More

    ಜಿಲ್ಲೆಯಲ್ಲಿ ಶೇ.98 ರಷ್ಟು ಸಾಧನೆ

    ಗದಗ: ರೈತರು ಬೆಳೆದ ಬೆಳೆಯ ನಿಖರ ಮಾಹಿತಿ ಪಡೆಯಲು ಕೃಷಿ ಇಲಾಖೆ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಬಳಸಿ ಬೆಳೆ ಸಮೀಕ್ಷೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಶೇ.98.51ರಷ್ಟು ಸಮೀಕ್ಷೆಯಾಗಿದೆ.

    ಕಳೆದ ವರ್ಷ ಆಗಸ್ಟ್​ನಿಂದ ಮುಂಗಾರು ಮತ್ತು ಹಿಂಗಾರು ಬೆಳೆಗಳ ಸಮೀಕ್ಷೆಯನ್ನು ಮೊಬೈಲ್ ಆಪ್ ಮೂಲಕ ಮಾಡಲಾಗುತ್ತಿದೆ. ಸಮೀಕ್ಷೆ ಮಾಡಲು ಮೊದಲು ರೈತರಿಗೆ ಅವಕಾಶ ನೀಡಲಾಗುತ್ತಿದೆ. ರೈತರು ಮಾಡಿಕೊಳ್ಳದಿದ್ದರೆ ಆಯಾ ಗ್ರಾಮಗಳಲ್ಲಿರುವ ವಿದ್ಯಾವಂತರಿಗೆ ಸಮೀಕ್ಷೆ ಮಾಡಲು ಅವಕಾಶ ನೀಡಲಾಗುತ್ತಿದೆ.

    ಜಿಲ್ಲೆಯಲ್ಲಿ ಒಟ್ಟು 3 ಲಕ್ಷಕ್ಕೂ ಅಧಿಕ ಪ್ಲಾಟ್​ಗಳಿವೆ. (ಒಂದು ಪ್ಲಾಟ್ ಅಂದರೆ ಒಂದು ಸರ್ವೆ ನಂಬರ್). ಒಂದು ಪ್ಲಾಟ್​ನಲ್ಲಿ ಒಂದು ಬೆಳೆ ಇದ್ದರೆ ಪ್ರತಿ ಪ್ಲಾಟ್​ಗೆ 10 ರೂ., ಎರಡು ಬೆಳೆಗಳು ಇದ್ದರೆ ಪ್ರತಿ ಪ್ಲಾಟ್​ಗೆ 20 ರೂ. ಗೌರವ ಧನವನ್ನು ಸಮೀಕ್ಷೆ ಮಾಡುವವರಿಗೆ ನೀಡಲಾಗುತ್ತಿದೆ.

    ಬೆಳೆ ಸಮೀಕ್ಷೆ ಆಪ್​ನಲ್ಲಿ ರೈತನ ಹೆಸರು, ಜಮೀನಿನ ಸರ್ವೆ ನಂಬರ್, ಬೆಳೆಯ ಮೂರು ಫೋಟೋಗಳು ಹಾಗೂ ಈ ವರ್ಷದಿಂದ ಆಧಾರ್ ನಂಬರ್ ನಮೂದಿಸಬೇಕಾಗುತ್ತದೆ. ಹಿಂಗಾರಿನಲ್ಲಿ 20 ಸಾವಿರ ಪ್ಲಾಟ್​ಗಳನ್ನು ರೈತರೇ ಸಮೀಕ್ಷೆ ಮಾಡಿದ್ದಾರೆ. ಜಿಲ್ಲೆಯ ರೈತರು ಸಮೀಕ್ಷೆ ಮಾಡಲು ಹಿಂದೇಟು ಹಾಕಿದ್ದರಿಂದ ಕೃಷಿ ಇಲಾಖೆ, ಕಂದಾಯ, ರೇಷ್ಮೆ, ತೋಟಗಾರಿಕೆ ಇಲಾಖೆಯ ಸಹಕಾರದಡಿ ಸಮೀಕ್ಷೆ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಫೆ.15ರೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

    ಸಿಗಲಿದೆ ನಿಖರ ಮಾಹಿತಿ: ಮೊಬೈಲ್ ಆಪ್ ಸಮೀಕ್ಷೆ ರೈತರಿಗೆ ವರದಾನವಾಗಿದ್ದು, ಬೆಳೆ ಪರಿಹಾರ, ಬೆಳೆ ಹಾನಿ, ವಿಮೆ ಮತ್ತಿತರ ಯೋಜನೆ ಪಡೆಯಲು ರೈತರು ಕಚೇರಿಗೆ ಎಡತಾಕುವ ಪ್ರಶ್ನೆಯೇ ಇಲ್ಲ. ರೈತರು ಯಾವ ಬೆಳೆಯನ್ನು ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಬರ, ನೆರೆ ಬಂದು ಬೆಳೆ ನಷ್ಟವಾದಾಗ ಯಾವ ಬೆಳೆ, ಎಷ್ಟು ಪ್ರದೇಶದಲ್ಲಿ ನಷ್ಟವಾಗಿದೆ ಎಂಬ ಮಾಹಿತಿಯನ್ನು ನಿಖರವಾಗಿ ಆಪ್ ಮೂಲಕ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿ ಸದ್ಯಕ್ಕೆ ಶೇ. 98.51ರಷ್ಟು ಸಾಧನೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಶೇ.100 ಸಾಧನೆ ಮಾಡಲಾಗುವುದು.
    |ರುದ್ರೇಶಪ್ಪ ಜಂಟಿ ನಿರ್ದೇಶಕ, ಕೃಷಿ ಇಲಾಖೆ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts