More

    ಜಿಲ್ಲೆಯಲ್ಲಿ ಪ್ರಯಾಣಕ್ಕೆ ಜನರ ಹಿಂದೇಟು

    ಗದಗ: ಲಾಕ್​ಡೌನ್ ಸಡಿಲಿಕೆ ಬಳಿಕ ಸಾರಿಗೆ ಸಂಸ್ಥೆ ಬಸ್​ಗಳ ಸಂಚಾರ ಮೇ 20ರಿಂದ ಪುನಾರಂಭಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ಬಸ್ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ನಿರ್ಧರಿಸಿ, ಪ್ರಾಯೋಗಿಕವಾಗಿ ತಾಲೂಕಿನ ಮದಗಾನೂರ, ಅಂತೂರ-ಬೆಂತೂರ ಗ್ರಾಮಗಳಿಗೆ ಬಸ್​ಗಳ ಸಂಚಾರ ಆರಂಭಿಸಿದೆ. ಆದರೆ, ಕರೊನಾ ಭೀತಿಯಿಂದ ಜನರು ಬಸ್​ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

    ಜಿಲ್ಲೆಯ ಏಳು ಘಟಕಗಳಲ್ಲಿ ಒಟ್ಟು 530 ಶೆಡ್ಯೂಲ್​ಗಳಿವೆ. ಸದ್ಯ 350ಕ್ಕೂ ಹೆಚ್ಚು ಶೆಡ್ಯೂಲ್​ಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಹಂತ ಹಂತವಾಗಿ ಎಲ್ಲ ಶೆಡ್ಯೂಲ್​ಗಳಲ್ಲಿ ಬಸ್ ಸಂಚಾರ ಆರಂಭಿಸಿ, ಸಹಜ ಸ್ಥಿತಿಗೆ ತರಲು ಸಾರಿಗೆ ಸಂಸ್ಥೆ ಪ್ರಯತ್ನಿಸುತ್ತಿದೆ.

    ವಸತಿ ಬಸ್ ಶೀಘ್ರ ಶುರು:

    ಗ್ರಾಮೀಣ ಭಾಗಕ್ಕೆ ರಾತ್ರಿ ಬಸ್​ಗಳು ವಸತಿ ಮಾಡುತ್ತವೆ. ಆದರೆ, ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್​ಡೌನ್ ಘೊಷಿಸಿದ್ದರ ಪರಿಣಾಮ ಅವುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಲಾಕ್​ಡೌನ್ ಸಡಿಲಿಕೆಯಿಂದ ವಸತಿ ಬಸ್​ಗಳ ಸಂಚಾರವನ್ನು ಶೀಘ್ರ ಆರಂಭಿಸಲಾಗುತ್ತಿದೆ. ಹಗಲಿನಲ್ಲಿಯೇ ಜನರು ಬಸ್ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ವಸತಿ ಬಸ್ ಬಿಟ್ಟರೆ ಸಂಚರಿಸುತ್ತಾರೆಂಬ ನಿರೀಕ್ಷೆಯಂತೂ ಇಲ್ಲ. ಖಾಲಿ ಬಸ್ ಓಡಿಸುವ ಈ ಸಂದರ್ಭದಲ್ಲಿ ವಸತಿ ಬಸ್​ಗಳ ಸಂಚಾರ ಮಾಡಬೇಕಾಗಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶೀಘ್ರ ಗ್ರಾಮೀಣ ಭಾಗಕ್ಕೂ ವಸತಿ ಬಸ್​ಗಳ ಸಂಚಾರ ಆರಂಭಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

    ಮೇ 20ರಿಂದಲೇ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ, ಕರೊನಾ ಭಯದಿಂದ ಬಸ್​ನಲ್ಲಿ ಪ್ರಯಾಣಿಸಲು ಜನರು ಹೆದರುತ್ತಿರುವುದು ಸಾಮಾನ್ಯವಾಗಿದೆ.

    ಜಿಲ್ಲಾ ಮತ್ತು ತಾಲೂಕು ಕೇಂದ್ರಕ್ಕೆ ತೆರಳುವ ಬಸ್​ಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಚಾಲಕರು, ನಿರ್ವಾಹಕರು ಮುಖಕ್ಕೆ ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಸ್​ಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿತಗೊಳಿಸಿ ಗರಿಷ್ಠ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೂ ಒಂದು ಬಸ್​ನಲ್ಲಿ 10ರಿಂದ 20 ಜನರು ಮಾತ್ರ ಸಂಚರಿಸುತ್ತಿದ್ದಾರೆ. ದಿನಗಳೆದಂತೆ ಜನರು ಬಸ್ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಪ್ರಯಾಣಿಸುತ್ತಿದ್ದಾರೆ. ಬೇರೆ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಪ್ರಯಾಣಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

    ಖಾಲಿ ಬಸ್​ಗಳ ಸಂಚಾರ

    ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಿದ ನಂತರ ಕರೊನಾ ವೈರಸ್ ಭಯದಿಂದ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಂಸ್ಥೆಗೆ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಸಹಜ ದಿನಗಳಲ್ಲಿ ಜಿಲ್ಲೆಯ ಏಳು ಡಿಪೋಗಳಲ್ಲಿ 530 ಶೆಡ್ಯೂಲ್​ಗಳಲ್ಲಿ ಬಸ್​ಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ಸಂಸ್ಥೆಗೆ ದಿನಕ್ಕೆ 60 ಲಕ್ಷ ರೂ. ಆದಾಯ ಬರುತ್ತಿತ್ತು. ಲಾಕ್​ಡೌನ್ ಸಡಿಲಿಕೆ ಬಳಿಕ ಮೊದಲೆರಡು ವಾರ ದಿನಕ್ಕೆ 2ರಿಂದ 3 ಲಕ್ಷ ರೂ. ಮಾತ್ರ ಆದಾಯವಿತ್ತು. ದಿನಗಳೆದಂತೆ ಆದಾಯ ಕೊಂಚ ಏರಿತು. ಸಹಜ ಸ್ಥಿತಿಯಲ್ಲಿದ್ದ ಆದಾಯ ಇನ್ನೂ ಬರುತ್ತಿಲ್ಲ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ.

    1900 ಚಾಲಕರು, ನಿರ್ವಾಹಕರು

    ಜಿಲ್ಲೆಯ ಏಳು ಘಟಕಗಳಲ್ಲಿ 1900 ಚಾಲಕರು ಹಾಗೂ ನಿರ್ವಾಹಕರು ಕೆಲಸ ಮಾಡುತ್ತಾರೆ. ಬಹುತೇಕರು ಕೆಲಸಕ್ಕೆ ಹಾಜರಾಗಿದ್ದಾರೆ. ಬಸ್ ಸಂಚಾರ ಕಡಿಮೆ ಇರುವುದರಿಂದ ಬಹುತೇಕರಿಗೆ ಕೆಲಸವಿಲ್ಲದಂತಾಗಿದೆ.

    ಗ್ರಾಮೀಣ ಭಾಗಕ್ಕೂ ಬಸ್ ಸಂಚಾರ ಆರಂಭಿಸಲಾಗುವುದು. ಗ್ರಾಮೀಣ ಭಾಗದಲ್ಲಿ ವಸತಿ ಬಸ್​ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಜನರು ಸಾರಿಗೆ ಬಸ್ ಬಳಕೆ ಮಾಡಬೇಕು.

    | ಎಫ್.ಸಿ. ಹಿರೇಮಠ, ನಿಯಂತ್ರಣಾಧಿಕಾರಿ, ಸಾರಿಗೆ ಸಂಸ್ಥೆ ಗದಗ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts