More

    ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರು ಮಾಡಿಸಿ

    ಹಾವೇರಿ: ಜಿಲ್ಲೆಯಲ್ಲಿ ರೈತರು, ಕೂಲಿ ಕಾರ್ವಿುಕರು, ಹೈನುಗಾರಿಕೆಯಲ್ಲಿ ಹೆಚ್ಚಿನ ಆಸಕ್ತರಾಗಿದ್ದಾರೆ. ಇದರಿಂದ ಹಾಲಿನ ಉತ್ಪಾದನೆಯು ಹೆಚ್ಚಿರುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೂ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸೇನಾ ಘಟಕದಿಂದ ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಹಿರೇಕೆರೂರಿನ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಿದ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ, ಜಿಲ್ಲಾಧ್ಯಕ್ಷ ಸಿದ್ಧಲಿಂಗೇಶ ಎಂ. ಪಾಟೀಲ, ಕಿರಣಗೌಡ ಪಾಟೀಲ, ಪ್ರಶಾಂತ ದುಂಡಿಗೌಡರ, ಮಲ್ಲಣ್ಣ ಅಲೇಕಾರ, ಗುರು ರಾಯನಗೌಡ್ರ, ಹನುಮಂತ ಮಡಿವಾಳರ ಇತರರು, ಹಾವೇರಿ ಜಿಲ್ಲೆಯು ಮಲೆನಾಡ ವ್ಯಾಪ್ತಿಗೆ ಬರುವುದರಿಂದ ಹಸುಗಳಿಗೆ ಹಾಗೂ ಹೈನುಗಾರಿಕೆ ನಡೆಸಲು ಮತ್ತು ಹಾಲಿನೊಂದಿಗೆ ಹಾಲಿನ ಇತರೆ ಉತ್ಪನ್ನಗಳನ್ನು ತಯಾರಿಸಲು ಅತ್ಯಂತ ಸೂಕ್ತ ವಾತಾವರಣವಿದೆ. ಹೀಗಾಗಿ ರೈತರ ಪರವಾಗಿ ವಿಶೇಷ ಕಾಳಜಿ ವಹಿಸಿ ಪ್ರತ್ಯೇಕ ಹಾಲು ಒಕ್ಕೂಟವನ್ನು ಮಂಜೂರು ಮಾಡಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

    ಬೆಳೆಸಾಲ ಮನ್ನಾ, ಪರಿಹಾರಕ್ಕೆ ಆಗ್ರಹ: ಕರೊನಾ ಹಾಗೂ ಅತಿವೃಷ್ಟಿಯಿಂದಾಗಿ ರಾಜ್ಯದ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಬೆಳೆ ಸಾಲ ಮನ್ನಾ ಮಾಡಬೇಕು. ಪ್ರತಿ ಹೆಕ್ಟೇರ್​ಗೆ 35 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು.

    ಕರೊನಾ ಬಂದಾಗಿನಿಂದ ಕುಟುಂಬ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಅತಿವೃಷ್ಟಿಯಿಂದ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಬೆಳೆ ವಿಮೆ, ಬೆಳೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. 2019-20ರ ಸಾಲಿನ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳು ಅತ್ಯಂತ ಕನಿಷ್ಠ ಇಳುವರಿ ಬರದ ರೀತಿಯಲ್ಲಿದೆ. ರೈತರು ಸಾಲ ಮಾಡಿ ಬೀಜ, ಗೊಬ್ಬರ ತೆಗೆದುಕೊಂಡಿದ್ದು, ಇದರ ಮಧ್ಯೆ ಕರೊನಾ ರೋಗ ರಾಷ್ಟ್ರಾದ್ಯಂತ ಗ್ರಾಮೀಣ ಪ್ರದೇಶ ಸೇರಿ ಹೆಮ್ಮಾರಿಯಾಗಿ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ಪ್ರತಿ ರೈತರ ಖಾತೆಗಳಿಗೆ ತಲಾ 2 ಲಕ್ಷ ರೂ. ಸಾಲ ಮನ್ನಾ ಮಾಡಬೇಕು. ಮಳೆಯಾಗಿ ಪ್ರವಾಹದಿಂದ ರಾಜ್ಯದ ನೊಂದ ರೈತರಿಗೆ ಪ್ರತಿ ಹೆಕ್ಟೇರ್​ಗೆ 35 ಸಾವಿರ ರೂ. ಪರಿಹಾರ ಘೊಷಣೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts