More

    ಜನಸಂಚಾರ ವಿರಳ.. ಕರ್ಫ್ಯೂ ಅನುಷ್ಠಾನ ಸರಳ…

    ಕಾರವಾರ: ಜಿಲ್ಲೆಯಲ್ಲಿ ಮೊದಲ ದಿನದ ಕರೊನಾ ಕರ್ಫ್ಯೂ ಸುರಳೀತವಾಗಿ ಅನುಷ್ಠಾನಗೊಂಡಿದೆ. ಬೆಳಗ್ಗೆ ಗಡಿಬಿಡಿಯಲ್ಲಿ ಓಡಾಡಿದ ಜನ ಬಿಸಿಲೇರುತ್ತಿದ್ದಂತೆ ಮನೆಯಲ್ಲಿ ಕುಳಿತರು.

    ಬೆಳಗ್ಗೆ ಹಾಲು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಲಾಗಿತ್ತು. ಸಾಕಷ್ಟು ಜನ ಬಂದು ಖರೀದಿ ಮಾಡಿದರು. 10 ಗಂಟೆಯ ಹೊತ್ತಿಗೆ ಪೊಲೀಸ್ ಹಾಗೂ ನಗರಸಭೆಯ ಅಧಿಕಾರಿಗಳು ಆಗಮಿಸಿ ಅಂಗಡಿಗಳನ್ನು ಮುಚ್ಚಿಸಿದರು.

    ಬಿಸಿಲೇರುತ್ತಿದ್ದಂತೆ ಜನ ಸಂಚಾರ ವಿರಳವಾಗಿತ್ತು. ಎಲ್ಲ ವೃತ್ತಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು. ಆದರೆ, ಪೊಲೀಸ್ ಸಿಬ್ಬಂದಿ ಹೋಗಿ ಬರುವ ಪ್ರತಿ ವಾಹನಗಳನ್ನು ತಡೆದು ತಪಾಸಣೆ ನಡೆಸಿರಲಿಲ್ಲ. ಅಗತ್ಯ ಓಡಾಟಗಳಿಗೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಗೊಂದಲ ಉಂಟಾಗಿಲ್ಲ.

    ಓಡಾಡಿ ವ್ಯಾಪಾರ ಮಾಡುತ್ತೇವೆ: ಹಣ್ಣು ತರಕಾರಿ ವ್ಯಾಪಾರಸ್ಥರು ಬುಧವಾರ ಬೆಳಗ್ಗೆ ನಗರಸಭೆಯ ಕಚೇರಿಯ ಮುಂದೆ ಸೇರಿ ತಮಗೆ ಪಾಸ್ ವ್ಯವಸ್ಥೆ ಮಾಡಿಕೊಡಿ. ವಾಹನ ಅಥವಾ ತಳ್ಳುಗಾಡಿಗಳಲ್ಲಿ ಬೀದಿ ಬೀದಿಗಳಿಗೆ ಹೋಗಿ ವ್ಯಾಪಾರ ಮಾಡುತ್ತೇವೆ ಎಂದು ಮನವಿ ಮಾಡಿದರು. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಇದರಿಂದ ವ್ಯಾಪಾರವಾಗುತ್ತಿಲ್ಲ ಎಂಬುದು ಅವರ ಗೋಳು. ನಗರದಲ್ಲಿ ಅಗತ್ಯ ವಸ್ತು ಖರೀದಿಗೆ ಬೆಳಗ್ಗೆ ಅವಕಾಶ ನೀಡಲಾಗಿದೆ. ಇದರಿಂದ ಪಾಸ್ ಕೊಡುವ ಅಗತ್ಯವಿಲ್ಲ ಎಂದು ಸರ್ವ ಸದಸ್ಯರ ಅಭಿಪ್ರಾಯ ಬಂದಿದ್ದು, ಅದರಂತೆ ನಡೆದುಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ ತಿಳಿಸಿದ್ದಾರೆ.

    ಶಾಸಕಿ ರೂಪಾಲಿ ನಾಯ್ಕ ಕಚೇರಿ ಬಂದ್
    ಮೂವರಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಮೀಪವಿರುವ ಶಾಸಕಿ ರೂಪಾಲಿ ನಾಯ್ಕ ಅವರ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಶಾಸಕರ ಆಪ್ತರಾಗಿರುವ ಆಶಾ ನಾಯ್ಕ, ಕಚೇರಿ ಸಿಬ್ಬಂದಿ ಮಂಜುನಾಥ ಹಾಗೂ ಚಾಲಕ ನಾಗರಾಜ ಅವರಿಗೆ ಸೋಂಕು ಖಚಿತವಾಗಿದೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿದ್ದಲ್ಲಿ ಗುರುಪ್ರಸಾದ ನಾಯ್ಕ -7349749432, ಕಿಶನ್ ಕಾಂಬಳೆ -7975446717, ಕವನಕುಮಾರ್- 9342422425, ಮಂಜುನಾಥ ರಾಠೋಡ- 9632989428 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

    ತಂದೆಯ ಅನಾರೋಗ್ಯದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ
    ತಂದೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಕಾರವಾರದ ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ ಕರೊನಾ ಕರ್ತವ್ಯ ನಿರ್ವಹಿಸಿ ಮಾದರಿಯಾಗಿದ್ದಾರೆ. ಮೂಲತಃ ಶಿವಮೊಗ್ಗದವರಾಗಿರುವ ಡಾ. ಶ್ರೀನಿವಾಸ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಸಹಾಯಕ ಪ್ರಾಧ್ಯಾಪಕರು. ಕ್ರಿಮ್್ಸ ಆಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ಉಸಿರಾಟದ ತೊಂದರೆ ಇರುವ ಸಾಕಷ್ಟು ಜನ ಇರುವುದರಿಂದ ಅವರ ಚಿಕಿತ್ಸೆ ಸಲಹೆ ಇಲ್ಲಿ ಅತ್ಯಾವಶ್ಯಕವಾಗಿದೆ. ಇತ್ತೀಚೆಗೆ ಅವರ ತಂದೆಗೆ ಹೃದಯ ಸಮಸ್ಯೆ ಉಂಟಾಗಿತ್ತು. ಒಂದು ದಿನ ತೆರಳಿ ತಂದೆಯ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ ಶ್ರೀನಿವಾಸ ಅವರು ಒಂದೇ ದಿನದಲ್ಲಿ ತಮ್ಮ ಕರ್ತವ್ಯಕ್ಕೆ ಮರಳಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕಳೆದ 3 ತಿಂಗಳಲ್ಲಿ 250ಕ್ಕೂ ಅಧಿಕ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ಗುಣಮುಖರಾಗುವಂತೆ ಮಾಡಿದ್ದಾರೆ.

    ಕರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಆದರೂ ಎರಡನೇ ಅಲೆ ತೀವ್ರವಾಗಿದೆ. ಜನ ಜಾಗರೂಕತೆಯಿಂದ ಇದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಬೇಕು. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು.
    | ರೂಪಾಲಿ ನಾಯ್ಕ ಶಾಸಕಿ

    279 ಕರೊನಾ ಪ್ರಕರಣ
    ಬುಧವಾರದ ವರದಿಯಂತೆ ಜಿಲ್ಲೆಯ 279 ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ. ಕಾರವಾರದಲ್ಲಿ 42, ಅಂಕೋಲಾದಲ್ಲಿ 17, ಕುಮಟಾದಲ್ಲಿ 51, ಹೊನ್ನಾವರದಲ್ಲಿ 25, ಭಟ್ಕಳ ಹಾಗೂ ಸಿದ್ದಾಪುರದಲ್ಲಿ ತಲಾ 2, ಶಿರಸಿಯಲ್ಲಿ 19, ಯಲ್ಲಾಪುರದಲ್ಲಿ 35, ಮುಂಡಗೋಡಿನಲ್ಲಿ 19, ಹಳಿಯಾಳ ಹಾಗೂ ದಾಂಡೇಲಿ ಸೇರಿ 67 ಪ್ರಕರಣಗಳು ಖಚಿತವಾಗಿವೆ. ಶಿರಸಿಯಲ್ಲಿ 1 ಸಾವು ಸಂಭವಿಸಿವೆ. ಜಿಲ್ಲೆಯ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1480ಕ್ಕೆ ಏರಿಕೆಯಾಗಿದೆ. 193 ಜನ ಆಸ್ಪತ್ರೆಗಳಲ್ಲಿ 1287 ಜನ ಹೋಂ ಐಸೋಲೇಶನ್​ನಲ್ಲಿದ್ದಾರೆ. 74 ಜನ ಗುಣವಾಗಿದ್ದಾರೆ.

    ಖಾಕಿಗೆ ಅರಶಿಣಪುಡಿ, ತುಳಸಿ ಎಲೆ ಸ್ಟೀಮ್
    ಮುಂಡಗೋಡ:
    ಕರೊನಾ ವೈರಸ್​ನ ಸೋಂಕು ಹರಡುವಿಕೆ ತಡೆಗಟ್ಟಲು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನಿರ್ದೇಶನದಂತೆ ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕುಕ್ಕರ್ ಬಳಸಿ ಬಿಸಿ ನೀರಿನ ಉಗಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಇಲ್ಲಿನ ಸಿಪಿಐ ಪ್ರಭುಗೌಡ.ಡಿ.ಕೆ. ಬುಧವಾರ ತಿಳಿಸಿದರು. ಕರೊನಾ 2ನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಇದನ್ನು ಬಳಸುವುದರಿಂದ ಸುರಕ್ಷಿತವಾಗಿ ಇರಬಹುದು. ಪೈಪ್ ಅಳವಡಿಸಿ ಕುಕ್ಕರ್​ನಿಂದ ಬರುವ ಬಿಸಿ ನೀರಿನ ಆವಿಯನ್ನು ಪೈಪ್ ಮೂಲಕ ಬಾಯಿ, ಎದೆ ಮತ್ತು ಗಂಟಲಿಗೆ ಸೇವಿಸುವ ಹಾಗೆ ಮಾಡಲಾಗಿದ್ದು, ಕುಕ್ಕರ್​ನಲ್ಲಿ ಅರಶಿಣಪುಡಿ ಹಾಗೂ ತುಳಸಿ ಎಲೆಗಳನ್ನು ಬಳಸಲಾಗುತ್ತಿದೆ. ಎಲ್ಲ ಸಿಬ್ಬಂದಿ ದಿನಕ್ಕೆ ಮೂರು ಹೊತ್ತು ಇದನ್ನು ಅನುಸರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts