More

    ಜಾತ್ರೆಗೆ ಮುನ್ನ ಅಧಿಕಾರಿಗೆ ಬರುತ್ತೆ ಎಚ್ಚರಿಕೆ ಸಂದೇಶ

    ಶರಣು ಮಹಾಗಾಂವ ಸೇಡಂ: ಕರೊನಾ ಮಹಾಮಾರಿಗೆ ದೇಶವಲ್ಲದೆ ಇಡೀ ಜಗತು ತತ್ತರಿಸಿದೆ. ಆದರೂ ಜಿಲ್ಲೆಯ ಕೆಲವೆಡೆ ಜನತೆ ಯಾವುದಕ್ಕೂ ಕ್ಯಾರೆ ಎನ್ನದೆ ಜಾತ್ರೆ, ಸಂತೆ ನಡೆಸುತ್ತಿರುವುದು ಆಡಳಿತ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂಥ ಜನಸಂದಣಿ ಸೇರುವ ಉತ್ಸವ, ಜಾತ್ರೆ ತಡೆಯುವ ನಿಟ್ಟಿನಲ್ಲಿ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ವಿನೂತನ ಪ್ರಯತ್ನ ಮಾಡಿದ್ದು, ಪ್ರಶಂಸೆಗೆ ಪಾತ್ರವಾಗಿದೆ.
    ಇತ್ತೀಚೆಗೆ ಚಿತ್ತಾಪುರ ತಾಲೂಕಿನ ರಾವೂರ, ಕಲಬುರಗಿಯ ಸಾವಳಗಿ, ಆಳಂದದ ಭೂಸನೂರ ಸೇರಿ ಕೆಲವು ಗ್ರಾಮಗಳಲ್ಲಿ ಜಾತ್ರೆ ಹಾಗೂ ಉತ್ಸವ ನಡೆಸಿದ್ದು, ಅಧಿಕಾರಿಗಳ ತಲೆದಂಡವೂ ಆಗಿದೆ. ಇದನ್ನು ಮನಗಂಡ ತಹಸೀಲ್ದಾರ್ ಅವರು ತಾಲೂಕಿನಲ್ಲಿ ನಡೆಯುವ ಜಾತ್ರೆ, ಸಂತೆಗಳ ದಿನಾಂಕದ ಪಟ್ಟಿ ಮಾಡಿದ್ದಾರೆ. ಅಲ್ಲದೆ ಕಾಲಕಾಲಕ್ಕೆ ಆಯಾ ಪ್ರದೇಶದ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೇಖಪಾಲಕರು ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗೆ ತಾಲೂಕು ಆಡಳಿತದಿಂದ ಸಂದೇಶ ಕಳುಹಿಸುವ ಮೂಲಕ ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗುತ್ತಿದೆ.
    ಸಂದೇಶ ರವಾನಿಸುವುದು ಹಾಗೂ ಜಾತ್ರೆ, ಉತ್ಸವಗಳ ಪಟ್ಟಿ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಉತ್ಸವ ನಡೆಯುವುದಕ್ಕೂ ಮುಂಚಿತವಾಗಿ ಅಧಿಕಾರಿಗಳಿಗೆ ಜಾಗ್ರತೆ ವಹಿಸುವಂತೆ ಸಂದೇಶ ರವಾನಿಸುವುದು ಈ ಸಿಬ್ಬಂದಿ ಕೆಲಸ. ಈ ಪ್ರಯತ್ನಕ್ಕೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

    ಕಲಬುರಗಿ ಜಿಲ್ಲೆಯ ಕೆಲವೆಡೆ ಕಣ್ತಪ್ಪಿಸಿ ಉತ್ಸವ ನಡೆಸಿದ್ದರಿಂದ ಅಧಿಕಾರಿಗಳ ತಲೆದಂಡವಾಗಿದೆ. ಇದು ನಮ್ಮ ತಾಲೂಕಿನಲ್ಲಿ ಮರುಕಳಿಸಬಾರದು ಎಂಬ ಕಾರಣಕ್ಕೆ ಜಾತ್ರೆ, ಸಂತೆ ನಡೆಯುವ ದಿನಾಂಕ, ವಾರದ ಪಟ್ಟಿ ಮಾಡಲಾಗಿದೆ. ಇದನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿ ಆಯಾ ಪ್ರದೇಶದ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ಕ್ರಮ ವಹಿಸಲು ಸೂಚಿಸಲಾಗುತ್ತಿದೆ. ಇದರಿಂದಾಗಿ ಸಂಭವನೀಯ ಸಮಸ್ಯೆ ತಡೆಯಲು ಸಹಕಾರಿಯಾಗಲಿದೆ.
    | ಬಸವರಾಜ ಬೆಣ್ಣೆಶಿರೂರ ತಹಸೀಲ್ದಾರ್ ಸೇಡಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts