More

    ಜನರಲ್ಲಿ ರೋಗ-ರುಜಿನದ ಭಯ

    ಶಿಗ್ಗಾಂವಿ, 21ನೇ ವಾರ್ಡ್, ಕಲುಷಿತ ನೀರು, ಪೂರೈಕೆ,

    ಶಿಗ್ಗಾಂವಿ: ಕರೊನಾ ಭೀತಿಯ ಮಧ್ಯೆಯೇ ಪುರಸಭೆಯ ಯಡವಟ್ಟಿನಿಂದಾಗಿ ಕಲುಷಿತ ನೀರು ಕುಡಿದು ಮತ್ತೊಮ್ಮೆ ಆಸ್ಪತ್ತೆಗಳತ್ತ ಮುಖ ಮಾಡುವ ಭಯದ ವಾತಾವರಣ ಪುರವಾಸಿಗಳಲ್ಲಿ ಆವರಿಸಿದೆ.

    ಪಟ್ಟಣದ ವಾರ್ಡ್ ನಂ. 21ರ ಗಣೇಶ ದೇವಸ್ಥಾನದ ಹಿಂಭಾಗ, ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಅಲ್ಲಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಜತೆಗೆ ರಸ್ತೆ ಬದಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್​ಲೈನ್ ಕೆಲವೆಡೆ ಒಡೆದು ನೀರು ಸೋರಿಕೆಯಾಗುತ್ತಿದೆ. ದುರಸ್ತಿ ಕಾರ್ಯ ಕೈಗೊಂಡಿಲ್ಲವಾದ್ದರಿಂದ ಮನೆಗಳಿಗೆ ಕಲುಷಿತ ನೀರು ಇಡೀ ಪಟ್ಟಣಕ್ಕೆ ಪೂರೈಕೆಯಾಗುತ್ತಿದೆ. ತಕ್ಷಣವೇ ಕ್ರಮ ಕೈಗೊಳ್ಳ ದಿದ್ದರೆ ರೋಗ ಹರಡುವುದು ಗ್ಯಾರಂಟಿ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಇದಲ್ಲದೆ, ಚರಂಡಿಗಳಲ್ಲಿ ನೀರು ತುಂಬಿ ಸೊಳ್ಳೆ ಕಾಟ ಹೆಚ್ಚಾಗಿದೆ. ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕುತ್ತಿರುವುದರಿಂದ ಪರಿಸರ ಹಾಳಾಗಿ ದುರ್ನಾತ ಬೀರುತ್ತಿದೆ. ಪಟ್ಟಣದ ಜಯನಗರದ ತಿರ್ಲಾಪುರ ಆಸ್ಪತ್ರೆ ಹತ್ತಿರ, ಸಂತೆ ಮೈದಾನದಲ್ಲಿರುವ ಶರೀಫ ಭವನ, ಹಳೇ ಬಸ್ ನಿಲ್ದಾಣ, ಪೊಲೀಸ್ ವಸತಿ ಗೃಹದ ಹತ್ತಿರ, ಸವಣೂರ ಸರ್ಕಲ್, ಸರ್ಕಾರಿ ಆಸ್ಪತ್ರೆ ಕಂಪೌಂಡ್, ರಾಚನಕಟ್ಟಿ ಕೆರೆ, ಬಿಇಓ ಕಚೇರಿ ಹಿಂಭಾಗ ಸೇರಿ ಇತರ ಮಾರ್ಗಗಳಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

    21ನೇ ವಾರ್ಡ್​ನಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿರುವ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೆ, ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಪಟ್ಟಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.

    | ಮಲ್ಲಯ್ಯ ಹಿರೇಮಠ

    ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ

    ಮಲೀನವಾಗುತ್ತಿರುವ ನೀರು ಮತ್ತು ಚರಂಡಿ ಸಮಸ್ಯೆ ಬಹು ದಿನಗಳಿಂದ ಇದ್ದು, ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ನಲ್ಲಿಗಳಲ್ಲಿ ಕೊಳಚೆ ನೀರು ಬರುತ್ತಿದೆ. ವಾರ್ಡ್ ಸದಸ್ಯರು ಹಾಗೂ ಸ್ಥಳೀಯರು ಸಾಕಷ್ಟು ಬಾರಿ ಪುರಸಭೆಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ.

    | ಗಂಗಾಧರ ಕಲ್ಲಿಗನೂರ ಸ್ಥಳೀಯ ನಿವಾಸಿ

    ಅಭಿವೃದ್ಧಿ ಆಗಿಲ್ಲ ಚರಂಡಿ, ಮುಖ್ಯರಸ್ತೆ

    ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಆಗಿಲ್ಲ. ಮಳೆಯಾದರೆ ಕೊಳಚೆ ನೀರು ರಸ್ತೆ ಮೇಲೆ ಹರಿದು ತೀವ್ರ ತೊಂದರೆಯಾಗುತ್ತಿದೆ. ಶಿಗ್ಗಾಂವಿ-ಸವಣೂರ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರೀಗ ಮುಖ್ಯಮಂತ್ರಿಯಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts