆ. ಜಿಲ್ಲೆಗೆ ಒಂದು ಸಂಚಾರಿ ಫೀವರ್ ಕ್ಲಿನಿಕ್ ಬಸ್​ನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಬಸ್ ಹುಬ್ಬಳ್ಳಿಯಲ್ಲಿ ಸಿದ್ಧವಾಗಿದ್ದು, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಮಂಗಳವಾರ ಇಲ್ಲವೇ ಬುಧವಾರದಿಂದ ಜಿಲ್ಲೆಯಲ್ಲಿ ಸಂಚಾರಿ ಫೀವರ್ ಕ್ಲಿನಿಕ್ ಬಸ್ ಸಹ ಸಂಚರಿಸಲಿದೆ.
    | ಜಗದೀಶ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts