More

    ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಮನವಿ

    ಧಾರವಾಡ: ಕರೊನಾ ವೈರಸ್ ವಿರುದ್ಧ ಜನಾಂದೋಲನ ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜನ ಜಾಗೃತಿಗೆ ಕರೆ ನೀಡಿರುವ ಜನತಾ ಕರ್ಫ್ಯೂ ಯಶಸ್ವಿಗೊಳಿಸಬೇಕು. ಮಾ. 22 ರಂದು ಜನರು ಮನೆಗಳಿಂದ ಹೊರಬರದೆ ಸ್ವಇಚ್ಛೆಯಿಂದ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶಗಳಿಂದ ಆಗಮಿಸುವ ಜನರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಬೇಕು. ಮನೆಗಳಲ್ಲಿ ಪ್ರತ್ಯೇಕವಾಗಿ ನಿಗಾ ಇರಿಸಲ್ಪಟ್ಟವರು ಪ್ರತ್ಯೇಕತೆ ಅನುಸರಿಸಬೇಕು. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.

    ವೈರಸ್ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೋಟೆಲ್, ಖಾನಾವಳಿ, ರೆಸ್ಟೋರೆಂಟ್​ಗಳಲ್ಲಿ ಸ್ವಚ್ಛತೆ ಕಾಪಾಡಲು ಮಾಲೀಕರು ಮತ್ತು ನಿರ್ವಾಹಕರು ಆದ್ಯತೆ ನೀಡಬೇಕು. ಕೆಲಸಗಾರರು ಶುಚಿತ್ವದಿಂದ ಗ್ರಾಹಕರಿಗೆ ಸೇವೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಪಾತ್ರೆ ತೊಳೆಯಲು ಬಿಸಿನೀರು ಬಳಸಬೇಕು. ಗ್ರಾಹಕರಿಗೆ ಕುಡಿಯಲು ಬಿಸಿನೀರು ಕೊಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವೀಕ್ಷಣೆ ಮಾಡಬೇಕು ಎಂದು ಸೂಚಿಸಿದರು.

    ಜಿಲ್ಲೆಯಲ್ಲಿ ಸದ್ಯ ವೈರಸ್ ನಿಯಂತ್ರಣದಲ್ಲಿದೆ. ಮುಂದಿನ ಹಂತಗಳನ್ನು ಎದುರಿಸಲು ವೈದ್ಯಕೀಯ ಹಾಗೂ ಇತರ ಅಗತ್ಯ ಕ್ರಮಗಳ ಏರ್ಪಾಡು ಮಾಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳು, ಎನ್-95 ಮಾಸ್ಕ್ ಮೊದಲಾದ ರಕ್ಷಣಾ ಸಾಮಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕು. ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲೆಯ ಗಡಿಭಾಗ ಮತ್ತು ನಗರದ ಪ್ರವೇಶದ ಮುಖ್ಯ ಸ್ಥಳಗಳಲ್ಲಿ ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕರ್ತವ್ಯಗಳನ್ನು ಸಮರ್ಪಕವಾಗಿ ವಿಭಜಿಸಿಕೊಂಡು ಜವಾಬ್ದಾರಿ ಸ್ಥಾನದಲ್ಲಿರುವ ಪ್ರತಿಯೊಬ್ಬ ಅಧಿಕಾರಿಗಳಿಗೆ ಕೆಲಸ ಹಂಚಿಕೆ ಮಾಡಬೇಕು. ಮುಂಬರುವ ಹಂತಗಳಲ್ಲಿ ಸ್ಟ್ಯಾಂಪಿಂಗ್ ಕಾರ್ಯ ಪ್ರಾರಂಭವಾದರೆ ಅಳಿಸಲಾಗದ ಶಾಹಿ ಹಾಗೂ ಮೊಹರು ಸಾಕಷ್ಟು ಸಂಖ್ಯೆಯಲ್ಲಿ ಬೇಕಾಗುತ್ತದೆ. ಅವುಗಳ ಸಿದ್ಧತೆಯನ್ನು ತಹಸೀಲ್ದಾರರು ಮಾಡಿಕೊಳ್ಳಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಡಾ. ಎಸ್.ಎಂ. ಹೊನಕೇರಿ, ಡಾ. ಎಸ್.ಎಂ. ನಿಂಬಣ್ಣವರ, ಡಾ. ಶಶಿ ಪಾಟೀಲ, ಡಾ. ಕವನ ದೇಶಪಾಂಡೆ, ಇಎಸ್​ಐ ಆಸ್ಪತ್ರೆಯ ಡಾ. ವಿಜಯಾ ಮಾಳಗಿ, ಸಹಾಯಕ ಔಷಧ ನಿಯಂತ್ರಕ ಮಲ್ಲಿಕಾರ್ಜುನ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts