More

    ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಪಸ್ವರ

    ಗದಗ: ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಚುನಾವಣೆ ಮೇ 9ಕ್ಕೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಪುನರಾಯ್ಕೆ ಬಯಸಿರುವ ಹಾಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಸಮ್ಮೇಳನ ನಡೆಸುವುದು ಸೂಕ್ತವೇ ಎಂಬ ಚರ್ಚೆ ಶುರುವಾಗಿದೆ.

    ನಗರದ ಸಾಹಿತ್ಯ ಭವನದಲ್ಲಿ ಫೆ.20 ಮತ್ತು 21ರಂದು ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಮುಂದಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯ ಕೇಳಿ ಬರುತ್ತಿದೆ. ಮಾ.3ಕ್ಕೆ ಹಾಲಿ ಅಧ್ಯಕ್ಷ ಶರಣು ಗೋಗೇರಿ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.

    2020 ಮಾರ್ಚ್ 14 ಮತ್ತು ಮಾ. 15ರಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ರವೀಂದ್ರ ಕೊಪ್ಪರ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಂದು ಕೋವಿಡ್-19 ವ್ಯಾಪಿಸಿದ್ದರಿಂದ ಸಮ್ಮೇಳನವನ್ನು ರದ್ದುಪಡಿಸಲಾಯಿತು. ಇದೀಗ ಕರೊನಾ ಸೋಂಕು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಸರಳವಾಗಿ ಸಮ್ಮೇಳನ ನಡೆಸಲು, ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಸಮ್ಮೇಳನದ ದಿನಾಂಕ ಘೋಷಿಸಲಾಗಿದೆ.

    ಆದರೆ, ಜಿಲ್ಲಾ ಘಟಕದ ನಿರ್ಣಯಕ್ಕೆ ಸ್ಥಳೀಯ ಹಲವಾರು ಸಾಹಿತಿಗಳು, ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಸಾಪ ಹಾಲಿ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಅವರ ಅಧಿಕಾರಾವಧಿ ತಿಂಗಳಿಗಿಂತ ಕಡಿಮೆ ಇದೆ. ಹೀಗಾಗಿ, ಚುನಾವಣೆ ಘೋಷಣೆಯಾಗಿರುವ ಈ ಸಮಯದಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸುವ ಹಠಮಾರಿತನ ಸರಿಯಲ್ಲ. ಅಲ್ಲದೆ, ಹಾಲಿ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಅವರು ಮತ್ತೊಂದು ಅವಧಿಗೆ ಜಿಲ್ಲಾಧ್ಯಕ್ಷರಾಗಲು ಸಿದ್ಧತೆ ನಡೆಸಿದ್ದಾರೆ. ಹೀಗಿರುವಾಗ ಚುನಾವಣೆ ಘೋಷಣೆ ನಂತರವೂ ಸಮ್ಮೇಳನ ನಡೆಸಲು ಮುಂದಾಗಿರುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗತೊಡಗಿದೆ.

    ಚುನಾವಣೆ ಅಧಿಕಾರಿ ನೇಮಕ: ಕಸಾಪ ಚುನಾವಣೆ ದಿನಾಂಕ ಘೊಷಣೆಯಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ತಹಸೀಲ್ದಾರರು ಕಸಾಪ ಚುನಾವಣೆಯ ಚುನಾವಣಾಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿ ಪ್ರಕಾರ ಅವಧಿ ಮುಕ್ತಾಯಗೊಳ್ಳುವ 6 ತಿಂಗಳ ಮೊದಲೇ ಚುನಾವಣೆಯ ಸಿದ್ಧತೆಗಳು ನಡೆಯಬೇಕಾಗಿದ್ದು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವ ಹೊಣೆಗಾರಿಕೆ ನಿರ್ಗಮಿಸುವ ಕಸಾಪ ಅಧ್ಯಕ್ಷರದ್ದು. ಇಂಥ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂಬ ಮಾತುಗಳು ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿವೆ.

    ಯಾವುದೇ ಕಾರಣಕ್ಕೂ ಜಿಲ್ಲಾ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬಾರದು. ಸಮ್ಮೇಳನ ನಡೆಸಿದರೆ ಸರ್ಕಾರ ರೂಪಿಸಿದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುವುದು ಖಚಿತ. ಹೀಗಾಗಿ ಸಮ್ಮೇಳನವನ್ನು ಮುಂದೂಡಬೇಕು. ಕನ್ನಡ ನಾಡು ನುಡಿ ಸಂಸ್ಕೃತಿಯ ಏಳಿಗೆಗಾಗಿ ಕಟ್ಟಿದ ಕನ್ನಡಿಗರ ಈ ಮಾತೃಸಂಸ್ಥೆಗೆ ಅಧಿಕಾರದಾಹಿಗಳು, ಜಾತಿವಾದಿಗಳು ಪ್ರವೇಶಿಸುವುದನ್ನು ಪ್ರಜ್ಞಾವಂತರು ವಿರೋಧಿಸಬೇಕು. ಕಸಾಪ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿರುವುದನ್ನು ರದ್ದುಪಡಿಸಿ ಮೂರು ವರ್ಷಕ್ಕೆ ಸೀಮಿತಗೊಳಿಸಬೇಕು.
    |ಡಿ.ವಿ. ಬಡಿಗೇರ, ಚುಟುಕು ಸಾಹಿತಿ ಗದಗ, |ಮನೋಹರ ಮೇರವಾಡೆ, ವಕೀಲ ಗದಗ

    ಮಾ.3ರವರೆಗೆ ನನ್ನ ಅಧಿಕಾರವಧಿ ಇದ್ದು, ಅಲ್ಲಿಯವರೆಗೆ ಸಾಹಿತ್ಯಕ ಚಟುವಟಿಕೆ ನಡೆಸಲು ಯಾವುದೇ ತೊಂದರೆ ಇಲ್ಲ. ಜಿಲ್ಲಾ ಸಮ್ಮೇಳನ ನಡೆಯಬಾರದು ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಕಸಾಪ ಬೈಲಾದಲ್ಲಿ ಅವಧಿ ಪೂರ್ಣಗೊಂಡು ಆರು ತಿಂಗಳು ಗತಿಸಿದ್ದರೆ ಇಂತಹ ಕಾರ್ಯಕ್ರಮ ಮಾಡಲು ಅವಕಾಶವಿಲ್ಲ. ಆದ್ದರಿಂದ ಬೈಲಾ ಪ್ರಕಾರ ನಡೆದುಕೊಳ್ಳಲಾಗುವುದು ಹಾಗೂ ನಿಗದಿಯಂತೆ ಜಿಲ್ಲಾ ಸಮ್ಮೇಳನ ನಡೆಯಲಿದೆ.
    |ಶರಣು ಗೋಗೇರಿ, ಕಸಾಪ ಜಿಲ್ಲಾಧ್ಯಕ್ಷ, ಗದಗ

    ಸಮ್ಮೇಳನವೆಂದರೆ ಸಾಹಿತ್ಯಾಸಕ್ತರು ಸೇರಬೇಕು. ಕನ್ನಡದ ಹಬ್ಬವನ್ನಾಗಿ ಆಚರಿಸಬೇಕು. ತರಾತುರಿಯಲ್ಲಿ ಸಮ್ಮೇಳನ ಆಯೋಜನೆ ಮಾಡುವುದರಲ್ಲಿ ಅರ್ಥವಿಲ್ಲ. ಕರೊನಾ ಅಬ್ಬರ ಇನ್ನಷ್ಟು ತಗ್ಗಿದ ನಂತರ ಏರ್ಪಡಿಸಬಹುದು. ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು.
    ವಿವೇಕಾನಂದಗೌಡ ಪಾಟೀಲ, ಸಾಹಿತಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts