More

    ಜನ-ವಾಹನ ಸಂಚಾರ ದುಸ್ತರ

    ರಟ್ಟಿಹಳ್ಳಿ: ಹದಗೆಟ್ಟ ರಸ್ತೆ, ಅಕ್ಕಪಕ್ಕ ಕಸದ ರಾಶಿ, ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ. ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಸಂಚಕಾರ!

    ಇದು ಪಟ್ಟಣದ ಶ್ರೀ ಹೊಳೆಸಾಲು ದುರ್ಗಾದೇವಿ ದೇವಸ್ಥಾನ ಹಾಗೂ ಹಿಂದು ರುದ್ರಭೂಮಿ ಸಂರ್ಪಸುವ ಏಕೈಕ ಮುಖ್ಯರಸ್ತೆಯ ದುಸ್ಥಿತಿ.

    ದುರ್ಗಾದೇವಿ ನಗರದ ಕ್ರಾಸ್​ನಿಂದ ಹಿಂದು ರುದ್ರಭೂಮಿವರೆಗಿನ 2 ಕಿಮೀ ರಸ್ತೆಯನ್ನು ಪಟ್ಟಣ ಪಂಚಾಯಿತಿಯಿಂದ 2007-08ರಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಕಾಂಕ್ರೀಟ್ ಮಾಡಲಾಗಿತ್ತು. ಹಿಂದು ಧರ್ಮದ ವೀರಶೈವ ಲಿಂಗಾಯತ ಸಮಾಜ ಹೊರತುಪಡಿಸಿ ಉಳಿದೆಲ್ಲ ಸಮಾಜದವರು ಶವ ಸಂಸ್ಕಾರಕ್ಕೆ ಇದೇ ರುದ್ರಭೂಮಿಯನ್ನು ಅವಲಂಬಿಸಿದ್ದಾರೆ. ಈ ಮಾರ್ಗದಲ್ಲಿನ ಹೊಳೆಸಾಲು ದುರ್ಗಾದೇವಿ ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ದೇವಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಆದರೆ, ಈಗ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ರಸ್ತೆ ನಿರ್ವಣದ ನಂತರ ಒಮ್ಮೆಯೂ ದುರಸ್ತಿ ಮಾಡಿಲ್ಲ.

    ರಸ್ತೆ ಅಕ್ಕಪಕ್ಕದ ಕೆಲ ಗೂಡಂಗಡಿಯವರು, ಚಿಕನ್ ಮಾರಾಟ ಅಂಗಡಿಯವರು ರಸ್ತೆ ಬದಿ ತ್ಯಾಜ್ಯ, ಕಸ ಹಾಕುತ್ತಾರೆ. ಕೆಲವರು ರಸ್ತೆ ಬದಿ ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ದೇವಸ್ಥಾನ, ಹಿಂದು ರುದ್ರಭೂಮಿಗೆ ಹೋಗಿ ಬರುವಾಗ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ವಣವಾಗಿದೆ.

    ಪಪಂನವರು ಹಿಂದೆ ಈ ರಸ್ತೆ ಬದಿ ಹಾಕಿರುವ ಕಸವನ್ನು ಬೇರೆಡೆ ವಿಲೇವಾರಿ ಮಾಡಿ, ಮಲ-ಮೂತ್ರ ವಿಸರ್ಜಿಸಬಾರದು ಎಂಬ ನಾಮಫಲಕ ಅಳವಡಿಸಿದ್ದರು. ಜನರಿಗೆ ಹೂ ನೀಡಿ ಜಾಗೃತಿಯನ್ನೂ ಮೂಡಿಸಿದ್ದರು. ಆದರೆ, ಜನರು ಮಾತ್ರ ಎಚ್ಚೆತ್ತುಕೊಂಡಿಲ್ಲ.

    ಹದಗೆಟ್ಟ ಈ ರಸ್ತೆಯಲ್ಲಿ ನಿತ್ಯ ಭಕ್ತರು, ರುದ್ರಭೂಮಿಗೆ ಹೋಗುವವರಿಗೆ ತೊಂದರೆಯಾಗಿದೆ. ದಸರಾ, ದೀಪಾವಳಿ ಹಬ್ಬಗಳಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಹೆಚ್ಚು ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಜನರು ರಸ್ತೆ ಬದಿ ಕಸ ಹಾಕದಂತೆ, ಮಲ-ಮೂತ್ರ ವಿಸರ್ಜನೆ ಮಾಡದಂತೆ ಪಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
    | ಸಂತೋಷ ಬಾಜೀರಾಯ, ಸ್ಥಳೀಯ ನಿವಾಸಿ

    ಎಸ್​ಎಫ್​ಸಿ ಯೋಜನೆಯಡಿ ಅವಶ್ಯ ಕಾಮಗಾರಿಗಳನ್ನು ಕೈಗೊಳ್ಳಲು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದರು. ರಟ್ಟಿಹಳ್ಳಿ ದುರ್ಗಾದೇವಿ ರಸ್ತೆ ಕಾಂಕ್ರೀಟ್ ಮಾಡಲು ಕ್ರಿಯಾಯೋಜನೆ ಕಳುಹಿಸಲಾಗಿದೆ. ಶೀಘ್ರದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ರಸ್ತೆ ಅಕ್ಕಪಕ್ಕ ಯಾರೂ ಗಲೀಜು ಮಾಡಬಾರದೆಂದು ಅಲ್ಲಿನ ಜನರಿಗೆ ತಿಳಿಸಲಾಗಿದೆ. ಕಸದ ರಾಶಿಯನ್ನು ನಾಳೆಯೇ ವಿಲೇವಾರಿ ಮಾಡಿ ಜನರಿಗೆ ಮತ್ತೊಮ್ಮೆ ಎಚ್ಚರಿಸಲಾಗುವುದು.
    | ರಾಜಾರಾಮ ಪವಾರ ರಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts