More

    ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ಕೇಸ್

    ಗದಗ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಎರಡು ಕರೊನಾ ವೈರಸ್ ಕೇಸ್ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ 32 ವರ್ಷದ ಪುರುಷ ಪಿ 1566 ಹಾಗೂ 38 ವರ್ಷದ ಮಹಿಳೆ ಪಿ-1567ಗೆ ಕೋವಿಡ್19 ಸೋಂಕು ದೃಢಪಟ್ಟಿದೆ.

    ಪಿ 1566 ವ್ಯಕ್ತಿಯು ಮಹಾರಾಷ್ಟ್ರದ ಮುಂಬೈಯಿಂದ ಮೇ 19ರಂದು ಬಸ್ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ನಂತರ ಹುಬ್ಬಳ್ಳಿಯಿಂದ ಬಸ್ ಮೂಲಕ ಗದಗ ನಗರಕ್ಕೆ ಬಂದಾಗ ಅವರನ್ನು ತಪಾಸಣೆ ಒಳಪಡಿಸಿ ಶಿರಹಟ್ಟಿ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.

    ಪಿ 1567 ಮಹಿಳೆಯು 16 ಜನ ಕುಟುಂಬ ಸದಸ್ಯರೊಂದಿಗೆ ಮೇ 12ರಂದು ಛತ್ತೀಸ್​ಗಢದಿಂದ ಶಿರಹಟ್ಟಿಗೆ ಕಾರುಗಳಲ್ಲಿ ಆಗಮಿಸಿದ್ದರು. ಎಲ್ಲರ ಆರೋಗ್ಯ ತಪಾಸಣೆಗೆ ಒಳಪಡಿಸಿ ಎಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಮಹಿಳೆ ಸೇರಿ 17 ಜನರನ್ನು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿರಿಸಲಾಗಿತ್ತು. ಇದರಲ್ಲಿ ಮಹಿಳೆಗೆ ಮಾತ್ರ ಸೋಂಕು ತಗುಲಿದ್ದು, ಉಳಿದ 16 ಜನರ ವರದಿ ನೆಗೆಟಿವ್ ಬಂದಿದೆ. ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 20 ಕರೊನಾ ವೈರಸ್ ಸೋಂಕಿತರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು, 14 ಸಕ್ರಿಯ ಪ್ರಕರಣಗಳು ಇವೆ.

    ಆರೋಗ್ಯ ವಿಚಾರಿಸಿದ ತಹಸೀಲ್ದಾರ್

    ಲಕ್ಷ್ಮೇಶ್ವರ: ಸಮೀಪದ ಒಡೆಯರ ಮಲ್ಲಾಪುರ ಮತ್ತು ಗೊಜನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ನಲ್ಲಿರುವ ಜನರ ಆರೋಗ್ಯವನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಗುರುವಾರ ವಿಚಾರಿಸಿದರು.

    ಈ ವೇಳೆ ಮಾತನಾಡಿದ ಅವರು, ಒಡೆಯರ ಮಲ್ಲಾಪುರ ಶಾಲೆಯಲ್ಲಿರುವ 44 ಜನರಲ್ಲಿ 41 ಜನರು ತಾಲೂಕಿನ ಆದ್ರಳ್ಳಿ, ಕುಂದ್ರಳ್ಳಿ, ಸೂರಣಗಿ, ಅಕ್ಕಿಗುಂದ ತಾಂಡಾದ ಕೂಲಿ ಕಾರ್ವಿುಕರಾಗಿದ್ದಾರೆ. ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ಇವರು ಹಲವು ವಾಹನಗಳ ಮೂಲಕ ಲಕ್ಷ್ಮೇಶ್ವರಕ್ಕೆ ಬಂದಿದ್ದಾರೆ. ಇಬ್ಬರು ಗುಜರಾತ್​ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ಗೊಜನೂರಿನ ಮುರಾರ್ಜಿ ಶಾಲೆಯಲ್ಲಿರುವ 57 ಜನರಲ್ಲಿ 38 ಜನರು ಗದಗ ತಾಲೂಕಿನ ನಾಗವಿ ಗ್ರಾಮದ ಕೂಲಿ ಕೆಲಸಗಾರರಾಗಿದ್ದು, ಕೇರಳದಿಂದ ಬಸ್ ಮೂಲಕ ಬಂದಿದ್ದಾರೆ. ಲಕ್ಷ್ಮೇಶ್ವರದಿಂದ ಅಜ್ಮೀರಕ್ಕೆ ಹೋಗಿದ್ದ 17 ಜನ ಖಾಸಗಿ ವಾಹನ ಬಾಡಿಗೆ ಪಡೆದು ಬಂದಿದ್ದಾರೆ.

    ಜಿಲ್ಲಾಡಳಿತದ ನಿರ್ದೇಶನದಂತೆ ಬೇರೆ ರಾಜ್ಯಗಳಿಂದ ಬಂದಿರುವ ಜನರಿಗೆ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಅವರ ಆರೋಗ್ಯ ಪರೀಕ್ಷಿಸಿ ಗಂಟಲ ದ್ರವದ ಮಾದರಿಯ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲವರ ವರದಿ ಬರಬೇಕಾಗಿದ್ದು, ವರದಿ ನಂತರ ಜಿಲ್ಲಾಡಳಿತದ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕಳಸಾಪುರ, ವಾರ್ಡನ್ ಕೆ.ಪಿ. ಪಾಟೀಲ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಇತರರು ಇದ್ದರು.

    ಕ್ವಾರಂಟೈನ್ ಕೇಂದ್ರಕ್ಕೆ ಭದ್ರತೆ ಒದಗಿಸಿ

    ಶಿರಹಟ್ಟಿ: ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಕ್ವಾರಂಟೈನ್​ಗೆ ಒಳಗಾದವರು ಮನಸೋ ಇಚ್ಛೆ ಹೊರಗಡೆ ತಿರುಗಾಡುತ್ತಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಅವರು ಅಧಿಕಾರಿಗಳನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

    ಪಿಎಸ್​ಐ ಎಸ್.ಎಂ. ನಾಯಕ ಮತ್ತು ತಾಲೂಕು ಆರೋಗ್ಯಾಧಿಕಾರಿ ಸುಭಾಸ ದೈಗೊಂಡ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ‘ಉದ್ಯೋಗ ಅರಸಿ ಬೇರೆ ರಾಜ್ಯಕ್ಕೆ ಹೋಗಿದ್ದ ತಾಲೂಕಿನ ಜನರು ವಾಪಸ್ ಬಂದಿದ್ದು ಅವರನ್ನು ಪರೀಕ್ಷೆಗೊಳಪಡಿಸಿ ನಂತರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಸೂಕ್ತ ಭದ್ರತೆ ಒದಗಿಸದ ಕಾರಣ ಅವರು ಹೊರಗೆ ಬರುತ್ತಿದ್ದಾರೆ. ಇದರಿಂದ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಮಸ್ಯೆಯಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

    ಕ್ವಾರಂಟೈನ್ ಕೇಂದ್ರಕ್ಕೆ ಸೂಕ್ತ ರಕ್ಷಣೆ ಒಗಿಸಬೇಕು. ಸಕಾಲಕ್ಕೆ ಅಲ್ಲಿರುವವರ ಆರೋಗ್ಯ ಪರೀಕ್ಷೆ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಬೇಕು. ಶಿರಹಟ್ಟಿ ತಾಲೂಕಿನಲ್ಲಿ 3 ಕೇಸ್ ಪತ್ತೆಯಾಗಿರುವುದು ಸಣ್ಣ ಮಾತಲ್ಲ. ಮುಂದಿನ ಆಗು ಹೋಗುಗಳ ಬಗ್ಗೆ ಮೈಮೇಲೆ ಎಚ್ಚರ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

    ಗ್ರಾಮಸ್ಥರ ಕಿರಿಕಿರಿ: ಕೇರಳದಿಂದ ಬುಧವಾರ ರಾತ್ರಿ ಆಗಮಿಸಿದ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿದ 44 ಜನರನ್ನು ಶಿರಹಟ್ಟಿ ಸಮೀಪದ ಹರಿಪೂರ ಗ್ರಾಮದ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಬೇರೆ ತಾಲೂಕಿನ ಜನರಿಗೆ ವ್ಯವಸ್ಥೆ ಮಾಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು, ಬೇರೆ ತಾಲೂಕಿನವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ‘ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಲಾಗಿದೆ. ಬೇರೆ ರಾಜ್ಯಗಳಿಂದ ಬರುತ್ತಿರುವವರನ್ನು ಅನುಕೂಲಕ್ಕೆ ತಕ್ಕಂತೆ ಕ್ವಾರಂಟೈನ್ ಮಾಡಲಾಗುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದರು.

    44 ಜನರ ವರದಿ ನೆಗೆಟಿವ್: ಕೇರಳದಿಂದ ಬಂದ 44 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು ಎಲ್ಲರ ವರದಿಗಳು ನೆಗೆಟಿವ್ ಬಂದಿವೆ ಎಂದು ಶಿರಹಟ್ಟಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದ್ರು ಲಮಾಣಿ ತಿಳಿಸಿದ್ದಾರೆ. 20 ಜನರಿಗೆ ಹರಿಪೂರ ಸರ್ಕಾರಿ ವಸತಿ ನಿಲಯ ಹಾಗೂ 24 ಜನರಿಗೆ ಬನ್ನಿಕೊಪ್ಪ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಗೋಣೆಣ್ಣವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts