More

    ಜಿಲ್ಲಾ ಹೊಸ ಗೆಜೆಟಿಯರ್ ಎಲ್ಲಿ?

    ಬೆಳಗಾವಿ: ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ ಹೊಸ ಗೆಜೆಟಿಯರ್ (ಮಾಹಿತಿ ಕೋಶ) ಸಾರ್ವಜನಿಕರ ಕೈಗೆ ಲಭ್ಯವಾಗುತ್ತಿಲ್ಲ. 1987ರಲ್ಲಿ ಮುದ್ರಣಗೊಂಡ ಜಿಲ್ಲೆಯ ಹಳೇ ಗೆಜೆಟಿಯರ್‌ಅನ್ನೇ ಅಧಿಕಾರಿಗಳು ನೆಚ್ಚಿಕೊಂಡಿದ್ದಾರೆ.

    ಕಾಲ ಕಾಲಕ್ಕೆ ಜಿಲ್ಲೆಯ ಮಾಹಿತಿ ಒದಗಿಸುವ ಹೊಸ ಗೆಜೆಟಿಯರ್ (ಸರ್ಕಾರಿ) ಮುದ್ರಣ ಮಾಡಬೇಕೆನ್ನುವ ನಿಯಮವಿದೆ. ಆದರೆ, ಬೆಳಗಾವಿ ಜಿಲ್ಲೆಯ ಗೆಜೆಟಿಯರ್ 1987ರಲ್ಲಿಯೇ ಮುದ್ರಣಗೊಂಡಿದ್ದು, ಹೊಸ ಗೆಜೆಟಿಯರ್ ಯಾರ ಕೈಗೂ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ. ಗೆಜೆಟಿಯರ್‌ನಂತಹ ಜಿಲ್ಲೆಯ ಮಹತ್ವದ ಹೊಸ ಕೈಪಿಡಿ ಹೊರ ತರುವಲ್ಲಿ ಜಿಲ್ಲಾಡಳಿತ ಆಸಕ್ತಿ ತೋರಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಗ್ರಂಥಾಲಯದಲ್ಲೂ ಇಲ್ಲ: ಸಾರ್ವಜನಿಕರಿಗೆ ಅದರಲ್ಲೂ ಅಧಿಕಾರಿಗಳು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳಿಗೆ ಜಿಲ್ಲಾ ಗೆಜೆಟಿಯರ್ ಮಹತ್ವದ ಮಾಹಿತಿ ಒದಗಿಸುವ ಕೈಪಿಡಿಯಾಗಿದೆ. ಆದರೆ, 1987ರಲ್ಲೇ ಪ್ರಕಟವಾದ ಹಳೇ ಗೆಜೆಟಿಯರ್ ಮಾತ್ರ ಗ್ರಂಥಾಲಯದಲ್ಲಿ ಲಭ್ಯ ಇದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಒದುಗರ ಬೇಸರಕ್ಕೆ ಕಾರಣವಾಗಿದೆ.

    ಹಳೆಯ ಪುಸ್ತಕವೇ ಗತಿ: ಜಿಲ್ಲೆಗೆ ಹೊಸದಾಗಿ ನೇಮಕವಾಗುವ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಅಧಿಕಾರಿಗಳಿಗೆ ಜಿಲ್ಲೆಯ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾ ಗೆಜೆಟಿಯರ್ ಅಗತ್ಯವಿದೆ. ಜಿಲ್ಲೆಯ ಭೌಗೋಳಿಕ ಪ್ರದೇಶ, ಜಾತಿ, ಜನಸಂಖ್ಯೆ, ವಿವಿಧ ಸಮುದಾಯಗಳು ಸಾಮಾಜಿಕ ಸ್ಥಿತಿಗತಿಗಳು ಹಾಗೂ ಶೈಕ್ಷಣಿಕ, ಆರ್ಥಿಕ ಹಿನ್ನೆಲೆ, ಕಲೆ-ಸಂಸ್ಕೃತಿ, ಇತಿಹಾಸದ ಬಗ್ಗೆ ಗೆಜೆಟಿಯರ್ ಸಮಗ್ರ ಮಾಹಿತಿ ಒದಗಿಸುತ್ತದೆ. ಇದು ಹೊಸದಾಗಿ ಬಂದ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಆದರೆ, 34 ವರ್ಷದಷ್ಟು ಹಳೆಯ ಜಿಲ್ಲಾ ಗೆಜೆಟಿಯರ್‌ಅನ್ನೇ ಅಧಿಕಾರಿಗಳು ಇಟ್ಟುಕೊಂಡು ಕುಳಿತಿದ್ದಾರೆ.

    ಆಗಬೇಕಿದೆ ಮಾಹಿತಿಯ ಪರಿಷ್ಕರಣೆ

    ಗೆಜೆಟಿಯರ್ ಮುದ್ರಣಕ್ಕೆಂದೇ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆ ಹೊಂದಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗೆಜೆಟಿಯರ್ ಮುದ್ರಣಗೊಳ್ಳುವುದರ ಜತೆಗೆ ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ಐದು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕೆಂಬ ನಿಯಮವೂ ಇದೆ. ಆದರೆ, ಬೆಳಗಾವಿ ಜಿಲ್ಲೆ ಅನೇಕ ವೈಶಿಷ್ಟೃತೆಗಳಿಗೆ ಸಾಕ್ಷಿಯಾಗಿದೆಯಲ್ಲದೆ ರಾಜಕೀಯ, ಸಾಮಾಜಿಕ
    ಹಾಗೂ ಶೈಕ್ಷಣಿಕವಾಗಿ ಅನೇಕ ಮೈಲುಗಲ್ಲು ಹೊಂದಿದೆ. ಈ ಎಲ್ಲದ ಮಾಹಿತಿಯನ್ನೊಳಗೊಂಡ ಹೊಸ ಗೆಜೆಟಿಯರ್ ಲಭ್ಯವಾಗಬೇಕಿದೆ. ಬೆಳಗಾವಿ ಕೇಂದ್ರ ಗ್ರಂಥಾಲಯದಲ್ಲಿ 2004, 2009ನೇ ಸಾಲಿನಲ್ಲಿ ಪ್ರಕಟಿಸಿದ ಮಂಡ್ಯ, ವಿಜಯಪುರ, ಉತ್ತರ ಕನ್ನಡ, ಮೈಸೂರು ಜಿಲ್ಲೆಯ ಗೆಜೆಟಿಯರ್ ಲಭ್ಯವಿದೆ. ಆದರೆ, ಬೆಳಗಾವಿ ಜಿಲ್ಲೆಯ ಹೊಸ ಗೆಜೆಟಿಯರ್ ಲಭ್ಯವಾಗದಿರುವುದು ನಿಜಕ್ಕೂ ಸೋಜಿಗ ಸಂಗತಿ ಎನ್ನುತ್ತಾರೆ ಇಲ್ಲಿನ ಪ್ರಜ್ಞಾವಂತರು.

    ಜಿಲ್ಲೆಯಲ್ಲಿ ಕಳೆದ ಎರಡು ವರ್ಷ ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿಯೇ ತಲ್ಲೀನರಾಗಿದ್ದೆವು. ಜತೆಗೆ ಕರೊನಾ ಸಂದರ್ಭದಲ್ಲಿ ಜನರಿಗೆ ಮೂಲಸೌಲಭ್ಯ ಕಲ್ಪಿಸುವುದರಲ್ಲೇ ಎರಡು ವರ್ಷದಿಂದ ಅಧಿಕಾರಿ ವರ್ಗ ಲಕ್ಷೃ ವಹಿಸಿದೆ. ಹೀಗಾಗಿ ಜಿಲ್ಲೆಯ ಹೊಸ ಗೆಜೆಟಿಯರ್‌ಗೆ ಸಂಬಂಧಿಸಿದಂತೆ ಸದ್ಯಕ್ಕೆ ನನಗೆ ಯಾವುದೆ ಮಾಹಿತಿ ಇಲ್ಲ.
    | ಅಶೋಕ ದುಡಗುಂಟಿ ಅಪರ ಜಿಲ್ಲಾಧಿಕಾರಿ, ಬೆಳಗಾವಿ

    ಬೆಳಗಾವಿ ಜಿಲ್ಲೆಯ ಹೊಸ ಗೆಜೆಟಿಯರ್ ಪ್ರಕಟವಾಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತೇನೆ. ಇದಕ್ಕೆ ಸಂಬಂಧಪಟ್ಟ ಪೂರಕ ಮಾಹಿತಿ ಜಿಲ್ಲೆಯಿಂದ ಹೋಗಿದೆಯೋ ಇಲ್ಲವೋ ಎನ್ನುವುದನ್ನೂ ಸಹ ಸಂಬಂಧಪಟ್ಟವರನ್ನು ಕೇಳಿ ಮಾಹಿತಿ ಪಡೆಯುತ್ತೇನೆ.
    | ಎಂ.ಜಿ. ಹಿರೇಮಠ. ಜಿಲ್ಲಾಧಿಕಾರಿ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts