More

    ಜಿಲ್ಲೆಯಲ್ಲಿ ಮತ್ತೆ ತಲೆ ಎತ್ತಿದ ಕಳ್ಳಬಟ್ಟಿ!

    ಹಾವೇರಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ನಿಷೇಧಾಜ್ಞೆ ಜಾರಿಗೊಳಿಸಿ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ದಂಧೆ ಜೋರಾಗಿ ನಡೆದಿದೆ.

    ಅಬಕಾರಿ ಇಲಾಖೆಯ ಸತತ ದಾಳಿಗಳಿಂದ ಕಳೆದ ವರ್ಷ ಜಿಲ್ಲೆಯ ಹಾನಗಲ್ಲ ತಾಲೂಕಿನ ಹುಲಗಿನಕೊಪ್ಪ, ಹಿರೇಕೆರೂರ ತಾಲೂಕಿನ ಗೊಡಚಿಕೊಂಡ ಪರಿಶೀಲನಾ ಹಂತದಲ್ಲಿದ್ದು, ಉಳಿದೆಲ್ಲೆಡೆ ಸಂಪೂರ್ಣ ಕಳ್ಳಬಟ್ಟಿ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿತ್ತು.

    ಮಾ. 24ರಿಂದ ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯದಂಗಡಿಗಳೆಲ್ಲ ಸಂಪೂರ್ಣ ಬಂದ್ ಆಗಿವೆ. ಇದರಿಂದ ಮದ್ಯವನ್ನು ಕೆಲವಡೆ ಅಕ್ರಮವಾಗಿ ಮೂರ್ನಾಲ್ಕು ಪಟ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇದು ಅಷ್ಟೊಂದು ವ್ಯಾಪಕವಾಗಿಲ್ಲ. ಇದು ಸಾಮಾನ್ಯರಿಗೆ ಕೈಗೆಟುಕುವುದೂ ಇಲ್ಲ. ಹೀಗಾಗಿ ಹಿಂದೆ ಕಳ್ಳಬಟ್ಟಿ ತಯಾರಿಕೆ ಸ್ಥಗಿತಗೊಳಿಸಿ ಪರ್ಯಾಯ ಉದ್ಯೋಗಕ್ಕೆ ವಾಲಿದ್ದ ಅನೇಕರು ಮರಳಿ ಕಳ್ಳಬಟ್ಟಿ ತಯಾರಿಕೆಗೆ ಮುಂದಾಗಿದ್ದಾರೆ. ಇದು ಅಬಕಾರಿ ಇಲಾಖೆಗೆ ಆತಂಕಕಾರಿಯೂ ಆಗಿದೆ.

    ಹಿರೇಕೆರೂರ, ಹಾನಗಲ್ಲನಲ್ಲಿ ಅತಿಹೆಚ್ಚು: ಹಿರೇಕೆರೂರ ಹಾಗೂ ಹಾನಗಲ್ಲ ತಾಲೂಕಿನಲ್ಲಿ ಕಳ್ಳಬಟ್ಟಿ ತಯಾರಿಕೆ ದಂಧೆ ಕಳೆದ 15 ದಿನಗಳಿಂದ ಜೋರಾಗುತ್ತಿದೆ. ಸಂಪೂರ್ಣ ಸ್ಥಗಿತಗೊಂಡಿದ್ದ ಸವಣೂರ ತಾಲೂಕಿನಲ್ಲಿಯೂ ಆರಂಭಗೊಂಡಿರುವ ಮಾಹಿತಿ ಲಭ್ಯವಾಗಿದೆ. ಇದನ್ನು ನಿಯಂತ್ರಿಸಲು ಅಬಕಾರಿ ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದರೂ ಇಲಾಖೆಯ ಶ್ರಮಕ್ಕೆ ಸಂಪೂರ್ಣವಾಗಿ ಯಶಸ್ಸು ಸಿಗುತ್ತಿಲ್ಲ. ಅಧಿಕಾರಿಗಳು ಸತತ ದಾಳಿ ನಡೆಸಿದರೂ ದಂಧೆಕೋರರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.

    458 ದಾಳಿ: ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಯಾದ ಮಾ. 24ರಿಂದ ಏ. 17ರವರೆಗೆ ಅಬಕಾರಿ ಇಲಾಖೆಯು 458 ದಾಳಿಗಳನ್ನು ನಡೆಸಿ 31ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಹಿಂದಿನ ಕಳ್ಳಬಟ್ಟಿ ತಾಣಗಳಿಗೆ 303 ಬಾರಿ ಭೇಟಿ ನೀಡಿದ್ದಾರೆ. ದಂಧೆಯಲ್ಲಿ ತೊಡಗಿದ್ದ 16 ಜನರನ್ನು ವಶಕ್ಕೆ ಪಡೆದಿದ್ದಾರೆ. 126 ಲೀಟರ್ ಕಳ್ಳಬಟ್ಟಿ, 1,675 ಲೀಟರ್ ಕಳ್ಳಬಟ್ಟಿ ತಯಾರಿಕೆಗೆ ಬಳಸುತ್ತಿದ್ದ ಕೊಳೆ ಹಾಗೂ ರಾಸಾಯನವನ್ನು ನಾಶಪಡಿಸಿದ್ದಾರೆ. 5 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಬಟ್ಟಿ ಅಷ್ಟೆ ಅಲ್ಲದೆ, 122.850 ಲೀಟರ್ ಮದ್ಯ, 36.300 ಲೀಟರ್ ಬಿಯರ್​ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ ತಿಳಿಸಿದ್ದಾರೆ.

    ಹಿರೇಕೆರೂರ, ರಟ್ಟಿಹಳ್ಳಿ ತಾಲೂಕುಗಳಲ್ಲಿ ಮದ್ಯದಂಗಡಿಗಳಲ್ಲಿ ಈ ಹಿಂದೆ ಮಾರಾಟವಾಗುತ್ತಿದ್ದ ಟೆಟ್ರಾ ಪ್ಯಾಕ್​ನ ವಿವಿಧ ಬ್ರ್ಯಾಂಡ್​ನ 50ರಿಂದ 70 ರೂ.ಗಳ ಬೆಲೆಯ ಮದ್ಯ 200 ರೂ.ಗಳಿಂದ 250 ರೂ.ಗೆ ಹಳ್ಳಿಹಳ್ಳಿಗಳಲ್ಲಿಯೂ ಈಗಲೂ ಮಾರಾಟವಾಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಮದ್ಯದಂಗಡಿಗಳಿಗೆ ಸೀಲ್ ಮಾಡಿದ್ದರೂ ಹಿಂಬಾಗಿಲ ಮೂಲಕ ಟೆಟ್ರಾ ಪ್ಯಾಕ್​ನ ಮದ್ಯ ಸರಬರಾಜಾಗುತ್ತಿದೆ. ಅಂಗಡಿಗಳು ಆರಂಭಗೊಂಡ ನಂತರ ಸ್ಥಳೀಯ ಅಬಕಾರಿ ಅಧಿಕಾರಿಗಳ ಬದಲು ಜಿಲ್ಲಾಮಟ್ಟದ ಅಧಿಕಾರಿಗಳೇ ಅಲ್ಲಿನ ಸ್ಟಾಕ್ ಪರಿಶೀಲಿಸಿದರೆ ಅಕ್ರಮ ಬಯಲಿಗೆ ಬರಲಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಅಲ್ಲದೆ, ಚನ್ನಳ್ಳಿ, ಚನ್ನಳ್ಳಿ ತಾಂಡಾ, ಎಂಕೆ ಯತ್ತಿನಹಳ್ಳಿ, ಬಾವಾಪುರ, ಎತ್ತಿನಹಳ್ಳಿಯಲ್ಲಿ ಕಳ್ಳಬಟ್ಟಿಯೂ ಜೋರಾಗಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಈವರೆಗೂ ಅಬಕಾರಿ ಇಲಾಖೆ ಈ ಗ್ರಾಮಗಳಲ್ಲಿ ದಾಳಿ ನಡೆಸದೇ ಇರುವುದು ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಸಂಶಯ ಮೂಡುವಂತೆ ಮಾಡಿದೆ.

    ಒಂದಿಷ್ಟು ಕ್ರಮ: ಜಿಲ್ಲೆಯ ಕಳ್ಳಬಟ್ಟಿ ತಯಾರಿಕೆ, ಮಾರಾಟ ಹಾಗೂ ಮದ್ಯ ಮಾರಾಟದಂತಹ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಅಬಕಾರಿ ಇಲಾಖೆಯ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08375-232902ಗೆ ಅಥವಾ ಆಯಾ ತಾಲೂಕು ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಕೆಎಸ್​ಬಿಸಿಎಲ್ ಡಿಪೋ ಸೇರಿ ಒಟ್ಟು 166 ಮದ್ಯ ಮಾರಾಟ ಸನ್ನದುಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ದಿನದ 24 ತಾಸು ಕಂದಾಯ, ಪೊಲೀಸ್, ಆರೋಗ್ಯ ಮತ್ತು ಇತರೆ ಇಲಾಖೆಗಳ ವಿಪತ್ತು ನಿರ್ವಹಣೆ ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಅಕ್ರಮಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಉಪವಿಭಾಗ ಮಟ್ಟದಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ನಡೆಸಿ ಕಳ್ಳಬಟ್ಟಿ ವ್ಯವಹಾರಗಳು ತಲೆಯೆತ್ತದಂತೆ ಹಗಲಿರುಳು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ ಅಬಕಾರಿ ಉಪ ಆಯುಕ್ತರಾದ ಮಹಾದೇವಿಬಾಯಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts