More

    ಜನಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

    ಮಳವಳ್ಳಿ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ವೈದ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ರೂವಾರಿಯಾಗಿ ಆಸ್ಪತ್ರೆಯ ರೆಡಿಯಾಲಜಿಸ್ಟ್ ವೈದ್ಯನನ್ನು ಬಂಧಿಸಬೇಕೆಂದು ಆಗ್ರಹಿಸಿ ಸೋಮವಾರ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಸಮೀಪ ಜಮಾವಣೆಗೊಂಡ ನೂರಾರು ಹೋರಾಟಗಾರು ತಾಲೂಕು ಆಸ್ಪತ್ರೆಯವರೆಗೆ ಶಾಸಕರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ವೈದ್ಯನ ವಿರುದ್ಧ ಘೋಷಣೆಗಳನ್ನು ಕೂಗುತ್ತ ರ‌್ಯಾಲಿಯಲ್ಲಿ ತೆರಳಿದರು. ಆಸ್ಪತ್ರೆ ಆವರಣದಲ್ಲಿ ಮೊಕ್ಕಾಂ ಹೂಡಿ, ಅನಾರೋಗ್ಯ ಪೀಡಿತರಾಗಿ ಬರುವ ಬಡವರಿಗೆ ಉತ್ತಮ ಸೇವೆ ನೀಡಿಬೇಕೆಂದು ಒತ್ತಾಯಿಸಿದರು.

    ರಾಜ್ಯ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ದೇವಿ ಮಾತನಾಡಿ, ಇತ್ತೀಚೆಗೆ ಮಳವಳ್ಳಿ ಡಯಾೀಗ್ನೋಸ್ಟಿಕ್ ಸೆಂಟರ್ ಮೇಲೆ ಆರೋಗ್ಯ ಇಲಾಖೆ ಅಧಿಕಾಗಿಗಳು ನಡೆಸಿದ ದಾಳಿಯಲ್ಲಿ ಕಾನೂನು ಬಾಹಿರವಾಗಿ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣಹತ್ಯೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ತಾಲೂಕು ಆಸ್ಪತ್ರೆಯ ವೈದ್ಯ ಡಾ.ರಘುವೀರ್ ಮತ್ತು ಡಯಾೀಗ್ನೋಸ್ಟಿಕ್ ಸೆಂಟರ್ ಮಾಲೀಕನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕೆಂದು ಒತ್ತಾಯಿಸಿದರು.

    ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಬಹಳಷ್ಟು ವೈದ್ಯರು ಆಸ್ಪತ್ರೆ ಎದುರಿನಲ್ಲೇ ಖಾಸಗಿ ಕ್ಲಿನಿಕ್‌ಗಳನ್ನು ತೆರೆದು ಅಲ್ಲಿಗೆ ರೋಗಿಗಳನ್ನು ಬರಮಾಡಿಕೊಂಡು ಬಡ ರೋಗಿಗಳಿಂದ ಸಾವಿರಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಇಲ್ಲಿನ ಪ್ರಸೂತಿ ತಜ್ಞೆ ಗರ್ಭಿಣಿಯರ ಸಾಮಾನ್ಯ ಹೆರಿಗೆಗೆ 6 ಸಾವಿರ ಹಾಗೂ ಶಸ್ತ್ರಚಿಕಿತ್ಸೆ ಮಾಡಿದರೆ 12 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಅಪಘಾತ ಹಾಗೂ ಹಲವು ಕಾರಣದಿಂದ ಗಾಯಗೊಂಡು ಬರುವ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಇಲ್ಲಿನ ಮೂಳೆವೈದ್ಯ, ಮೈಸೂರಿನ ಖಾಸಗಿ ನರ್ಸಿಂಗ್ ಹೋಂಗಳಿಗೆ ಕಳುಹಿಸಿ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡಿ ಹಣ ಗಳಿಸುವ ದಂಧೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.

    ಈ ಎಲ್ಲ ಅಕ್ರಮಗಳು ತಿಳಿಸಿದ್ದರೂ ಆಡಳಿತ ವೈದ್ಯಾಧಿಕಾರಿ ಡಾ. ಮಹದೇವನಾಯ್ಕ ತಡೆಗಟ್ಟುವ ಕ್ರಮ ವಹಿಸದೆ ಅಕ್ರಮದಲ್ಲಿ ಬಾಗಿಯಾಗಿ ಭ್ರಷ್ಟಾಚಾರದಲ್ಲಿ ಕೈ ಜೋಡಿಸಿದ್ದಾರೆ. ಈ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಬೇಕಿದ್ದ ಶಾಸಕ ಡಾ.ಕೆ.ಅನ್ನದಾನಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆಂದು ಟೀಕಿಸಿದರು.

    ತಹಸೀಲ್ದಾರ್ ಎಂ.ವಿಜಯಣ್ಣ ಆಗಮಿಸಿ ಹೋರಾಟಗಾರರ ಮನವಿ ಆಲಿಸಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುಂತೆ ಮನವೊಲಿಸಲು ಮುಂದಾದರೂ ಇದಕ್ಕೊಪ್ಪದ ಪ್ರತಿಭಟನಾನಿರತರು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದರು.

    ಕೆಲ ಗಂಟೆಗಳ ನಂತರ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಶಿಧರ್ ಮಂಡ್ಯದಿಂದ ಆಗಮಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಭ್ರೂಣ ಪತ್ತೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ವೈದ್ಯನ ಮೇಲೆ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಹೋಗುತ್ತಿದ್ದೇನೆ. ಆಸ್ಪತ್ರೆಯ ವೈದ್ಯರ ಮೇಲಿರುವ ಆರೋಪಗಳು ಹಾಗೂ ಅವ್ಯವಸ್ಥೆಯ ಬಗ್ಗೆ ಮುಂದಿನ ಹದಿನೈದು ದಿನದೊಳಗೆ ನಿಮ್ಮನ್ನು ಕರೆಸಿ ಜಿಲ್ಲಾ ಆರೋಗ್ಯಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಲಾಗುವುದೆಂದು ಭರವಸೆ ನೀಡಿದ ನಂತರ ಹೋರಾಟ ಕೈ ಬಿಡಲಾಯಿತು.
    ಸಂಘಟನೆ ಮುಖಂಡರಾದ ಭರತ್ ರಾಜ್, ಜಿ.ರಾಮಕೃಷ್ಣ, ಲಿಂಗರಾಜಮೂರ್ತಿ, ತಿಮ್ಮೇಗೌಡ, ಸುನಿತಾ, ಮಂಜುಳಾ, ವರದೇವಿ, ಗುರುಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts