More

    ಜಿಲ್ಲಾದ್ಯಂತ ಸಂಡೇ ಲಾಕ್​ಡೌನ್​ಗೆ ಬೆಂಬಲ

    ಕಾರವಾರ: ಜಿಲ್ಲಾದ್ಯಂತ ಸಂಡೆ ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು, ಬಸ್, ಆಟೋ ಟ್ಯಾಕ್ಸಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಖಾಸಗಿ ವಾಹನಗಳ ಓಡಾಟ ಅಲ್ಪಸ್ವಲ್ಪ ಇತ್ತು. ಕಾರವಾರದಲ್ಲಿ ಮೀನು ಮಾರುಕಟ್ಟೆಯ ಎದುರು ಜನರ ಓಡಾಟ ಕಂಡುಬಂತು.

    ಶಿರಸಿ ತಾಲೂಕಿನಾದ್ಯಂತ ಭಾನುವಾರದ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ ದೊರೆಯಿತು. ಔಷಧ, ಹಾಲು, ಹೂವು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ಸಂಪೂರ್ಣ ಬಂದ್ ಆಗಿತ್ತು.

    ಅತ್ಯಂತ ಜನನಿಬಿಡ ಪ್ರದೇಶವಾದ ಇಲ್ಲಿನ ಸಿಪಿ ಬಜಾರ್​ನಲ್ಲಿ ಕೂಡ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದ್ದರು. ಬೆಳಗ್ಗೆ 6ರಿಂದಲೇ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು. ವಾಹನ ದಟ್ಟಣೆ ಇರುತ್ತಿದ್ದ ಐದು ಸರ್ಕಲ್, ಶಿವಾಜಿ ಚೌಕ ಭಾಗದಲ್ಲಿ ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. ಸಾರಿಗೆ ಸಂಸ್ಧೆ ಬಸ್, ಖಾಸಗಿ ಬಸ್, ಆಟೋ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು.

    ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭಾನುವಾರದ ಕರ್ಫ್ಯೂ ನಿಮಿತ್ತ ಜನರು ಮನೆಯಿಂದ ಹೊರ ಬರಲಿಲ್ಲ. ಪಟ್ಟಣದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆರಳೆಣಿಕೆಯಷ್ಟು ಜನ ಅವಶ್ಯ ವಸ್ತುಗಳನ್ನು ಪಡೆಯಲು ಮಾತ್ರ ಮನೆಯಿಂದ ಹೊರಗೆ ಬಂದಿದ್ದರು. ಅದರಂತೆ ಗ್ರಾಮೀಣ ಪ್ರದೇಶದಲ್ಲಿಯೂ ಜನಸಂಚಾರ ಸ್ಥಗಿತಗೊಂಡು ಅಂಗಡಿಗಳು ಮುಚ್ಚಿದ್ದವು.

    ಯಲ್ಲಾಪುರದಲ್ಲಿ ಭಾನುವಾರದ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬೆರಳೆಣಿಕೆಯ ಜನರನ್ನು ಬಿಟ್ಟರೆ ಹೆಚ್ಚಿನ ಜನತೆ ಮನೆಯಿಂದ ಹೊರಬರಲಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

    ಹಳಿಯಾಳ ತಾಲೂಕಿನಲ್ಲಿ ಲಾಕ್​ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಪಟ್ಟಣ ಸೇರಿ ಗ್ರಾಮಾಂತರ ಭಾಗದಲ್ಲಿ ಜನ ಮನೆಯಲ್ಲಿಯೇ ಉಳಿದು ಕರ್ಫ್ಯೂ ಬೆಂಬಲಿಸಿದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್​ಗಳನ್ನು ಹೊರತುಪಡಿಸಿ ಇತರ ವಹಿವಾಟುಗಳು ಸಂಪೂರ್ಣ ಸ್ಥಬ್ದವಾಗಿದ್ದವು. ಪೊಲೀಸ್ ಇಲಾಖೆಯವರು ಅನಗತ್ಯವಾಗಿ ಬೈಕ್​ಗಳಲ್ಲಿ ಓಡಾಡುವರನ್ನು ತಡೆದು ತಿಳಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts