More

    ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಳ!

    ಬೆಳಗಾವಿ: ಗ್ರಾಮೀಣ, ನಗರ ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಆದರೆ, ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಹಲವು ಮಕ್ಕಳು ನರಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಮಕ್ಕಳಿಗೆ ಅಗತ್ಯ ಪೋಷ ಕಾಂಶವುಳ್ಳ ಆಹಾರ ನೀಡಲು ವಿವಿಧ ಯೋಜನೆ ಅಡಿಯಲ್ಲಿ ವಾರ್ಷಿಕ ಕೋಟ್ಯಂತರ ರೂ. ವ್ಯಯಿಸುತ್ತಿವೆ. ಆದರೆ. ಈವರೆಗೆ ಪರಿಣಾಮಕಾರಿ ಬದಲಾವಣೆ ಕಂಡು ಬಂದಿಲ್ಲ. ಈಗಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಜತೆಗೆ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

    ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿ ಜಿಲ್ಲೆಗಳ ವ್ಯಾಪ್ತಿಯ 5,331 ಅಂಗನವಾಡಿ ಕೇಂದ್ರಗಳಿವೆ. ಆದರೆ, ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ತೂಕದ ಯಂತ್ರಗಳೇ ಇಲ್ಲ. ಪ್ರತಿ ವರ್ಷವೂ ಹಿಂದಿನ ವರ್ಷದ ಅಂಕಿ&ಸಂಖ್ಯೆಗಳನ್ನು ದಾಖಲೆಗಳಲ್ಲಿ ಉಲ್ಲೇಖಿಸುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 586 ತೀವ್ರ ಅಪೌಷ್ಟಿಕತೆ ಮತ್ತು 32 ಸಾವಿರಕ್ಕೂ ಅಧಿಕ ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳುತ್ತಿವೆ.
    ಅಪೌಷ್ಟಿಕತೆಯ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆ ನೀಡುವ ಜತೆಗೆ ಶಾಲಾ ಪೂರ್ವ ಶಿಣ ನೀಡಿ, ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ತಳಹದಿ ಹಾಕುವುದೇ ಅಂಗನವಾಡಿ ಕೇಂದ್ರಗಳು. ಆದರೆ, ಅಸಮರ್ಪಕ ನಿರ್ವಹಣೆ, ಸರ್ಕಾರದ ಸೌಲಭ್ಯಗಳು ಮಕ್ಕಳಿಗೆ ಸಿಗದಿರುವುದು, ಅಂಗನವಾಡಿ ಸಿಬ್ಬಂದಿ ರ್ನಿಲಕ್ಷದಿಂದಾಗಿ ಅಂಗನವಾಡಿ ಕೇಂದ್ರಗಳು ಅಪೌಷ್ಟಿಕತೆಯುಳ್ಳ ಮಕ್ಕಳ ಗೂಡಾಗಿ ಮಾರ್ಪಪಟ್ಟಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಜಿಲ್ಲೆಯಲ್ಲಿ 5,331 ಅಂಗನವಾಡಿ ಕೇಂದ್ರಗಳ ಪೈಕಿ 2066 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಮುದಾಯ ಭವನ, ದೇವಸ್ಥಾನ, ಖಾಸಗಿ ಕಟ್ಟಡಗಳು ಕೂಡ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಹಳ್ಳಿಗಳಲ್ಲಿ ಬಹುತೇಕ ಕೇಂದ್ರಗಳ ಸ್ಥಿತಿ ದಯನೀಯವಾಗಿದೆ. ಅಂಗನವಾಡಿ ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಮೊಟ್ಟೆಗಳನ್ನು ಖರೀದಿಸಿ ತದನಂತರ ಹಣ ಪಡೆಯುತ್ತಿದ್ದಾರೆ. ಆದರೆ, ಸರ್ಕಾರವು ಸಮಯಕ್ಕೆ ಸರಿಯಾಗಿ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನೇ ನಿಲ್ಲಿಸಿವೆ.

    ಈಗಾಗಲೇ ಅಪೌಷ್ಟಿಕತೆ ಮತ್ತು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪೈಕಿ 218 ಮಕ್ಕಳನ್ನು ಜಿಲ್ಲೆಯಲ್ಲಿ ಎನ್​ಆರ್​ಸಿ ಕೇಂದ್ರಗಳಿಗೆ ದಾಖಲಿಸಲಾಗಿದೆ. ಮಕ್ಕಳ ತಜ್ಞರ ಹುದ್ದೆ ಖಾಲಿ ಇರುವುದರಿಂದ ಎಂಎನ್​ಆರ್​ಸಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮಕ್ಕಳನ್ನು ಎನ್​ಆರ್​ಸಿ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ.

    ಗಮನಕ್ಕೆ ತಂದರೂ ಆಗದ ಪ್ರಯೋಜನ: ಬೆಳಗಾವಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 32 ಸಾವಿರ ಮಕ್ಕಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.ಸರ್ಕಾರವು ಮಕ್ಕಳಿಗಾಗಿ ನೀಡುತ್ತಿರುವ ಪೌಷ್ಟಿಕ ಆಹಾರ ಧಾನ್ಯಗಳು ಮಕ್ಕಳ, ಮೊಟ್ಟೆ, ಹಾಲು ಇತರೆ ವಸ್ತುಗಳು ಮಕ್ಕಳ ಕೈ ಸೇರುತ್ತಿಲ್ಲ. ಕೆಲ ಅಂಗನವಾಡಿ ಸಿಬ್ಬಂದಿ ವಿತರಣೆ ಮಾಡದೆ ವಾರದ ಸಂತೆ, ಸ್ಥಳಿಯ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು 6 ತಿಂಗಳುಗಳಿಂದ ಮೊಟ್ಟೆ ನೀಡಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಮಾರುತಿ ಹಡಪದ, ವಿಠ್ಠಲ ಪಾಟೀಲ, ಪರುಶರಾಮ ಮಾದರ ದೂರಿದ್ದಾರೆ.

    ಜಿಲ್ಲೆಯಲ್ಲಿ ಅಪೌಷ್ಟಿಕತೆ, ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿಸಲು ಇಲಾಖೆಯು ನಿರಂತರ ಶ್ರಮಿಸುತ್ತಿದೆ.
    | ಎ.ಎಂ.ಬಸವರಾಜು, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts