More

    ಜಿಲ್ಲೆಯಲ್ಲಿ 54 ಕೆಎಫ್​ಡಿ ಸೋಂಕಿತರು

    ಕಾರವಾರ/ಜೊಯಿಡಾ/ಸಿದ್ದಾಪುರ: ಸಾಕಷ್ಟು ಮುನ್ನೆಚ್ಚರಿಕೆಯ ಬಳಿಕವೂ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವೃದ್ಧಿಗೊಳ್ಳುತ್ತಲೇ ಇದೆ. ಶನಿವಾರ ಜಿಲ್ಲೆಯಲ್ಲಿ ಹೊಸದಾಗಿ 6 ಪ್ರಕರಣಗಳು ಪತ್ತೆಯಾಗಿದ್ದು, ಕಾಯಿಲೆ ಜೊಯಿಡಾ ತಾಲೂಕಿಗೂ ವಿಸ್ತರಿಸಿರುವುದು ಶಿವಮೊಗ್ಗ ಕೆಎಫ್​ಡಿ ಪ್ರಯೋಗಾಲಯದಲ್ಲಿ ಖಚಿತವಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ.

    ಹೊಸ ಮೂರು ಪ್ರಕರಣ: ಸಿದ್ದಾಪುರ ತಾಲೂಕಿನ ಕೊರ್ಲಕೈ ಹಾಗೂ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರವ್ಯಾಪ್ತಿಯಲ್ಲಿ ಮತ್ತೆ ಮೂವರಲ್ಲಿ ಕಾಯಿಲೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ತಾಲೂಕಿನಲ್ಲಿ ಇಂದಿನವರೆಗೆ ಒಟ್ಟು 36 ಜನರಲ್ಲಿ ಮಂಗನ ಕಾಯಿಲೆ ಕಾಣಿಕೊಂಡಂತಾಗಿದೆ. ಈಗಾಗಲೇ ಒಬ್ಬರು ಮೃತಪಟ್ಟಿದ್ದರೆ 29 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ 3ಜನ, ಶಿವಮೊಗ್ಗದಲ್ಲಿ 2 ಜನ ಹಾಗೂ ಸಿದ್ದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಮೂವರಿಗೆ ದೃಢ: ಜೊಯಿಡಾ ತಾಲೂಕಿನ ಜೊಯಿಡಾ ಮತ್ತು ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಜನರಿಗೆ ಮಂಗನಕಾಯಿಲೆ ಬಂದಿರುವುದು ವೈದ್ಯಕೀಯ ಪರೀಕ್ಷೆ ವರದಿಯಿಂದ ದೃಢಪಟ್ಟಿದೆ.

    ಜೊಯಿಡಾದಲ್ಲಿ ಒಬ್ಬ ಮಹಿಳೆ, ಬಾಪೇಲಿ ಕ್ರಾಸ್​ನ ಮಹಿಳೆ ಹಾಗೂ ಕರಂಭಾಳದ ಒಬ್ಬ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದು, ಇವರಿಗೆ ಕೆಎಫ್​ಡಿ ಇರುವುದು ದೃಢಪಟ್ಟಿದೆ. ಒಬ್ಬರು ಗುಣಮುಖರಾಗಿದ್ದು, ಉಳಿದಿಬ್ಬರಿಗೆ ಕಾರವಾರದ ಕ್ರಿಮ್್ಸ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಆರೋಗ್ಯ ಇಲಾಖೆಯ ನಿರ್ಲಕ್ಷ್ಯ: ಮಾ. 5 ರಂದೇ ಜೊಯಿಡಾ ತಾಲೂಕಿನ ಬಾಪೇಲಿ ಮತ್ತು ಅಂಬರ್ಡಾ ಮುಂತಾದ ಕಡೆ ಮಂಗಗಳು ಸಾವನ್ನಪ್ಪುತ್ತಿರುವ ಬಗ್ಗೆ ತಿಳಿದು ಬಂದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ, ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ನಡೆಸಿ 45 ದಿನ ಕಳೆದಿದ್ದರೂ ಇಂದಿಗೂ ವರದಿ ಬಂದಿಲ್ಲ. ಈ ನಿರ್ಲಕ್ಷ್ಯಂದಾಗಿಯೇ ಮಂಗನ ಕಾಯಿಲೆಯಿಂದ ಜನ ಆಸ್ಪತ್ರೆ ಸೇರುವಂತಾಗಿದೆ ಎಂಬ ಆರೋಪವಿದೆ. ಬಾಪೇಲಿಯ ಒಂದೇ ಕುಟುಂಬದ ನಾಲ್ಕು ಜನ ಜ್ವರದಿಂದ ಬಳಲುತ್ತಿದ್ದು, ಇವರಲ್ಲಿ ವಯಸ್ಸಾಗಿರುವ ಒಬ್ಬ ಮಹಿಳೆ 15 ದಿನದ ಹಿಂದೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈ ಕುಟುಂಬದ ಒಬ್ಬ ಸದಸ್ಯೆಗೆ ಈಗ ಮಂಗನಕಾಯಿಲೆ ದೃಢಪಟ್ಟಿರುವುದರಿಂದ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜೊಯಿಡಾ ತಾಲೂಕಿನ ದೆವುಳ್ಳಿಯಲ್ಲಿ ಮಾತ್ರ ಕೆಎಫ್​ಡಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಉಳಿದೆಡೆ ಇನ್ನೂ ಈ ಚುಚ್ಚುಮದ್ದು ನೀಡುವ ಕಾರ್ಯ ಆಗಿಲ್ಲ.

    ಇನ್ನು ಉಚಿತ ಚಿಕಿತ್ಸೆ

    ಉತ್ತರ ಕನ್ನಡದ ಮಂಗನ ಕಾಯಿಲೆ ಪೀಡಿತರಿಗೆ ಚಿಕಿತ್ಸೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ಉಚಿತವಾಗಿ ನೆರವೇರಿಸಲು ಆರೋಗ್ಯ ಕರ್ನಾಟಕದಡಿ ಕೋಡ್ ಸೃಜಿಸಲಾಗಿದೆ ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಆರೋಗ್ಯ ಕರ್ನಾಟಕದಡಿ ಮಣಿಪಾಲ ಆಸ್ಪತ್ರೆಯಲ್ಲಿ ಶಿವಮೊಗ್ಗ ಜಿಲ್ಲೆಯವರಿಗೆ ಕ್ಯಾಶ್​ಲೆಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಉತ್ತರ ಕನ್ನಡ ಜಿಲ್ಲೆಯವರಿಗೆ ಈ ಸೌಲಭ್ಯವಿರಲಿಲ್ಲ. ಏ.14 ರಂದು ಹೆಬ್ಬಾರ ಅವರು ಸಿದ್ದಾಪುರದಲ್ಲಿ ಸಭೆ ನಡೆಸಿದಾಗ ಈ ಭರವಸೆ ನೀಡಿದ್ದರು. ಈ ಸಂಬಂಧ ಸಿಎಂ ಹಾಗೂ ಆರೋಗ್ಯ ಸಚಿವರ ಜತೆ ಮಾತನಾಡಿ ಕ್ರಮ ವಹಿಸಿದ್ದಾರೆ. ಅಲ್ಲದೆ, ಮಂಗನ ಕಾಯಿಲೆ ಪೀಡಿತರ ಚಿಕಿತ್ಸೆಗಾಗಿ ವೆಂಟಿಲೇಷನ್ ಹೊಂದಿರುವ ಆಂಬುಲೆನ್ಸ್​ನ್ನು ತಕ್ಷಣಕ್ಕೆ ಮಂಜೂರು ಮಾಡಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ, ದನಕರುಗಳಿಗೆ ಅಗತ್ಯ ಔಷಧ ನೀಡಲು ಪಶು ವೈದ್ಯಕೀಯ ಇಲಾಖೆಗೆ ಜಿಲ್ಲಾಡಳಿತದಿಂದ 87 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿಸಲಾಗಿದೆ ಎಂದು ಹೆಬ್ಬಾರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

    ಮಂಗನ ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ಭಾಗದ ಜನರಲ್ಲಿ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಲಾಗಿದೆ. ಮಂಗ ಸತ್ತ ಪ್ರದೇಶದ 50 ಮೀಟರ್ ವ್ಯಾಪ್ತಿ ಹಾಗೂ ಸೋಂಕಿತರ ಮನೆಯಂಗಳದಲ್ಲಿ ಮೆಲಾಥಿಯಾನ್ ಸಿಂಪಡಿಸಲಾಗುತ್ತಿದೆ.

    |ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts