More

    ಜಿಲ್ಲೆಯಲ್ಲಿ ಶಾಂತಿಯುತ ಮತದಾನ

    ಕಾರವಾರ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಬುಧವಾರ ಜಿಲ್ಲೆಯ 26 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಿತು.

    13148 ಮತದಾರರ ಪೈಕಿ 9346 ಮತದಾರರು(ಶೇ.71.08) ತಮ್ಮ ಹಕ್ಕು ಚಲಾಯಿಸಿದರು.

    ಕೋವಿಡ್-19 ಮಾರ್ಗಸೂಚಿಯಂತೆ ಎಲ್ಲೆಡೆ ಥರ್ಮಲ್ ಸ್ಕ್ರೀನಿಂಗ್, ವ್ಯವಸ್ಥೆ ಮಾಡಲಾಗಿತ್ತು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಮತಗಟ್ಟೆ ಪ್ರವೇಶಿಸುವ ಪ್ರತಿಯೊಬ್ಬರ ದೇಹದ ಉಷ್ಣಾಂಶ ದಾಖಲಿಸಿದರು. ಪದವೀಧರರ ಪರಸ್ಪರ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ಮತದಾನ ಮಾಡಿದರು. ಮತ ಕೇಂದ್ರಗಳ ಹೊರಗೆ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಟೇಬಲ್ ಹಾಕಿ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿಕೊಡುವ ಕಾರ್ಯ ಮಾಡುತ್ತಿರುವುದು ಕಂಡುಬಂತು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಕಾರವಾರ ಮತಗಟ್ಟೆಗೆ ಬೆಳಗ್ಗೆ ತೆರಳಿ ವ್ಯವಸ್ಥೆ ವೀಕ್ಷಿಸಿದರು. ಪದವೀಧರ ಕ್ಷೇತ್ರದ ವೀಕ್ಷಕಿ ಹಾಗೂ ಸಾಂಖ್ಯಿಕ ಇಲಾಖೆಯ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಯಲ್ಲಾಪುರ ಮತಗಟ್ಟೆಗೆ ತೆರಳಿ ವೀಕ್ಷಿಸಿದರು.

    ಮಾಜಿ ಶಾಸಕರ ತಕರಾರು

    ಭಟ್ಕಳ ಮತಗಟ್ಟೆಯಲ್ಲಿ 968 ಮತದಾರರು ಇದ್ದರೂ ಎರಡು ಬೂತ್ ತೆರೆಯುವ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಜೆ.ಡಿ. ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಒಂದು ವೇಳೆ 968 ಮತದಾರರು ಮತದಾನಕ್ಕೆ ಆಗಮಿಸಿದರೆ ಗಂಟೆಗೆ ಸರಾಸರಿ 90 ಜನರು ಮತಚಲಾಯಿಸಬೇಕು. ಒಬ್ಬರಿಗೆ 1 ನಿಮಿಷ ತೆಗೆದುಕೊಂಡರು ಗಂಟೆಗೆ ಕೇವಲ 60 ಜನರು ಮತದಾನ ಮಾಡಬಹುದು. ಹೀಗಿದ್ದಾಗ ಒಂದೇ ಬೂತ್​ನ ವ್ಯವಸ್ಥೆ ಮಾಡಿದ್ದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಉಪವಿಭಾಗಾಧಿಕಾರಿ ಈಗಲೇ ಇನ್ನೊಂದು ಬೂತ್ ತೆರೆಯುವುದು ಸಾಧ್ಯವಿಲ್ಲ. ಈಗಿನ ವ್ಯವಸ್ಥೆಯಲ್ಲೆ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

    ಭಟ್ಕಳದಲ್ಲಿ ನೂಕು ನುಗ್ಗಲು

    ಪಶ್ಚಿಮ ಪದವೀಧರರ ಕ್ಷೇತ್ರದ ಭಟ್ಕಳ ಬೂತ್​ನಲ್ಲಿ ಮತದಾನದ ವೇಳೆ ನೂಕು ನುಗ್ಗಲು ಉಂಟಾಗಿ ಮತದಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸುಮಾರು 10 ಗಂಟೆಯ ಬಳಿಕ ಮತದಾನ ಬಿರಸು ಪಡೆದುಕೊಂಡಿತು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು. ಈ ಕುರಿತು ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ದೂರು ಹೋಯಿತು.

    ಆರ್​ವಿಡಿ., ಘೊಟ್ನೇಕರ ಮತದಾನ

    ಹಳಿಯಾಳ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ವಿ.ಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

    ಇಲ್ಲಿಯ ತಹಸೀಲ್ದಾರ ಕಾರ್ಯಾಲಯದಲ್ಲಿನ ಮತದಾನ ಕೇಂದ್ರದಲ್ಲಿ ಬೆಳಗ್ಗೆ 8ಗಂಟೆಗೆ ಆಗಮಿಸಿದ ಶಾಸಕ ಆರ್.ವಿ.ದೇಶಪಾಂಡೆ ಸರದಿಯಲ್ಲಿ ನಿಂತು ಮತಗಟ್ಟೆಯಲ್ಲಿದ್ದ ಹೆಲ್ತ್ ರೆಗ್ಯುಲೇಟರ್ ಸಿಬ್ಬಂದಿಯಿಂದ ದೇಹದ ಉಷ್ಣಾಂಶ ಪರಿಶೀಲನೆ ಮಾಡಿಸಿ ಕೊಂಡು, ತದನಂತರ ಮತದಾನ ಮಾಡಿದರು.

    ಪದವೀಧರ ಕ್ಷೇತ್ರ ಇದು ಸುಶಿಕ್ಷಿತರ ಕ್ಷೇತ್ರ, ಆದರೆ ದುರ್ದೈವ; ಈ ಕ್ಷೇತ್ರದಲ್ಲಿ ಮತದಾರರ ಪ್ರಮಾಣ ತೀರಾ ಕಡಿಮೆಯಿದೆ. ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಲಕ್ಷಾಂತರ ಪದವೀಧರರು ಇದ್ದರೂ, ಇಂದು ಬಹುಸಂಖ್ಯಾತ ಪದವೀಧರರು ತಮ್ಮ ಹೆಸರನ್ನು ನೋಂದಾಯಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಕಾರಣ ಮತದಾನದಿಂದ ವಂಚಿತರಾಗಿದ್ದರೆ ಇನ್ನೊಂದೆಡೆ ಮತದಾರರ ಪ್ರಮಾಣವು ಕಡಿಮೆಯಾಗಿದೆ.

    | ಆರ್.ವಿ.ದೇಶಪಾಂಡೆ ಶಾಸಕ

    ಬಿಜೆಪಿ ಪಾಳಯದಲ್ಲಿ ಹೆಚ್ಚಿನ ಉತ್ಸಾಹ

    ಕುಮಟಾ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಧ್ಯಾಹ್ನದವರೆಗೂ ನಿಧಾನಗತಿಯಲ್ಲಿ ನಡೆದರೂ ಬಳಿಕ ತುರುಸಿನಿಂದ ನಡೆಯಿತು.

    ಮತದಾನಕ್ಕಾಗಿ ಗಿಬ್ ವೃತ್ತದಿಂದಲೇ ಸಾರ್ವಜನಿಕ ಸಂಚಾರ ನಿಯಂತ್ರಿಸಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿವಿಧ ಪಕ್ಷಗಳಿಂದ ತಮ್ಮ ಅಭ್ಯರ್ಥಿಗಳಿಗೆ ಬೆಂಬಲವಾಗಿ ಪೆಂಡಾಲ್ ಹಾಕಿಕೊಂಡು ಪಕ್ಷದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

    ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್​ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದೆ ಇದ್ದು ಪ್ರತಿ 10 ಮತದಾರರಿಗೆ ಒಬ್ಬ ಘಟನಾಯಕರನ್ನು ನೇಮಿಸಿ ಪ್ರತಿಯೊಂದು ಮತದಾರರನ್ನು ಭೇಟಿಯಾಗಿ ಮತಯಾಚಿಸುವ ಕೆಲಸ ಮಾಡಿದ್ದಾರೆ. ಶಾಸಕರಾದಿಯಾಗಿ ಬಹುತೇಕ ಪ್ರಮುಖ ಪದಾಧಿಕಾರಿಗಳು ದೂರವಾಣಿ ಕರೆಯ ಮೂಲಕ ಎಲ್ಲ ಮತದಾರರನ್ನೂ ಪದೇ ಪದೆ ಸಂರ್ಪಸಿದ್ದಾರೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಚುನಾವಣೆಯ ಉತ್ಸಾಹ ಹೆಚ್ಚು ಕಂಡುಬಂದಿದೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ. ಸಂಕನೂರು ಗೆಲುವಿನ ಮತಗಳ ಅಂತರ ದಾಖಲೆಯಾಗಲಿದೆ ಎಂದರು. ಜೆಡಿಎಸ್ ಪಕ್ಷದ ಪರವಾಗಿ ಸೂರಜ ನಾಯ್ಕ ಮಾತನಾಡಿ, ಪಕ್ಷದ ವರಿಷ್ಠರ ನಿರ್ಣಯದಂತೆ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಿದ್ದೇವೆ. ಅವರ ಪರವಾಗಿ ಪ್ರಚಾರವನ್ನೂ ಮಾಡಿದ್ದೇವೆ ಎಂದರು.

    ಕಾಂಗ್ರೆಸ್ ತಾಲೂಕಾಧ್ಯಕ್ಷ ವಿ.ಎಲ್.ನಾಯ್ಕ ಮಾತನಾಡಿ, ಪ್ರಜ್ಞಾವಂತ ಮತದಾರರು ಈ ಬಾರಿ ಕಾಂಗ್ರೆಸ್ ಬೆಂಬಲಿತ ಕುಬೇರಪ್ಪ ಅವರನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.

    ಶಾಸಕಿ ನಡೆಗೆ ಕಾಂಗ್ರೆಸ್ ಆಕ್ಷೇಪ

    ಅಂಕೋಲಾ: ಶಾಸಕಿ ರೂಪಾಲಿ ನಾಯ್ಕ ತಮ್ಮ ಬೆಂಬಲಿಗರ ಜತೆ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯೊಳಗೆ ತೆರಳಿದ್ದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಅಂಕೋಲಾದಲ್ಲಿ ನಡೆಯಿತು.

    ಅಂಕೋಲಾದಲ್ಲಿ 10 ಕ್ಕೂ ಹೆಚ್ಚು ಬೆಂಬಲಿಗರ ಜತೆ ಆಗಮಿಸಿದ ಶಾಸಕಿ ರೂಪಾಲಿ ಮತದಾನಕ್ಕೆ ಸರದಿಯಲ್ಲಿ ನಿಂತಿದ್ದವರ ಕ್ಷೇಮ ವಿಚಾರಿಸಿದರು. ಮತದಾರರಿಗೆ ನೆರಳಲ್ಲಿ ನಿಲ್ಲುವ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಉದಯ ಕುಂಬಾರ ಅವರಿಗೆ ಸೂಚಿಸಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ್, ನಮ್ಮನ್ನು ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಿಂದ ಹೊರ ಹೋಗುವಂತೆ ಅಧಿಕಾರಿಗಳು ಸೂಚಿಸುತ್ತಾರೆ. ಆದರೆ, ಬಿಜೆಪಿ ಮುಖಂಡರು ಮತಗಟ್ಟೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲೇ ಇದ್ದರೂ ಕ್ರಮ ವಹಿಸುವುದಿಲ್ಲ. ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಎಸಿ ಅಜಿತ್ ಹಾಗೂ ತಹಸೀಲ್ದಾರ್ ಉದಯ ಕುಂಬಾರ ಅವರ ಜತೆ ಮಾತಿನ ಚಕಮಕಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts