More

    ಜಿಲ್ಲೆಯಲ್ಲಿ ಕರೊನಾ ಪ್ರಕರಣ ಇಲ್ಲ

    ಧಾರವಾಡ/ಹುಬ್ಬಳ್ಳಿ: ಜಿಲ್ಲೆಯಲ್ಲಿ ಈವರೆಗೂ ಕರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಜನರು ಅನಗತ್ಯವಾಗಿ ಭಯಪಡಬೇಕಿಲ್ಲ. ಶಾಲಾ, ಕಾಲೇಜು, ಶಿಕ್ಷಣ ತರಬೇತಿ ಸಂಸ್ಥೆಗಳು, ಈಜುಕೊಳ ಮತ್ತಿತರ ಸಾರ್ವಜನಿಕ ಸ್ಥಳಗಳಿಗೆ ಈಗಾಗಲೇ ಒಂದು ವಾರ ರಜೆ ನೀಡಿದ್ದು, ಜಿಲ್ಲೆಯ ಆಯ್ದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಜಾತ್ರೆ, ಉತ್ಸವ ಮತ್ತು ಧಾರ್ವಿುಕ ಆಚರಣೆಗಳಲ್ಲಿ ಹೆಚ್ಚು ಜನ ಸೇರುವ ಸಾಧ್ಯತೆ ಇರುತ್ತದೆ. ಮುಂಜಾಗ್ರತೆ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಇಂತಹ ಜನದಟ್ಟಣೆ ಇರುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರವಿರಲು ಮತ್ತು ಇಂತಹ ಕಾರ್ಯಕ್ರಮಗಳನ್ನು ಮುಂದೂಡಲು ವಿನಂತಿ ಮಾಡಲಾಗಿದೆ ಎಂದಿದ್ದಾರೆ.

    ಹುಬ್ಬಳ್ಳಿ-ಧಾರವಾಡದ ಪ್ರಮುಖ ಹೋಟೆಲ್​ಗಳಲ್ಲಿ ತಂಗುವ ರೋಗದ ಲಕ್ಷಣಗಳಿರುವ ಶಂಕಿತ ಪ್ರವಾಸಿಗರನ್ನು ಎಚ್ಚರಿಕೆಯಿಂದ ಸರ್ಕಾರದ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಯಂತೆ ತಪಾಸಣೆಗೆ ಒಳಪಡಿಸಲು ಹೋಟೆಲ್ ಮಾಲೀಕರಿಗೆ ಸೂಚಿಸಬೇಕು. ಅಂತಹ ಸಂದರ್ಭಗಳಲ್ಲಿ ಕೂಡಲೆ ಜಿಲ್ಲಾ ಆರೋಗ್ಯಾಧಿಕಾರಿ ಮೊ. 9449843049, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಮೊ. 9449843254 ಅಥವಾ 104 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

    ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕೈಗಳನ್ನು ಸಾಬೂನಿನಿಂದ ಪದೇ ಪದೆ ತೊಳೆದುಕೊಳ್ಳಬೇಕು. ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ವೈರಸ್ ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಪರೀಕ್ಷೆ ನಡೆಸಿ ವರದಿ ನೀಡಲು ಅವಕಾಶವಿಲ್ಲ. ಸರ್ಕಾರ ಗುರುತಿಸಿರುವ ಆಯ್ದ 5 ಪ್ರಯೋಗಾಲಯಗಳ ವರದಿಗಳು ಮಾತ್ರ ದೃಢಪಡಿಸುತ್ತವೆ. ರೋಗ ಲಕ್ಷಣಗಳುಳ್ಳ ಯಾವುದೇ ವ್ಯಕ್ತಿಗಳು ಕಂಡುಬಂದರೆ ಕೂಡಲೆ ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬಹುದು ಎಂದು ಚೋಳನ್ ತಿಳಿಸಿದ್ದಾರೆ.

    ಆಲ್ಕೋಹಾಲ್ ಮಿಶ್ರಿತ ರಾಸಾಯನಿಕದಿಂದ ರೈಲುಗಳ ಸ್ವಚ್ಛತೆ: ನೈಋತ್ಯ ರೈಲ್ವೆ ವಲಯ ರೈಲುಗಳ ಸ್ವಚ್ಛತೆಗೆ ಆಲ್ಕೋಹಾಲ್ ಮಿಶ್ರಿತ ರಾಸಾಯನಿಕ ದ್ರವ ಬಳಕೆಗೆ ಮುಂದಾಗಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಗದಗ, ಕಲ್ಬುರ್ಗಿ, ವಾಸ್ಕೊ ಡ ಗಾಮಾ, ಬಳ್ಳಾರಿ, ಮಂಗಳೂರು, ಕಾರವಾರ, ಧಾರವಾಡ ಮತ್ತಿತರ ಪ್ರಮುಖ ನಿಲ್ದಾಣಗಳಲ್ಲಿರುವ ಪಿಟ್ ಲೈನ್​ನಲ್ಲಿ ಪ್ರಯಾಣ ಕೊನೆಗೊಳ್ಳುವ ಪ್ರತಿ ರೈಲನ್ನು ಮೆಕಾನಿಕಲ್ ವಿಭಾಗದಿಂದ ಸ್ವಚ್ಛಗೊಳಿಸಲಾಗುತ್ತದೆ. ಆದರೆ, ಈ ಮೊದಲು ನೀರು ಹಾಗೂ ಅಲ್ಪ ಪ್ರಮಾಣದ ರಾಸಾಯನಿಕ ಉಪಯೋಗಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಕರೊನಾ ವೈರಸ್ ಆತಂಕ ಪ್ರಾರಂಭಗೊಂಡ ನಂತರ ಬೋಗಿಗಳ ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಬಾಗಿಲುಗಳ ಹ್ಯಾಂಡಲ್, ಕಿಟಕಿ, ಆಸನಗಳನ್ನು ಪ್ರಯಾಣಿಕರು ಮುಟ್ಟುವುದು ಹೆಚ್ಚು. ಕರೊನಾ ಸೋಂಕಿತ ವ್ಯಕ್ತಿ ಮುಟ್ಟುವ ಈ ವಸ್ತುಗಳನ್ನು ಬೇರೊಬ್ಬ ಪ್ರಯಾಣಿಕ ಮುಟ್ಟಿದಲ್ಲಿ ಆತನಿಗೂ ಸೋಂಕು ತಗುಲುವುದು ಖಚಿತ. ಹೀಗಾಗಿ ಪ್ರಯಾಣ ಮುಗಿಸಿದ ರೈಲುಗಳನ್ನು ಮತ್ತೆ ಪ್ರಯಾಣ ಪ್ರಾರಂಭಿಸುವ ಮುನ್ನ ಸಂಪೂರ್ಣವಾಗಿ ಶುಚಿಗೊಳಿಸಲಾಗುತ್ತಿದೆ. ಈ ಮೂಲಕ ವೈರಸ್ ಹರಡದಂತೆ ನೈಋತ್ಯ ರೈಲ್ವೆ ವಲಯ ಮುಂಜಾಗ್ರತೆ ಕೈಗೊಂಡಿದೆ. ಎಲ್ಲ ಬೋಗಿಗಳ ಶೌಚಗೃಹ ಹಾಗೂ ವಾಷ್​ಬೇಸಿನ್​ನಲ್ಲಿ ಸೋಪು ಹಾಗೂ ಸೋಪಿನ ದ್ರವ ಇರುವ ಬಾಟಲಿಗಳನ್ನು ಇಡಲಾಗುತ್ತಿದೆ. ಜ್ವರ, ನೆಗಡಿ, ಕೆಮ್ಮು ಇರುವ ಪ್ರಯಾಣಿಕರು ಸ್ವಯಂ ಪ್ರೇರಿತವಾಗಿ ನಿಲ್ದಾಣಗಳಲ್ಲಿರುವ ಹೆಲ್ಪ್​ಡೆಸ್ಕ್​ಗೆ ಸಂರ್ಪಸಿದಲ್ಲಿ ರೈಲ್ವೆ ಆಸ್ಪತ್ರೆಯಿಂದ ತಪಾಸಣೆಯನ್ನೂ ಕೈಗೊಳ್ಳಲಾಗುತ್ತಿದೆ.

    ಶುಚಿತ್ವ ಕಾಪಾಡುವಂತೆ ಹೋಟೆಲ್​ಗಳಿಗೆ ನೋಟಿಸ್: ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಲೈನ್ ಬಜಾರ್, ಸಂಗಮ ವೃತ್ತ, ಸ್ಟೇಷನ್ ರಸ್ತೆ ಸೇರಿ ನಗರದ ವಿವಿಧ ಹೋಟೆಲ್, ಫಾಸ್ಟ್​ಫುಡ್ ಕೇಂದ್ರಗಳು, ಬೇಕರಿ, ಬಾರ್ ಮತ್ತು ರೆಸ್ಟೋರೆಂಟ್​ಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಅವಳಿ ನಗರದ ಎಲ್ಲ ಹೋಟೆಲ್​ಗಳಲ್ಲಿ ಶುಚಿತ್ವ ಕಾಪಾಡುವಂತೆ ಹು-ಧಾ ಮಹಾನಗರ ಪಾಲಿಕೆ ಸೂಚಿಸಿದೆ. ಈ ಸಂಬಂಧ ಹೋಟೆಲ್​ಗಳಿಗೆ ನೋಟಿಸ್ ಜಾರಿ ಮಾಡಿರುವ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪಿ.ಎನ್. ಬಿರಾದಾರ, ತಪ್ಪಿದಲ್ಲಿ ಹೋಟೆಲ್ ಬಂದ್ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅಡುಗೆ ಕೋಣೆಯನ್ನು ಸ್ವಚ್ಛವಾಗಿಡಬೇಕು. ಬಿಸಿ ನೀರಿನಿಂದ ಪಾತ್ರೆಗಳನ್ನು ತೊಳೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಸರಿಯಾಗಿ ಮುಚ್ಚಿಡಬೇಕು. ಗ್ರಾಹಕರಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಅಡುಗೆ ಕೋಣೆಯಲ್ಲಿ ಮುಚ್ಚಳ ಇರುವ ಕಸದ ಡಬ್ಬಿ ಇಡಬೇಕು. ಉತ್ತಮ ಹಾಗೂ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಕೆಲಸಗಾರರ ಆರೋಗ್ಯದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು. ಕೆಲಸಗಾರರು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ಗ್ರಾಹಕರಿಗೆ ಹಾಗೂ ಕೆಲಸಗಾರರಿಗೆ ಶೌಚ ಗೃಹದ ವ್ಯವಸ್ಥೆ ಇರಬೇಕು. ಕಚ್ಚಾ ಆಹಾರ ಪದಾರ್ಥಗಳನ್ನು ಇಡಲು ಪ್ರತ್ಯೇಕ ಕೋಣೆ ಇರಬೇಕು. ತ್ಯಾಜ್ಯ ಪದಾರ್ಥಗಳನ್ನು ರಸ್ತೆಯ ಮೇಲೆ ಹಾಕದೇ ಹೋಟೆಲ್​ನಲ್ಲಿ ಸಂಗ್ರಹಿಸಿ ಕಸ ಸಂಗ್ರಹ ವಾಹನ ಬಂದ ನಂತರ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಇವೆಲ್ಲವನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದೆ.

    ವದಂತಿ ಹರಡುವವರ ಮೇಲೆ ಜಿಲ್ಲಾಡಳಿತ ಕಣ್ಗಾವಲು: ಹುಬ್ಬಳ್ಳಿ: ಕರೊನಾ ಸೋಂಕು ಕುರಿತು ಸುಳ್ಳು ಸುದ್ದಿ ಹರಡುವ ಮಾಧ್ಯಮ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ದಾಂಡೇಲಿ ಮೂಲದ ಶಂಕಿತ ಕರೊನಾ ಸೋಂಕುಳ್ಳ ವ್ಯಕ್ತಿ ಕಿಮ್ಸ್​ನಲ್ಲಿ ತಿಂಗಳ ಹಿಂದೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಈ ಕುರಿತು ಖಾಸಗಿ ವಾಹಿನಿಯೊಂದು ಶುಕ್ರವಾರ ಸುದ್ದಿ ಬಿತ್ತರಿಸಿದೆ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ವಂದತಿ ಹರಡುವ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ.

    ಅನುಸರಣಾ ಕ್ರಮ ಪಾಲಿಸಲು ಆದೇಶ: ಕರೊನಾ ವೈರಸ್ ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 133 ರನ್ವಯ ಮಾ. 14ರಿಂದ ಒಂದು ವಾರ ಕಾಲ ಸಾರ್ವಜನಿಕರು ಈ ಅನುಸರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಗೆ ವಿದೇಶಿಯರು ಆಗಮಿಸುವಾಗ ಅವರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಬೇಕು. ಬೇಸಿಗೆ ಶಿಬಿರಗಳು, ಸಭೆ ಸಮಾರಂಭಗಳು, ಕ್ರೀಡಾಕೂಟಗಳು, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಹೆಚ್ಚು ಜನರು ಬಳಸುವ ಈಜುಕೊಳ, ಜಿಮ್ಂತಹ ಸ್ಥಳಗಳನ್ನು ಬಂದ್ ಮಾಡಬೇಕು. ಪ್ರತಿಯೊಬ್ಬರೂ ಮತ್ತೊಬ್ಬರ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಯಾರನ್ನೂ ಮುಟ್ಟಕೂಡದು. ಪರೀಕ್ಷೆಗಳು ಮತ್ತು ಸರ್ಕಾರಿ ಕಚೇರಿಗಳು ಅಬಾಧಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಅಂಗನವಾಡಿಗಳಿಗೆ ರಜೆ: ಮುಂಜಾಗ್ರತೆ ಕ್ರಮವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಮಾ. 14ರಿಂದ ಮುಂದಿನ ಆದೇಶದವರೆಗೆ ರಜೆ ಘೊಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಜಾ ಅವಧಿಯಲ್ಲಿ ಕೇಂದ್ರದ ಫಲಾನುಭವಿಗಳಿಗೆ ಬಳಸುವ ಆಹಾರ ಧಾನ್ಯ ಪ್ರಮಾಣ ಲೆಕ್ಕ ಹಾಕಿ ಮನೆಗೆ ವಿತರಿಸಲು ಕ್ರಮವಹಿಸಬೇಕು. ಇಲಾಖೆ ಯೋಜನೆಗಳ ಪ್ರಗತಿ ಸಾಧಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎಂದಿನಂತೆ ಕೇಂದ್ರದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.

    ಹಳೇ ಬಸ್ ನಿಲ್ದಾಣದಲ್ಲಿ ಜಾಗೃತಿ: ಹುಧಾ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕರೊನಾ ವೈರಸ್…ಭಯಬೇಡ ಎಚ್ಚರವಿರಲಿ ಎಂದು ನಗರದ ಹಳೇ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಿಗೆ ಕರಪತ್ರ ಮತ್ತು ಭಿತ್ತಿಪತ್ರ ನೀಡಿ ತಿಳಿಹೇಳಲಾಯಿತು. ವೈದ್ಯಾಧಿಕಾರಿಗಳಾದ ಡಾ.ಎಂ.ವೈ. ಪೂಜಾರ, ಡಾ. ಪ್ರಕಾಶ ನರಗುಂದ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ, ಎಸ್.ಪಿ. ಪಾಟೀಲ, ಆರ್.ಜೆ. ನಾಯಕ ಇತರರು ಇದ್ದರು. ಹುಬ್ಬಳ್ಳಿಯ ಹೊಸ ಮತ್ತು ಹಳೆಯ ಬಸ್ ನಿಲ್ದಾಣಗಳು ಎಂದಿನಂತೆಯೇ ಗಿಜುಗುಡುತ್ತಿದ್ದವು. ಕೆಲವರು ಮಾತ್ರ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರಷ್ಟೆ.

    142 ಸಾರ್ವಜನಿಕ ಸ್ಥಳ ಬಂದ್: ಹುಬ್ಬಳ್ಳಿ; ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಅವಳಿ ನಗರದ 142 ಸಾರ್ವಜನಿಕ ಸ್ಥಳಗಳನ್ನು ಪಾಲಿಕೆ ಅಧಿಕಾರಿಗಳು ಶನಿವಾರ ಬಂದ್ ಮಾಡಿಸಿದರು. 12 ಮಾಲ್​ಗಳು, 3 ಕ್ಲಬ್​ಗಳು, 13 ಚಿತ್ರಮಂದಿರಗಳು, 77 ಕಲ್ಯಾಣ ಮಂಟಪಗಳು, 2 ಮೈದಾನಗಳು, 2 ಕೆರೆಗಳು, 20 ಜಿಮ್ಳು, 10 ಉದ್ಯಾನಗಳು, 3 ವಸ್ತು ಪ್ರದರ್ಶನವನ್ನು ಬಂದ್ ಮಾಡಿಸಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ನೇತೃತ್ವದಲ್ಲಿ ಆಯಾ ವಲಯ ಕಚೇರಿ ಅಧಿಕಾರಿಗಳು ಕ್ರಮ ಜರುಗಿಸಿದರು.

    ಮುಂಜಾಗ್ರತೆ ಕ್ರಮ ಕೈಗೊಳ್ಳಲಿ: ಧಾರವಾಡ: ಬೇರೆ ದೇಶದಿಂದ ಕಲಬುರಗಿಗೆ ಆಗಮಿಸಿದ ವ್ಯಕ್ತಿಯಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಅವರನ್ನು ಮೊದಲೇ ಸರಿಯಾಗಿ ತಪಾಸಣೆ ಮಾಡಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೊಷಿಸಿರುವುದು ಒಳ್ಳೆಯ ನಿರ್ಧಾರ. ಆದರೆ, ಕೇವಲ ರಜೆ ಪರಿಹಾರ ಆಗದೆ ಎಲ್ಲ ರೀತಿಯಲ್ಲಿ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts