More

    ಜಿಲ್ಲೆಗೆ ಬೇಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಸಾರ್ವಜನಿಕರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಒದಗಿಸುವಂತೆ ಒತ್ತಾಯಿಸಿ ಕಾರವಾರದ 400ಕ್ಕೂ ಅಧಿಕ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ರಕ್ತದಲ್ಲಿ ಪತ್ರ ಬರೆದರು.

    ನಗರಸಭೆ ಪಕ್ಕದ ಗಾಂಧಿ ಉದ್ಯಾನದ ಎದುರು ವಿವಿಧ ಸಂಘಟನೆಗಳಿಂದ ‘ವಿ ವಾಂಟ್ ಎಮರ್ಜೆನ್ಸಿ ಹಾಸ್ಪಿಟಲ್’ ಘೋಷವಾಕ್ಯದಡಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟ, ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿ, ಜಿಲ್ಲಾ ವಕೀಲರ ಸಂಘ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಿಕ್ಷಾ ಚಾಲಕರು, ಬಂಟ ದೇವ ಯುವಕ ಸಂಘ, ನಂದನಗದ್ದಾ ಗಜಾನನ ಯುವಕ ಸಂಘ ಮಾಳಸಾ ಯುವಕ ಸಂಘ ಸೇರಿ ವಿವಿಧ ಸಂಘಟನೆಗಳ ನೂರಾರು ಜನ ಭಾಗವಹಿಸಿ ಆಸ್ಪತ್ರೆ ಬೇಕೇ ಬೇಕು ಎಂದು ಘೋಷಣೆ ಕೂಗಿದರು.

    ತೀವ್ರ ಅನಾರೋಗ್ಯಪೀಡಿತೆಯಾದ ಕಾಜುಬಾಗದ ಹಸ್ಮತ್ ಬೀಬಿ, ತುಂಬು ಗರ್ಭಿಣಿ ಪ್ರಶಾಂತಿ ನಾಯಕ, 74 ವರ್ಷದ ಕೆ.ಡಿ. ಪೆಡ್ನೇಕರ್, ಸ್ಯಾಮ್ಸನ್ ಡಿಸೋಜಾ ಮುಂತಾದವರು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಹೋರಾಟಕ್ಕೆ ಪ್ರೇರಣೆಯಾದರು. ನಂತರ ಉದ್ಯೋಗಸ್ಥರು, ನಿವೃತ್ತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿ 412 ಜನರು ತಮ್ಮ ರಕ್ತ ತೆಗೆದು ಆಸ್ಪತ್ರೆ ಬೇಕು ಎಂದು ಪತ್ರ ಬರೆದರು.

    ಆಯೋಜಕ ರಾಘು ನಾಯ್ಕ ಮಾತನಾಡಿ, ‘ಸೂಪರ್ ಸ್ಪೆಷಾಲಿಟಿ ಸೌಲಭ್ಯವಿಲ್ಲದ ಕಾರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಾವುಗಳು ಸಂಭವಿಸುತ್ತಿದೆ. ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಸೌಲಭ್ಯ ಬೇಕು. ಇಲ್ಲಿನ ರೋಗಿಗಳಿಗೆ ಅಪಘಾತಕ್ಕೀಡಾದವರಿಗೆ ಇಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು. ಜಾರ್ಜ್ ಫರ್ನಾಂಡಿಸ್, ನರೇಂದ್ರ ದೇಸಾಯಿ, ಸುನೀಲ ಸೋನಿ, ರಾಘವೇಂದ್ರ ಪ್ರಭು, ಪ್ರಶಾಂತ ರೇವಣಕರ್, ಗಿರೀಶ ರಾವ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts