More

    ಜನರ ಅಪೇಕ್ಷೆಯಂತೆ ಡಿವೈಡರ್ ತೆರವು

    ಚಿತ್ರದುರ್ಗ: ನಗರದ ಕೆಲವೆಡೆಗಳಲ್ಲಿನ ಅವೈಜ್ಞಾನಿಕ ರಸ್ತೆ ವಿಭಜಕಗಳ ತೆರವು ಕಾರ್ಯಾಚರಣೆಯೂ ಸಾರ್ವಜನಿಕರ ಅಪೇಕ್ಷೆಯಂತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

    ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಏಕ ಮುಖ ಮಾರ್ಗಗಳಲ್ಲಿ ರಸ್ತೆ ವಿಭಜಕಗಳ ಅಗತ್ಯವಿಲ್ಲ. ಆದರೂ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಕೆಲವೆಡೆ ತೆರವಿಗೆ ಕ್ರಮವಹಿಸಲಾಗಿದೆ. ಆಡಳಿತದ ಅನುಭವ ಇಲ್ಲದ ಬಿಜೆಪಿಗರು ಮಾಡಿದ ಕೆಲಸವಿದು ಎಂದು ಆಕ್ಷೇಪಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ 5,300 ಕೋಟಿ ರೂ. ಇನ್ನೂ ಬಿಡುಗಡೆಗೊಳಿಸಿಲ್ಲ. ದಾಖಲೆ ನೀಡಿದರೂ ಹಣ ಕೊಟ್ಟಿಲ್ಲ ಎಂದು ದೂರಿದರು.

    ಹಿಂದು ಧರ್ಮೀಯರು ಸರ್ಕಾರಕ್ಕೆ ಪಾವತಿಸಿದ ತೆರಿಗೆ ಹಣ ಹಿಂದುಗಳಿಗೆ ಮಾತ್ರ ಸೇರಬೇಕೆಂಬ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹಾತ್ಮಗಾಂಧಿ ಅವರು ಈ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟಾಗ ಇಂಡಿಯಾ ಜಾತ್ಯತೀತ ರಾಷ್ಟ್ರ ಎಂಬುದನ್ನೇ ಮರೆತಂದಿದೆ ಎಂದರು.

    ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರ ಶೇ 40 ಪರ್ಸಂಟೇಜ್ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಅವಧಿಯಲ್ಲಿ 2.7 ಲಕ್ಷ ಕಾಮಗಾರಿಗೆ ಒಪ್ಪಿ ಕೊಟ್ಟಿದ್ದು, ಏನಾಗಿದೆಯೋ ಈವರೆಗೂ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಸಿಎಂ ಅವರು ಈಚೆಗಷ್ಟೇ ಶಾಸಕರಿಗೆ ಅನುದಾನ ಘೋಷಿಸಿದ್ದಾರೆ. ಇನ್ನೂ ಯೋಜನೆಗಳ ಕಾಮಗಾರಿಯೇ ಆರಂಭಿಸಿಲ್ಲ ಎಂದು ಹೇಳಿದರು.

    ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ದರ್ಗಾ, ಜೆಸಿಆರ್ ಮಾರ್ಗ, ಗಾಯತ್ರಿ ವೃತ್ತ, ಆರ್‌ಟಿಒ ಕಚೇರಿ ಸೇರಿ 6 ಕಡೆಗಳ ಕೆಲ ಭಾಗಗಳಲ್ಲಿ ಮಾತ್ರ ರಸ್ತೆ ವಿಭಜಕ ತೆರವುಗೊಳಿಸಲಾಗುತ್ತಿದೆ ಎಂದರು.

    ಅವೈಜ್ಞಾನಿಕ ವಿಭಜಕಗಳಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹೀಗಾಗಿ ಚುನಾವಣೆ ಪೂರ್ವದಲ್ಲೇ ತೆರವುಗೊಳಿಸುವ ಭರವಸೆ ನೀಡಿದ್ದೆ. ಅದರಂತೆ ಸಿಎಂ ಅವರ ಗಮನಕ್ಕೆ ತಂದು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 50, 100 ಅಡಿಯಷ್ಟು ಮಾತ್ರ ತೆರವುಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts