More

    ಜನಸಂಪರ್ಕದಲ್ಲಿದ್ದರೆ ಸಂಘಟನೆಯಲ್ಲಿ ಬಲ

    ವಿಜಯವಾಣಿ ಸುದ್ದಿಜಾಲ ಶಿರಸಿ: ಪಕ್ಷ ಅಧಿಕಾರದಲ್ಲಿ ಇದ್ದಾಗ ಜನ ಸಂಪರ್ಕದಲ್ಲಿ ಕೆಲಸ ಮಾಡುವ ರೀತಿಗೂ ವಿರೋಧ ಪಕ್ಷದಲ್ಲಿದ್ದಾಗ ಕೆಲಸ ಮಾಡುವಲ್ಲೂ ಅಂತರ ಇದೆ. ಕಾರ್ಯಕರ್ತರು, ಮುಖಂಡರು ನಿರಂತರ ಜನಸಂಪರ್ಕದಲ್ಲಿದ್ದಾಗ ಮಾತ್ರ ಸಂಘಟನೆಗೆ ಬಲ ಬರುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

    ಇಲ್ಲಿನ ಟಿ.ಎಂ.ಎಸ್. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಸಂಘಟನೆ ಮತ್ತು ಸಂಘರ್ಷದ ಕೊರತೆ ಇದೆ. ಹಾಗಾಗಿ ಜವಾಬ್ದಾರಿಯ ಹುದ್ದೆಯಲ್ಲಿ ಇದ್ದವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಹುದ್ದೆಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪಾರದರ್ಶಕವಾಗಿರಬೇಕು. ಪಂಚಾಯಿತಿ ಚುನಾವಣೆ ಸ್ಪರ್ಧಿಗಳನ್ನು ತಾಲೂಕು ಮಟ್ಟದಲ್ಲಿ ನಿರ್ಧರಿಸಲು ಸಾಧ್ಯವಾದಷ್ಟೂ ಪಂಚಾಯಿತಿ ಮಟ್ಟದ ಪ್ರಮುಖರು ಸಮಾಲೋಚಿಸಿ ತೀರ್ವಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

    ಪಕ್ಷದ ಜಿಲ್ಲಾ ಮಟ್ಟದ ಪ್ರಮುಖರು, ಮಾಜಿ ಶಾಸಕರು, ಶಾಸಕರು ಸಂಘಟನೆಯ ಜವಾಬ್ದಾರಿ ನಿರ್ವಹಿಸಬೇಕು. ಎಲ್ಲರೊಂದಿಗೆ ಸಮಾಲೋಚಿಸಿ ಸೂಕ್ತ ತಿರ್ವನ ಕೈಗೊಂಡು ಬ್ಲಾಕ್ ಅಧ್ಯಕ್ಷರುಗಳಿಗೆ ಬಲ ನೀಡಬೇಕೆಂದು ಸೂಚಿಸಿದರು.

    ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಪಕ್ಷದ ಸಂಘಟನೆ, ಬೂತ್, ಘಟಕ ಹಾಗೂ ವಾರ್ಡ್ ಸಮಿತಿಗಳ ಪುನಃ ಸಂಘಟನೆಯ ಪ್ರಗತಿಯನ್ನು ಸಭೆಯಲ್ಲಿ ತಿಳಿಸಿ, ಈ ಕುರಿತು ಕ್ರಮವಹಿಸದ ಬ್ಲಾಕ್​ಗಳ ಅಧ್ಯಕ್ಷರಿಗೆ ಮುಂಬರುವ ಒಂದು ತಿಂಗಳ ಒಳಗಾಗಿ ಈ ಕಾರ್ಯ ಪೂರೈಸುವಂತೆ ಸೂಚಿಸಿದರು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸದಸ್ಯರ ಅಭಿಪ್ರಾಯ ಸಲಹೆ ಸೂಚನೆಗಳನ್ನು ಆಹ್ವಾನಿಸಿ ಮತ್ತೊಮ್ಮೆ ಹಿರಿಯ ಮುಖಂಡರು ಸಭೆ ಸೇರಿ ಕಾರ್ಯಸೂಚಿ ಸಿದ್ದಪಡಿಸಿದಲ್ಲಿ ಅದರಂತೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಸಂತೋಷ ನಾಯ್ಕ, ಗೋವಿಂದ ನಾಯ್ಕ, ಜಿಲ್ಲಾ ಪದಾಧಿಕಾರಿಗಳಾದ ಶಂಭು ಶೆಟ್ಟಿ, ಸಾಯಿ ಗಾಂವಕರ್. ಎಂ.ಎನ್. ಸುಬ್ರಹ್ಮಣ್ಯ, ಸಂತೋಷ ಶೆಟ್ಟಿ, ಸುಜಾತಾ ಗಾವಂಕರ, ಎನ್ ಕೆ. ಭಟ್ಟ, ಕೆಪಿಸಿಸಿ ಸದಸ್ಯ ರಮಾನಂದ ನಾಯಕ, ಸತಿಶ್ ಸೈಲ್, ಸತೀಶ ನಾಯ್ಕ, ಎಂ.ಆರ್. ನಾಯಕ ಇತರರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ ನಾಯ್ಕ ಮಧುರವಳ್ಳಿ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts