More

    ಜಾನುವಾರು ವ್ಯಾಪಾರಿ ಮೃತದೇಹ ಪತ್ತೆ

    ಹಾನಗಲ್ಲ: ತಾಲೂಕಿನ ಮಾವಕೊಪ್ಪ ಗ್ರಾಮದ ಸೇತುವೆ ಬಳಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.

    ಮೃತ ವ್ಯಕ್ತಿಯನ್ನು ಹಾವಣಗಿ ಗ್ರಾಮದ ಜಾನುವಾರು ವ್ಯಾಪಾರಿ ಸೋಮಪ್ಪ ಮಹದೇವಪ್ಪ ಹಲಸೂರ (42) ಎಂದು ಗುರುತಿಸಲಾಗಿದೆ.

    ಮಾವಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಸೇತುವೆಯ ಬಳಿ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಸೋಮಪ್ಪ ಮಾವಕೊಪ್ಪ ಸಮೀಪದ ದ್ಯಾಮನಕೊಪ್ಪ ಗ್ರಾಮದ ಸಹೋದ್ಯೋಗಿ ಪರಮೇಶ ಅಡಿವೆಪ್ಪ ಯತ್ನಳ್ಳಿ ಎಂಬುವರ ಮನೆಗೆ ಶನಿವಾರ ಆಗಮಿಸಿದ್ದ ಎನ್ನಲಾಗಿದೆ. ಇದೇ ವೇಳೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ನಡೆದು ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

    ಘಟನೆಗೆ ಸಂಬಂಧಿಸಿ ಪರಮೇಶ ಯತ್ನಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಮುಂಡಗೋಡ ತಾಲೂಕಿನ ಇನ್ನೋರ್ವ ವ್ಯಕ್ತಿಯೂ ಪಾಲ್ಗೊಂಡಿದ್ದಾನೆ ಎನ್ನಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಭಾನುವಾರ ಬೆಳಗ್ಗೆ ಬೆಳಕಿಗೆ ಬಂದ ಈ ಪ್ರಕರಣವನ್ನು ಹಾನಗಲ್ಲ ಸಿಪಿಐ ಪ್ರವೀಣ ನೀಲಮ್ಮನವರ ಹಾಗೂ ಪೊಲೀಸರ ತಂಡ ಕೇವಲ ಒಂದು ಗಂಟೆಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್​ಪಿ ಕಲ್ಲೇಶಪ್ಪ, ಪಿಎಸ್​ಐಗಳಾದ ಬಿ.ಎನ್.ಮಂಜುನಾಥ್, ಎನ್.ಎಚ್.ಆಂಜನೇಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಾವಿನ ಸುತ್ತ ಸಂಶಯದ ಹುತ್ತ: ಹಾವಣಗಿಯ ಸೋಮಪ್ಪ ಹಾಗೂ ದ್ಯಾಮನಕೊಪ್ಪ ಗ್ರಾಮದ ಪರಮೇಶ ಜಂಟಿಯಾಗಿ ಹಲವು ವರ್ಷಗಳಿಂದ ಜಾನುವಾರು ವ್ಯಾಪಾರ ಮಾಡುತ್ತಿದ್ದು, ಶನಿವಾರ ದ್ಯಾಮನಕೊಪ್ಪ ಗ್ರಾಮಕ್ಕೆ ಬಂದು ತಂಗಿದ್ದ ವೇಳೆ ಇಬ್ಬರೂ ರಾತ್ರಿ ಊಟ ಮಾಡಿದ್ದರೆನ್ನಲಾಗಿದೆ. ತಡರಾತ್ರಿ ನಡೆದ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಕೊಲೆಯಾದ ಸೋಮಣ್ಣನ ಬೈಕ್ ಮೇಲೆ ಮೃತದೇಹವನ್ನು ತಂದು ಸೇತುವೆ ಬಳಿ ಬೈಕ್ ಅಪಘಾತದ ರೀತಿಯಲ್ಲಿ ಬೀಳಿಸಲಾಗಿದೆ. ಬೈಕನ್ನು ಸೇತುವೆಗೆ ಡಿಕ್ಕಿ ಹೊಡೆದಂತೆ ನಿಲ್ಲಿಸಿ, ಅದರ ಪಕ್ಕದಲ್ಲಿ ಸೇತುವೆಯಡಿ ಕಾಲುವೆಗೆ ಮುಖಮಾಡಿ ಬಿದ್ದಂತೆ ಮೃತದೇಹವನ್ನು ಎಸೆಯಲಾಗಿದೆ. ಬೈಕ್ ಅಪಘಾತವಾಗಿ ತಲೆಗೆ ಏಟು ಬಿದ್ದು ಮೃತಪಟ್ಟಂತೆ ಪ್ರಕರಣವನ್ನು ಸೃಷ್ಟಿಸಲು ಅಲ್ಲಿಯ ಕಲ್ಲುಗಳಿಂದ ತಲೆಗೆ ರಕ್ತ ಬರುವಂತೆ ಜಜ್ಜಲಾಗಿದೆ. ಆದರೆ, ಮನೆಯಿಂದ ಸೇತುವೆಯವರೆಗೂ ಹೊತ್ತು ತಂದಿರುವ ಮೃತದೇಹದಿಂದ ಸೋರಿದ್ದ ರಕ್ತದ ಕಲೆಗಳು ಆರೋಪಿಯ ಮನೆಯಿಂದ ಸೇತುವೆಯವರೆಗೆ ರಸ್ತೆಯುದ್ದಕ್ಕೂ ಸಾಕ್ಷಿ ಹೇಳುತ್ತಿವೆ. ರಕ್ತಸಿಕ್ತ ಕಲ್ಲುಗಳು ರಸ್ತೆಬದಿ ಪೊಲೀಸರ ಗಮನ ಸೆಳೆಯುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts