More

    ಜನರಿಗೆ ಲಾಕ್​ಡೌನ್ ಸಂಬಂಧವೇ ಇಲ್ಲ!

    ಹುಬ್ಬಳ್ಳಿ: ಲಾಕ್​ಡೌನ್ ಅವಧಿಯಲ್ಲಿ ಮಾರುಕಟ್ಟೆ ಸ್ಥಗಿತಗೊಂಡಿದ್ದು ಹೊರತುಪಡಿಸಿದರೆ ವಾಹನ ಸವಾರರು ಯಾವುದೇ ಕಡಿವಾಣ ಇಲ್ಲದಂತೆ ಸಂಚರಿಸುತ್ತಿರುವುದು ನಗರದಲ್ಲಿ ಶನಿವಾರವೂ ಕಂಡುಬಂದಿತು.

    ಲಾಕ್​ಡೌನ್ ನಿಯಮ ಉಲ್ಲಂಘಿಸಿ ಕಳೆದ 4 ದಿನಗಳಿಂದ ಮನಬಂದಂತೆ ಸಂಚರಿಸುತ್ತಿದ್ದ ವಾಹನ ಸವಾರರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದರು.

    ವಿದ್ಯಾನಗರ, ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ, ದುರ್ಗದಬೈಲ್, ಲ್ಯಾಮಿಂಗ್ಟನ್ ರಸ್ತೆ, ಗೋಕುಲ ರೋಡ್, ಚನ್ನಮ್ಮ ವೃತ್ತ, ಸವೋದಯ ವೃತ್ತ, ಕುಸುಗಲ್ಲ ರಸ್ತೆ, ಸುಳ್ಳ ರಸ್ತೆ, ಕಾರವಾರ ರಸ್ತೆ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರದ ಜೊತೆಗೆ ಪಾದಚಾರಿಗಳ ಸಂಚಾರವೂ ಸಾಮಾನ್ಯವಾಗಿತ್ತು.

    ಬೇಕಾಬಿಟ್ಟಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಚನ್ನಮ್ಮ ವೃತ್ತದಲ್ಲಿ ತಡೆದ ಪೂರ್ವ ಸಂಚಾರ ಠಾಣೆ ಪೊಲೀಸರು, ಅನಗತ್ಯವಾಗಿ ಸಂಚರಿಸುತ್ತಿರುವವರಿಗೆ ಬಿಸಿ ಮುಟ್ಟಿಸಿದರು. ಕೆಲ ಬೈಕ್, ಕಾರು ಹಾಗೂ ಆಟೋಗಳನ್ನು ವಶಪಡಿಸಿಕೊಂಡರು.

    ಚನ್ನಮ್ಮ ವೃತ್ತದಲ್ಲಿ ವಾಹನಗಳನ್ನು ತಡೆಯುತ್ತಿರುವುದನ್ನು ಲ್ಯಾಮಿಂಗ್ಟನ್ ರಸ್ತೆಯಿಂದಲೇ ಗಮನಿಸುತಿದ್ದ ಕಾರು, ಆಟೋ ಹಾಗೂ ಬೈಕ್ ಸವಾರರು, ಸಂಗೊಳ್ಳಿ ರಾಯಣ್ಣ ವೃತ್ತದಿಂದಲೇ ಯೂ ಟರ್ನ್ ತೆಗೆದುಕೊಂಡು, ಪೊಲೀಸರ ಕಣ್ತಪ್ಪಿಸಿ ಹೋಗುತ್ತಿದ್ದರು.

    ಶನಿವಾರ ರಜೆ ದಿನವಾಗಿದ್ದರಿಂದ ಮಿನಿ ವಿಧಾನಸೌಧ, ಮಹಾನಗರ ಪಾಲಿಕೆ ಸೇರಿ ಇತರ ಸರ್ಕಾರಿ ಕಚೇರಿಗಳಲ್ಲಿ ಬೆರಳೆಣಿಕೆ ಸಿಬ್ಬಂದಿ ಮಾತ್ರ ಕಂಡುಬಂದರು. ಮಧ್ಯಾಹ್ನ 12 ಗಂಟೆಯ ನಂತರ ಜನತಾ ಬಜಾರ್, ಎಂ.ಜಿ. ಮಾರ್ಕೆಟ್ ಸೇರಿದಂತೆ ಇತರೆಡೆಯ ಅಂಗಡಿಗಳು ಮುಚ್ಚಿದ್ದವು. ಸರಾಫಗಟ್ಟಿ, ಮಧುರಾ ಕಾಲನಿ, ಸವೋದಯ ವೃತ್ತದಿಂದ ಗದಗ ರಸ್ತೆಯತ್ತ ಹೋಗುವ ಮಾರ್ಗ ಸೇರಿ ಇತರ ಬಡಾವಣೆಗಳಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ತರಕಾರಿ, ಹಣ್ಣುಗಳ ಮಾರಾಟ ನಡೆದಿತ್ತು. ಮಧ್ಯಾಹ್ನ 12 ಗಂಟೆಯ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು, ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಹಾಗೂ ಖರೀದಿಗೆ ಬಂದಿದ್ದ ಜನರನ್ನು ಚದುರಿಸಿದರು.

    ನಗರದಲ್ಲಿ ಮಧ್ಯಾಹ್ನದವರೆಗೆ ಜನ ಏನಾದರೊಂದು ಕಾರಣಕ್ಕಾಗಿ ಅಥವಾ ನೆವ ಹೇಳಿಕೊಂಡು ಹೊರಗಡೆ ಬರುತ್ತಲೇ ಇದ್ದಾರೆ. 2 ಗಂಟೆ ನಂತರವಷ್ಟೇ ಖಾಲಿ ಬೀದಿಗಳು ಗೋಚರಿಸುತ್ತವೆ. ಹೀಗಾಗಿ ಹುಬ್ಬಳ್ಳಿ ಜನರಿಗೆ ಲಾಕ್​ಡೌನ್ ಅರ್ಧ ದಿನಕ್ಕಷ್ಟೇ ಸಂಬಂಧ ಎಂಬಂತಾಗಿದೆ.

    ಪೊಲೀಸರ ವಿರುದ್ಧವೇ ಪ್ರತಿಭಟನೆ!

    ಲಾಕ್​ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್ ಸವಾರನನ್ನು ಸಂಚಾರ ಠಾಣೆ ಪೊಲೀಸರು ಚನ್ನಮ್ಮ ವೃತ್ತದಲ್ಲಿ ವಶಪಡಿಸಿಕೊಂಡಿದ್ದರಿಂದ ಅಸಮಾಧಾನಗೊಂಡ ಬೈಕ್ ಸವಾರ ಕೆಲ ಸಮಯ ಪ್ರತಿಭಟನೆ ನಡೆಸಿದ.

    ಮಧ್ಯಾಹ್ನ 12 ಗಂಟೆಯ ನಂತರ ಆತ ದಿನಸಿ ಚೀಲ ಇಟ್ಟುಕೊಂಡು ಬೈಕ್​ನಲ್ಲಿ ಬರುತ್ತಿದ್ದ. ಆತನನ್ನು ತಡೆದ ಪೊಲೀಸರು, ವಿನಾಯಿತಿ ಅವಧಿಯೊಳಗಾಗಿ ದಿನಸಿ ತೆಗೆದುಕೊಂಡು ಹೋಗಬೇಕಿತ್ತು. ಲಾಕ್​ಡೌನ್ ಅವಧಿಯಲ್ಲಿ ಸಂಚರಿಸಲು ಅವಕಾಶ ಇಲ್ಲವೆಂದು ಹೇಳಿ, ಆತನ ಬೈಕ್ ಅನ್ನು ವಶಪಡಿಸಿಕೊಂಡರು. ಇದರಿಂದ ಕುಪಿತಗೊಂಡ ಬೈಕ್ ಸವಾರ ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದ. ಪೊಲೀಸ್ ಠಾಣೆಗೆ ಆಗಮಿಸಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸಿ ಬೈಕ್ ತೆಗೆದುಕೊಂಡು ಹೋಗುವಂತೆ ಸವಾರನಿಗೆ ಸೂಚಿಸಿದ ಪೊಲೀಸರು, ಲಾಕ್​ಡೌನ್ ಅವಧಿಯಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡಿದರು. ನಂತರ ಆತ ಅಲ್ಲಿಂದ ತೆರಳಿದನು.

    265 ವಾಹನಗಳು ಸೀಜ್

    ಧಾರವಾಡ ಜಿಲ್ಲೆಯಲ್ಲಿ ಲಾಕ್​ಡೌನ್ ಘೊಷಣೆಯಾದ ದಿನದಿಂದ ಈವರೆಗೆ ಜಿಲ್ಲಾ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 265 ವಾಹನಗಳನ್ನು ಸೀಜ್ ಮಾಡಿ 26,500 ರೂ. ದಂಡ ಸಂಗ್ರಹಿಸಲಾಗಿದೆ. ಇದಲ್ಲದೆ ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವ ಕುರಿತು ಒಟ್ಟು 385 ಪ್ರಕರಣಗಳು ದಾಖಲಾಗಿದ್ದು, 38700 ರೂ. ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts