More

    ಜನರ ಹುಚ್ಚು ಬಿಡಿಸಿದ ಪವಾಡಪುರುಷ

    ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ, ಅದು ಹೌದು. ಇದು ಹಠಯೋಗಿ ವೀರಪ್ಪಜ್ಜನ ತತ್ವ. ತನ್ನ ಗದ್ದುಗೆ ದರುಶನದಿಂದ ಭಕ್ತರ ಪಾಪ ಪರಿಹಾರ, ನಂಬಿದ ಭಕ್ತರನ್ನು ಕಾಪಾಡುವ ದೈವ ಕೋಡಿಕೊಪ್ಪದ ಹಠಯೋಗಿ ಶ್ರೀ ಹುಚ್ಚಿರಪ್ಪಜ್ಜ (ವೀರಪ್ಪಜ್ಜ)ನ ಜಾತ್ರಾ ಮಹೋತ್ಸವ ಫೆ. 22, 23ರಂದು ನಡೆಯಲಿದ್ದು, ತನ್ನಿಮಿತ್ತ ಲೇಖನ.

    ನರೇಗಲ್ಲ: ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜ (ಹುಚ್ಚಿರಪ್ಪಜ್ಜನ) ಸದಾಕಾಲ ಭಕ್ತರ ಮನದಲ್ಲಿ ನೆಲೆ ನಿಂತಿದ್ದಾನೆ. ಬದುಕಿದಾಗ ಜನರಿಗೆ ಹುಚ್ಚನಂತೆ ಕಂಡು, ಅವರಲ್ಲಿನ ಹುಚ್ಚು ಅಳಿಸಲು ಶ್ರಮಿಸಿದ ಅಜ್ಜನ ಲೀಲೆ- ಪವಾಡ ಅಪಾರ.

    ಗಜೇಂದ್ರಗಡ ತಾಲೂಕಿನ ಕೋಡಿಕೊಪ್ಪ (ಶಿವಪುರ) ಗ್ರಾಮದ ಚನ್ನಯ್ಯ ಹಾಗೂ ಕಲ್ಯಾಣಮ್ಮರ ಪುತ್ರನಾಗಿ 1855ರಲ್ಲಿ ವೀರಯ್ಯನವರು ಜನಿಸಿದರು. ಬಾಲ್ಯದ ದಿನಗಳಲ್ಲಿ ಅಕ್ಷರ ಜ್ಞಾನ ಪ್ರಾಪ್ತಿಯಾಯಿತೇ ವಿನಃ ವಿದ್ಯಾರ್ಜನೆ ಆಗಲಿಲ್ಲ. ಹೀಗಾಗಿ ಅಪ್ಪ, ಅಮ್ಮ ಮಗನನ್ನು ಕೃಷಿ ಕಾಯಕದಲ್ಲಿ ತೊಡಗಿಸಿದರು.

    ಸಾಧುವಿನ ಪರಿಚಯ: ಕಾಶಿಯಿಂದ ರಾಮೇಶ್ವರಕ್ಕೆ ಹೋಗುತ್ತಿದ್ದ ಉತ್ತರ ಭಾರತದ ನಾಗಾಸಾಧುಗಳು ಕೋಡಿಕೊಪ್ಪದ ಉಣಚಗೇರಿ ಹಾಗೂ ಹಳೆಮನಿ ಅವರ ತೋಟದಲ್ಲಿ ವಾಸ್ತವ್ಯ ಹೂಡುತ್ತಿ್ತ್ದರು. ಹೀಗೆ ಒಂದು ಉಳಿದುಕೊಂಡಾಗ ಸಾಧುವೊಬ್ಬರು ವೀರಯ್ಯನಿದ್ದ ತೋಟಕ್ಕೆ ಬಂದು ಗಾಂಜಾ ಸೇದುವುದು ಮತ್ತು ಸೇಂದಿ ಕುಡಿಯಲು ಕಲಿಸಿದರು. ಇದರಿಂದಾಗಿ ವೀರಯ್ಯನವರನ್ನು ಮನೆಯಿಂದ ಹೊರಹಾಕಲಾಯಿತು.

    ಹುಚ್ಚನಂತೆ ಅತ್ತಿತ್ತ ತಿರುಗಾಡುತ್ತ ಅನೇಕ ಪವಾಡಗಳಿಂದ ಜನಮಾನಸದ ಗಮನ ತನ್ನೆಡೆಗೆ ಸೆಳೆದುಕೊಂಡ. ವೀರಪ್ಪಜ್ಜ 23-03-1925ರಂದು ಲಿಂಗೈಕ್ಯರಾದರು. ಅವರ ಸಮಾಧಿಯನ್ನು ಹಾಲಕೆರೆಯ ಗುರು ಅನ್ನದಾನ ಸ್ವಾಮೀಜಿಗಳ ಅಣತಿಯಂತೆ ನರೇಗಲ್ಲನ ಹಾಲಕೆರೆಯ ಶಾಖಾಮಠದ ಎದುರಿಗಿನ ಬಯಲಲ್ಲಿ ಮಾಡಲಾಯಿತು. ಆದರೆ, ಅಜ್ಜ ಯಾವಾಗಲೂ ಕುಳಿತಿರುತ್ತಿದ್ದ ಡೋಣಿ ಕಲ್ಲು ಏರಿಯ ಜಾಗದಲ್ಲಿಯೂ ಗದ್ದುಗೆ ನಿರ್ವಿುಸಿ, ಪಾದರಸದ ಲಿಂಗ ಪ್ರತಿಷ್ಟಾಪಿಸಿ ಅಲ್ಲಿ ಭಕ್ತರು ದರ್ಶನಾಶೀರ್ವಾದಕ್ಕೆ ವ್ಯವಸ್ಥೆ ಮಾಡಲಾಯಿತು.

    ಮೇಲ್ಛಾವಣಿ ಪವಾಡ: ಅಜ್ಜ ಯಾವಾಗಲೂ ತನ್ನ ಭಕ್ತರು ನೆರಳಿನಲ್ಲಿರಬೇಕು, ತಾನು ಮಾತ್ರ ಮಳೆ, ಬಿಸಿಲು, ಗಾಳಿ, ಚಳಿಗೆ ತೆರೆದುಕೊಂಡಿರಬೇಕೆಂಬ ತತ್ವದವನು. ಹೀಗಾಗಿ ಅವನ ಗದ್ದುಗೆ ಮೇಲಿನ ಭಾಗ ಗಮನಿಸಿದರೆ ಅದು ತೆರೆದುಕೊಂಡೇ ಇದೆ. ಮಠದ ಉಳಿದ ಭಾಗವು ಭಕ್ತರಿಗೆ ನೆರಳನ್ನು, ರಕ್ಷಣೆ ನೀಡುವ ಆರ್​ಸಿಸಿ ಕಟ್ಟಡವಿದೆ.

    ಗದ್ದುಗೆ ಪವಾಡ: ಇಂದಿಗೂ ಗದ್ದುಗೆಗೆ ಬೇಡಿಕೊಂಡು ಕಾಯಿ ಕಟ್ಟಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಮಕ್ಕಳಿಲ್ಲದವರು, ಕೆಲಸ, ಉದ್ಯೋಗ, ವ್ಯವಹಾರ, ಆರೋಗ್ಯ, ಕೋರ್ಟ್ ವ್ಯಾಜ್ಯ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಹೊಂದಿದವರು ಅಜ್ಜನ ಗದ್ದುಗೆಗೆ ಹರಕೆಯ ಕಾಯಿ ಕಟ್ಟುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಇಷ್ಟಾರ್ಥಗಳು ಈಡೇರಿದ ಮೇಲೆ ಕಟ್ಟಿದ ಕಾಯಿ ಬಿಚ್ಚುವ ಪದ್ಧತಿ ನಡೆದುಕೊಂಡು ಬಂದಿದೆ.

    ವಿವಿಧೆಡೆ ಇರುವ ಹುಚ್ಚಿರಪ್ಪಜ್ಜನ ಮಠಗಳು: ರೋಣ ತಾಲೂಕಿನ ಬೂದಿಹಾಳ, ಯಲಬುರ್ಗಾ ತಾಲೂಕಿನ ಸಿದ್ನೆಕೊಪ್ಪ, ಧಾರವಾಡದ ನುಗ್ಗಿಕೆರೆ, ಮಹಾರಾಷ್ಟ್ರದ ಪುಣೆ, ಗೋವಾದಲ್ಲಿ ವೀರಪ್ಪಜ್ಜನ ಮಠಗಳು ಸ್ಥಾಪನೆಯಾಗಿದ್ದು, ನಿತ್ಯ ಭಕ್ತರಿಂದ ಪೂಜೆಗೊಳ್ಳುತ್ತಿದ್ದಾನೆ.

    ಪ್ರತಿ ವರ್ಷದ ಮಾಘ ಶುದ್ಧ ದಶಮಿಯಂದು ಅಜ್ಜನ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗುತ್ತದೆ. ಪ್ರಸಕ್ತ ವರ್ಷ ಫೆ. 22ರ ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದೆ. 23ರಂದು ಲಘು ರಥೋತ್ಸವ ಜರುಗಲಿದೆ. ಕೋಡಿಕೊಪ್ಪದ ಗೆಳೆಯರ ಬಳಗದಿಂದ 22 ರಂದು ರಾತ್ರಿ 10 ಗಂಟೆಗೆ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts