More

    ಚೆನ್ನಮ್ಮ ಜಯಂತಿಗೆ ನಿರ್ಲಕ್ಷ್ಯ ಕಿಡಿ

    ಕಲಬುರಗಿ: ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರಿನ ವೀರರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿ ಬಾರದೆ ನಿರ್ಲಕ್ಷೃ ವಹಿಸಿದ್ದರಿಂದ ಸಿಡಿದೆದ್ದ ಲಿಂಗಾಯತ-ವೀರಶೈವ ಸಮಾಜದವರು ಶುಕ್ರವಾರ ಡಾ.ಎಸ್.ಎಂ. ಪಂಡಿತ ರಂಗಮಂದಿರ ಎದುರು ಮಿಂಚಿನ ಪ್ರತಿಭಟನೆ ನಡೆಸಿದರು.
    ಸರ್ಕಾರದಿಂದಲೇ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಿಸಿ ಸೇರಿ ಯಾವೊಬ್ಬ ಅಧಿಕಾರಿ ಬಂದಿರಲಿಲ್ಲ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜನಪ್ರತಿನಿಧಿಗಳಿಗೆ ಆಹ್ವಾನಿಸಿರಲಿಲ್ಲ. ಡಿಸಿ ಇತರ ಅಧಿಕಾರಿಗಳು ಬರಬಹುದು ಎಂದು ಸಭಿಕರು ಸುಮಾರು ಹೊತ್ತು ಕಾದು ಕುಳಿತಿದ್ದರು. ಬಾರದಿದ್ದಾಗ ಸಹನೆ ಕಳೆದುಕೊಂಡು ರೊಚ್ಚಿಗೆದ್ದರು.
    ದೇಶಕ್ಕೆ ಸ್ವಾತಂತ್ರೃ ಕೊಡಿಸಲು ಕಾರಣರಾದವರಲ್ಲಿ ಒಬ್ಬರಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕರೊನಾ ಹಿನ್ನೆಲೆಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸದೆ ನಿರ್ಲಕ್ಷಿಸಲಾಗಿದೆ. ಕಾರ್ಯಕ್ರಮ ಆಯೋಜನೆ ಹೊಣೆ ಹೊತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮೇಲಧಿಕಾರಿಗಳ ಗಮನಕ್ಕೆ ತರುವಲ್ಲಿ ಕರ್ತವ್ಯಲೋಪ ಮಾಡಿದ್ದಾರೆ. ಹೀಗಾಗಿ ಅವರನ್ನು ಸೇವೆಯಿಂದ ಅಮಾನತು ಜತೆಗೆ ವಿಚಾರಣೆ ನಡೆಸಿ ವಜಾಗೊಳಿಸಬೇಕು ಎಂದು ರಂಗಮಂದಿರ ಎದುರಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
    ಚೆನ್ನಮ್ಮ ಜಯಂತಿ ನಿರ್ಲಕ್ಷಿಸಿದ್ದಕ್ಕೆ ಸಿಡಿದೆದ್ದ ವೀರಶೈವ ಮಹಾಸಭಾ ಯುವ ಘಟಕ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ರಂಗಮಂದಿರ ಒೂಳಗೆ ರಾಣಿ ಭಾವಚಿತ್ರವಿಟ್ಟ ಸ್ಥಳದಲ್ಲೇ ಮಲಗಿ ಪ್ರತಿಭಟನೆ ಶುರುವಿಟ್ಟರು. ವೀರಶೈವ ಸಮಾಜ ಉಪಾಧ್ಯಕ್ಷ ಸುರೇಶ ಪಾಟೀಲ್ ಜೋಗೂರ, ವೀರಶೈವ ಮಹಾಸಭಾ ಉಪಾಧ್ಯಕ್ಷ ಈರಣ್ಣ ಗುಳೇದ ಇತರರು ಜಿಲ್ಲಾಡಳಿತ ಮತ್ತು ಸಾಗನೂರ ವಿರುದ್ಧ ಧಿಕ್ಕಾರ ಕೂಗುತ್ತ ರಂಗಮಂದಿರದಿಂದ ಹೊರಬಂದು ಡಿಎಚ್ಒ ಕಚೇರಿ ಎದುರಿನ ಮುಖ್ಯ ರಸ್ತೆಯಲ್ಲಿ ಕುಳಿತುಕೊಂಡರು.
    ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ಮುಖ್ಯ ರಸ್ತೆಯಲ್ಲಿ ದಿಢೀರ್ ಪ್ರತಿಭಟನೆ ನಡೆದಿದ್ದರಿಂದ ಪೊಲೀಸರು ಕಕ್ಕಾಬಿಕ್ಕಿಯಾದರು. ಚೆನ್ನಾಗಿರುವ ಹೂವಿನ ಹಾರ ತರಲು ಸಹ ಆಗಿಲ್ಲ, ಬ್ಯಾನರ್ ಕೂಡ ಮಾಡಿಸದೆ ನಿರ್ಲಕ್ಷಿಸಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಜಿಲ್ಲಾಡಳಿತ ಅವಮಾನಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
    ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಸಮಾಧಾನಪಡಿಸಿ ರಸ್ತೆ ತಡೆ ನಿಲ್ಲಿಸಿ ಕಾರ್ಯಕ್ರಮ ಆಯೋಜಿಸಿದ್ದ ರಂಗ ಮಂದಿರ ಒಳಗೆ ಕರೆದೊಯ್ದರು. ಜಿಲ್ಲಾಧಿಕಾರಿಗಳು ಪ್ರವಾಹಪೀಡಿತ ಪ್ರದೇಶಗಳ ಭೇಟಿಗೆ ತೆರಳಿದ್ದರಿಂದ ಸಹಾಯಕ ಆಯುಕ್ತರು ಆಗಮಿಸಿ ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts