More

    ಜಾನುವಾರುಗಳಿಗೆ ‘ಗಂಟು’ಬಿದ್ದಿದೆ ರೋಗ

    ಹಾನಗಲ್ಲ: ತಾಲೂಕಿನ ಹಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ (ಚರ್ಮ ಗಂಟು ರೋಗ) ಕಾಣಿಸಿಕೊಂಡಿದ್ದು, ಕಾಯಿಲೆ ಹತೋಟಿಗೆ ರೈತರು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ದನ-ಕರುಗಳ ಆರೋಗ್ಯ ಕಾಪಾಡಬೇಕು ಎಂದು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ ತಿಳಿಸಿದ್ದಾರೆ.

    ‘ವಿಜಯವಾಣಿ’ ಜತೆ ಮಾತನಾಡಿದ ಅವರು, ‘ತಾಲೂಕಿನಲ್ಲಿ ಇತ್ತೀಚೆಗೆ ರೋಗ ಉಲ್ಬಣಗೊಳ್ಳುತ್ತಿದ್ದು, ಅಂದಾಜು 250ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಪಶು ಇಲಾಖೆ ಸಿಬ್ಬಂದಿ ಅಗತ್ಯ ಚಿಕಿತ್ಸೆ ನೀಡಿ ರೋಗ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ. ಈ ರೋಗವು ನೊಣ, ಸೊಳ್ಳೆ, ಉಣ್ಣೆಗಳ ಮೂಲಕ ಜಾನುವಾರುಗಳಿಗೆ ಹರಡುತ್ತದೆ. ತಾಲೂಕಿನ ಚಿಕ್ಕೇರಿಹೊಸಳ್ಳಿ, ಆರೇಗೊಪ್ಪ, ಹುಣಶೆಟ್ಟಿಕೊಪ್ಪ, ಕಾಮನಹಳ್ಳಿ, ಮಹರಾಜಪೇಟೆ, ಆಡೂರು, ಮಲ್ಲಿಗ್ಗಾರ, ನರೇಗಲ್, ಕೂಡಲ ಸೇರಿದಂತೆ 20 ಗ್ರಾಮಗಳಲ್ಲಿ 250 ಜಾನುವಾರುಗಳಲ್ಲಿ ಈ ಸೋಂಕು ಕಂಡುಬಂದಿದೆ’ ಎಂದರು.

    ರೋಗದ ಲಕ್ಷಣ-ಚಿಕಿತ್ಸಾ ಕ್ರಮ:

    ಜಾನುವಾರುಗಳಲ್ಲಿ ವಿಪರೀತ ಜ್ವರ, ಚರ್ಮದ ಮೇಲೆ ಗಂಟುಗಳು, ಗಾಯಗಳಾಗುವುದು, ಗಾಯಗಳಿಗೆ ಹುಳು ಬೀಳುವುದು, 2 ರಿಂದ 5 ಸೆಂ.ಮೀ.ಗಳಷ್ಟು ಗುಳ್ಳೆಗಳಾಗುವುದು, ಕಾಲು ಬಾವು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೊಟ್ಟಿಗೆಗಳಿಗೆ ಸೊಳ್ಳೆ ಬಾರದಂತೆ ಸೊಳ್ಳೆ ಪರದೆ ಅಳವಡಿಸಬೇಕು. ಬೆಳಗ್ಗೆ ಮತ್ತು ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕುವುದು, ರೋಗಗ್ರಸ್ತ ದನಗಳಿಂದ ಆರೋಗ್ಯವಂತ ದನಗಳನ್ನು ಬೇರ್ಪಡಿಸುವುದು, ಕೊಟ್ಟಿಗೆಯಲ್ಲಿ ಪಿನಾಯಿಲ್ ದ್ರಾವಣ ಸಿಂಪಡಿಸಿ ಸ್ವಚ್ಛವಾಗಿಡುವುದರಿಂದ ರೋಗ ತಡೆಗಟ್ಟಬಹುದು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರು ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದಿರುವುದರಿಂದ ಲಕ್ಷಣಾಧಾರಿತವಾಗಿ ಆಂಟಿಬಯಾಟಿಕ್ ಕೊಡಲಾಗುತ್ತದೆ ಎಂದು ಡಾ.ಗಿರೀಶ ತಿಳಿಸಿದ್ದಾರೆ.

    ಅಗತ್ಯ ಕ್ರಮಕ್ಕೆ ಶಾಸಕ ಉದಾಸಿ ಸೂಚನೆ

    ಲಂಪಿಸ್ಕಿನ್ ರೋಗ ತಾಲೂಕಿನಾದ್ಯಂತ ಹರಡುತ್ತಿದ್ದು, ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಂತೆ ಪಶು ಇಲಾಖೆ ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಉದಾಸಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ‘ತಾಲೂಕಿನ ಪಶು ವೈದ್ಯರು ಹಾಗೂ ಸಿಬ್ಬಂದಿ ದನ-ಕರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಆರೋಗ್ಯ ರಕ್ಷಣೆ, ವಿಮಾ ಸೌಲಭ್ಯ ಮತ್ತು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮ ಕೈಗೊಂಡಿದ್ದಾರೆ. ವಾರದಲ್ಲಿ ನಾಲ್ಕು ದಿನ ತಾಲೂಕಿನಲ್ಲಿ ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೈತರು ಕೂಡ ಈ ಬಗ್ಗೆ ನಿರ್ಲಕ್ಷ್ಯಹಿಸದೇ ಕೂಡಲೆ ಪಶು ವೈದ್ಯರ ಗಮನಕ್ಕೆ ತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇದು ಮನುಷ್ಯನಿಗೆ ಹರಡುವುದಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts