More

    ಚುರುಕು ಪಡೆದುಕೊಂಡ ನಗರ ರಾಜಕೀಯ

    ಜಿಲ್ಲೆಯಲ್ಲಿ 2018 ರಲ್ಲಿ 8 ಹಾಗೂ 2019 ರಲ್ಲಿ 3 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿತ್ತು. ಗುರುವಾರ ಸರ್ಕಾರ ಮೂರನೇ ಬಾರಿಗೆ ಅಧ್ಯಕ್ಷ , ಉಪಾಧ್ಯಕ್ಷರ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಪಟ್ಟಣಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಎಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ. ಯಾರ್ಯಾನ ನಡುವೆ ಪೈಪೋಟಿ ಇದೆ ಎಂಬುದರ ಚಿತ್ರಣ ಇಲ್ಲಿದೆ.

    ವಿಜಯವಾಣಿ ಟೀಮ್ ಉತ್ತರ ಕನ್ನಡ

    ಸರ್ಕಾರ ಮೂರನೇ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಸ್ತಬ್ಧವಾಗಿದ್ದ ನಗರ ರಾಜಕೀಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಬಹುತೇಕ ಸ್ಥಾನಗಳು ಸಾಮಾನ್ಯ ಹಾಗೂ ಹಿಂದುಳಿದ ‘ಅ’ ವರ್ಗಕ್ಕೆ ತೆರೆದುಕೊಂಡಿದ್ದು, ಆಕಾಂಕ್ಷಿಗಳ ಸಂಖ್ಯೆ ಹಾಗೂ ಪೈಪೋಟಿ ಹೆಚ್ಚಿದೆ. ಹಿಂದಿನ ಮೀಸಲಾತಿ ಕೆಲವೆಡೆ ಮಾತ್ರ ಬದಲಾಗಿದೆ. ಸಿದ್ದಾಪುರ ಸೇರಿ ಇನ್ನೂ ವಿವಿಧ ಕಡೆಗಳಲ್ಲಿ ಮೀಸಲಾತಿ ಬಗ್ಗೆ ಅಸಮಾಧಾನ ಮುಂದುವರಿದಿದೆ. ಆದರೂ ಯಾವುದೇ ಆಕ್ಷೇಪಣೆ ಇಲ್ಲದೆ ಪ್ರಮುಖರ ಆಯ್ಕೆಯಾಗಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.

    ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ 11 ಕ್ಕೆ ಸದ್ಯವೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಭಟ್ಕಳ ತಾಲೂಕಿನ ಜಾಲಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದರೂ ಹಾಲಿ ಆಡಳಿತ ಸಮಿತಿಗೆ ಇನ್ನೂ ಆರು ತಿಂಗಳ ಅಧಿಕಾರವಿರುವುದರಿಂದ ಸದ್ಯ ಹೊಸ ಸಾರಥಿಗಳ ಆಯ್ಕೆಗೆ ಅವಶ್ಯವಿಲ್ಲ.

    ಜಿಲ್ಲೆಯ ಕಾರವಾರ, ಶಿರಸಿ, ಹಾಗೂ ದಾಂಡೇಲಿ ನಗರಸಭೆಗಳು, ಕುಮಟಾ, ಅಂಕೋಲಾ, ಹಳಿಯಾಳ ಪುರಸಭೆಗಳು, ಯಲ್ಲಾಪುರ, ಮುಂಡಗೋಡ ಪಟ್ಟಣ ಪಂಚಾಯಿತಿಗಳಿಗೆ 2018 ರಲ್ಲಿ, ಭಟ್ಕಳ ಪುರಸಭೆ, ಸಿದ್ದಾಪುರ, ಹೊನ್ನಾವರ ಪಟ್ಟಣ ಪಂಚಾಯಿತಿಗಳಿಗೆ 2019 ರಲ್ಲಿ ಚುನಾವಣೆ ನಡೆದಿತ್ತು. 2018 ರ ಸೆ. 3 ರಂದು ಮೊದಲ ಬಾರಿ ಹಾಗೂ 2020 ರ ಮಾರ್ಚ್ 11 ರಂದು ಸರ್ಕಾರ ಎರಡನೇ ಬಾರಿ ಮೀಸಲಾತಿ ಪಟ್ಟಿ ಪ್ರಕಟ ಮಾಡಿತ್ತು. ಎರಡೂ ಮೀಸಲಾತಿಗಳನ್ನು ವಿರೋಧಿಸಿ ಆಕಾಂಕ್ಷಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

    ಹೈಲೈಟ್ಸ್ : ಒಟ್ಟು ನಗರ ಸ್ಥಳೀಯ ಸಂಸ್ಥೆಗಳು- 12, ಚುನಾವಣೆ ನಡೆದ ಸಂಸ್ಥೆಗಳು -11, ಬಿಜೆಪಿಗೆ ಬಹುಮತ-6, ಕಾಂಗ್ರೆಸ್ ಬಹುಮತ-2, ಪಕ್ಷೇತರರ ಪಾರಮ್ಯ-1, ಅತಂತ್ರ-2

    ಭಟ್ಕಳ ಸಲೀಸು: ಭಟ್ಕಳ ಪುರಸಭೆಯ ಅಧ್ಯಕ್ಷ ಸ್ಥಾನದ ಬಗ್ಗೆ ಕಳೆದ ಬಾರಿ ಅಸಮಾಧಾನವೆದ್ದಿತ್ತು. ಈಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯಕ್ಕೆ ತೆರೆದುಕೊಂಡಿವೆ. ಇದರಿಂದ ಪುರಸಭೆಯಲ್ಲಿ ಪ್ರಾಬಲ್ಯ ಹೊಂದಿರುವ ತಂಜಿಂಗೆ ಅನುಕೂಲವಾಗಿದ್ದು ಸುಸೂತ್ರವಾಗಿ ಆಯ್ಕೆ ನಡೆಯುವ ಸಾಧ್ಯತೆ ಇದೆ. ಭಟ್ಕಳ ಪುರಸಭೆ ರಾಜಕೀಯದಲ್ಲಿ ಮೊದಲಿನಿಂದಲೂ ಇಸ್ಲಾಂ ಸಂಘಟನೆ ತಂಜಿಂ ಪರಮಾಧಿಕಾರ ಸಾಧಿಸಿಕೊಂಡು ಬಂದಿದೆ. ಒಟ್ಟು 23 ವಾರ್ಡ್​ಗಳನ್ನು ಹೊಂದಿರುವ ಪುರಸಭೆಗೆ ಚುನಾವಣೆಯಲ್ಲಿ ತಂಜೀಂ ಬೆಂಬಲಿತ ಪಕ್ಷೇತರರು 11 ಸೇರಿ ಒಟ್ಟು 18 ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಾಂಗ್ರೆಸ್ 4, ಬಿಜೆಪಿ 1 ಸ್ಥಾನ ಗೆದ್ದುಕೊಂಡಿತ್ತು.

    ಆಕಾಂಕ್ಷಿಗಳಿಗೆ ಪಕ್ಷಾಂತರ ಕಾಯ್ದೆ ಆತಂಕ: ಯಲ್ಲಾಪುರ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನ ಸಾಮಾನ್ಯ ವರ್ಗಕ್ಕೆ ಘೊಷಣೆಯಾಗಿದೆ. ಇದರಿಂದ ಎರಡೂ ಸ್ಥಾನಗಳಿಗೆ ಭಾರಿ ಪೈಪೋಟಿ ಆರಂಭವಾಗಿದೆ. ಸಚಿವ ಶಿವರಾಮ ಹೆಬ್ಬಾರ ಆಪ್ತರಾಗಿರುವ ಸತೀಶ ನಾಯ್ಕ, ಸೋಮೇಶ್ವರ ನಾಯ್ಕ ಅವರ ಹೆಸರು ಮುಂಚೂಣಿಯಲ್ಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯೆಯರಾದ ಪುಷ್ಪಾ ನಾಯ್ಕ, ಸುನಂದಾ ದಾಸ್ ಹೆಸರು ಕೇಳಿ ಬರುತ್ತಿದೆ. ಇವರಲ್ಲಿ ಸೋಮೇಶ್ವರ ನಾಯ್ಕ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿದ್ದು, ಸುನಂದಾ ದಾಸ್ ಬಿಜೆಪಿ ಯಲ್ಲಾಪುರ ನಗರ ಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಪಕ್ಷದ ಜವಾಬ್ದಾರಿ ಇದ್ದವರಿಗೆ ಮತ್ತೊಂದು ಹುದ್ದೆ ನೀಡುವ ಸಾಧ್ಯತೆ ಕಡಿಮೆ ಇರುವುದರಿಂದ ಸತೀಶ ನಾಯ್ಕ ಹಾಗೂ ಪುಷ್ಪಾ ನಾಯ್ಕ ಅವರ ನಡುವೆ ಪೈಪೋಟಿ ಜೋರಾಗಿದೆ. 19 ಸದಸ್ಯ ಬಲದ ಪಪಂನಲ್ಲಿ ಬಿಜೆಪಿ 3, ಕಾಂಗ್ರೆಸ್ 14 ಸ್ಥಾನ ಪಡೆದಿತ್ತು. ಈ ಹಿಂದೆ ಪಪಂ ಚುನಾವಣೆಯ ಸಂದರ್ಭದಲ್ಲಿ ಸಚಿವ ಶಿವರಾಮ ಹೆಬ್ಬಾರ ಕಾಂಗ್ರೆಸ್​ನಲ್ಲಿ ಶಾಸಕರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ 9 ಸದಸ್ಯರು ಹೆಬ್ಬಾರ ಜತೆಗೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರಿಲ್ಲ, ಕಾಂಗ್ರೆಸ್ ತೊರೆದಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ ಪಕ್ಷಾಂತರ ಪಿಡುಗು ತೊಡಕಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

    ಕುಮಟಾದಲ್ಲಿ ಪೈಪೋಟಿ: 23ವಾರ್ಡ್​ಗಳನ್ನು ಹೊಂದಿರುವ ಕುಮಟಾ ಪುರಸಭೆಯಲ್ಲಿ ಬಿಜೆಪಿ 16 ಸ್ಥಾನ ಗೆದ್ದು ಬಹುಮತ ಪಡೆದಿದೆ. ಕಾಂಗ್ರೆಸ್ 6, ಜೆಡಿಎಸ್1 ಸ್ಥಾನಗಳನ್ನು ಹೊಂದಿವೆ. ಸದ್ಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮಾಜಿ ಉಪಾಧ್ಯಕ್ಷೆ ಮೋಹಿನಿ ಗೌಡ ಹಿರಿಯ ಸದಸ್ಯರಾದ ಅನುರಾಧಾ ಬಾಳಗಿ ಮತ್ತು ಸುಮತಿ ಭಟ್ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದುಕೊಂಡಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಶಾಸಕ ದಿನಕರ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಗೆ ಹುದ್ದೆ ದೊರೆಯುವ ಸಾಧ್ಯತೆ ಹೆಚ್ಚಿದೆ.

    ಹೊನ್ನಾವರದಲ್ಲಿ ಅಧ್ಯಕ್ಷರ್ಯಾರು ?: 20 ವಾರ್ಡ್​ಗಳನ್ನು ಹೊಂದಿದ ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 12 ಸ್ಥಾನ ಪಡೆದು ಅಧಿಕಾರ ಹಿಡಿಯುವ ಅರ್ಹತೆ ಹೊಂದಿದೆ. ಈಗಿನ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಶಿವರಾಜ ಮೇಸ್ತ ಹೆಸರು ಕೇಳಿ ಬರುತ್ತಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಹಲವರು ಆಕಾಂಕ್ಷಿಗಳಾಗಿದ್ದಾರೆ.

    ದಾಂಡೇಲಿಯಲ್ಲಿ ಯಾಸ್ಮೀನ್- ಸರಸ್ವತಿ ನಡುವೆ ಪೈಪೋಟಿ: 31ವಾರ್ಡ್​ಗಳನ್ನು ಹೊಂದಿದ ದಾಂಡೇಲಿ ನಗರಸಭೆಯಲ್ಲಿ 16 ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಬಿಜೆಪಿ 11 ಸ್ಥಾನ ಪಡೆದಿದ್ದು, ನಾಲ್ವರು ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಮೂರು ಬಾರಿ ಅಧ್ಯಕ್ಷೆಯಾಗಿದ್ದ ಯಾಸ್ಮೀನ್ ಕಿತ್ತೂರ ಮತ್ತು ಎರಡು ಬಾರಿ ಆಯ್ಕೆಯಾಗಿರುವ ಸರಸ್ವತಿ ರಜಪೂತ ಅವರ ಮಧ್ಯೆ ಸ್ಪರ್ಧೆಯ ಸಾಧ್ಯತೆ ಇದೆ. ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕೆ್ಕೆ ನಂದಿಶ ಮುಂಗರವಾಡಿ ಮತ್ತು ಶಿಲ್ಪಾ ಕೋಡೆ, ಸಂಜಯ ನಂದ್ಯಾಲಕರ್, ಶೋಭಾ ತಾನಾಜಿ ಜಾಧವ ನಡುವೆ ಸ್ಪರ್ಧೆ ಸಾಧ್ಯತೆ ಇದೆ. ಏನೇ ಇದ್ದರೂ ಶಾಸಕ ಆರ್.ವಿ. ದೇಶಪಾಂಡೆ ತೀರ್ವನದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಸಿದ್ದಾಪುರದಲ್ಲಿ ಮತ್ತೆ ಅಸಮಾಧಾನ: ಕಳೆದ ಬಾರಿ ಸರ್ಕಾರ ಪ್ರಕಟಿಸಿದ ಸಿದ್ದಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೂ ಮೀಸಲಾತಿ ಬದಲಾಗಿಲ್ಲ. ಇದರಿಂದ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುವ ಮಾತುಗಳು ಕೇಳಿ ಬರುತ್ತಿವೆ. ಪಪಂನ ಒಟ್ಟು 15 ಸ್ಥಾನದಲ್ಲಿ ಬಿಜೆಪಿ 14 ಹಾಗೂ ಕಾಂಗ್ರೆಸ್ 1 ಸ್ಥಾನ ಹೊಂದಿದೆ. ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಅಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದೆ. ಕಳೆದ ಮೂರು ಬಾರಿ ಮಹಿಳೆಯರೇ ಅಧ್ಯಕ್ಷರಾಗಿದ್ದರಿಂದ ಮತ್ತೆ ಅದೇ ವರ್ಗಕ್ಕೆ ಮೀಸಲು ಬಂದಿರುವುದು ಪುರುಷರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರದೇ ಆಯ್ಕೆಯಾದಲ್ಲಿ ಚಂದ್ರಕಲಾ, ಯಶೋದಾ, ಮಂಜುಳಾ ಹಾಗೂ ರಾಧಿಕಾ ಕಾನಗೋಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

    ಅಂಕೋಲಾಕ್ಯಾರು ಅಧಿಪತಿ?: ಒಟ್ಟು 23 ವಾರ್ಡ್​ಗಳನ್ನು ಹೊಂದಿದ ಅಂಕೋಲಾದಲ್ಲಿ ಕಾಂಗ್ರೆಸ್ 10, ಬಿಜೆಪಿ 8 ಸ್ಥಾನ ಗೆದ್ದುಕೊಂಡಿತ್ತು. ಐವರು ಪಕ್ಷೇತರರಿದ್ದಾರೆ. ಕೈ -ಕಮಲ ಎರಡೂ ಪಕ್ಷಗಳಿಗೂ ಬಹುಮತದ ಕೊರತೆ ಇದೆ. ಹಾಗಾಗಿ ಪಕ್ಷೇತರರಿಗೆ ಭಾರಿ ಬೇಡಿಕೆ ಬಂದಿದೆ. ಶಾಸಕಿ ರೂಪಾಲಿ ಹಾಗೂ ಮಾಜಿ ಶಾಸಕ ಸತೀಶ ಸೈಲ್ ನಡುವೆ ಕಸರತ್ತು ನಡೆಯಲಿದ್ದು, ಯಾರೊ ಗೆಲ್ಲುವರೋ ಕಾದು ನೋಡಬೇಕಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದುಕೊಂಡಿಡಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದೆ.

    ಶಿರಸಿಯ ಗದ್ದುಗೆಗೇರುವವರ್ಯಾರು?: ಶಿರಸಿ ನಗರಸಭೆಯ 31 ಸ್ಥಾನಗಳಲ್ಲಿ 17ರಲ್ಲಿ ಬಿಜೆಪಿ ಇದ್ದು, 9 ಕಾಂಗ್ರೆಸ್ ಹಾಗೂ 5 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಅದರನ್ವರಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಿರಿಯ ಸದಸ್ಯ ಗಣಪತಿ ನಾಯ್ಕ ಹಾಗೂ ಪ್ರಥಮ ಬಾರಿಗೆ ಆಯ್ಕೆಗೊಂಡ ಆನಂದ ಸಾಲೇರ ಹೆಸರು ಮುಂಚೂಣಿಯಲ್ಲಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಿರಿಯ ಸದಸ್ಯೆ ವೀಣಾ ಶೆಟ್ಟಿ ಹೆಸರು ಪ್ರಸ್ತಾಪವಾಗಿದ್ದು, ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.

    ಆರ್​ವಿಡಿ ಕೃಪಾ ಕಟಾಕ್ಷ ಯಾರಿಗೆ? : ಹಳಿಯಾಳ ಪುರಸಭೆ 23 ಸ್ಥಾನಗಳಲ್ಲಿ ಬಿಜೆಪಿ 7 ಸ್ಥಾನ ಗೆದ್ದಿದ್ದರೆ, ಜೆಡಿಎಸ್ ಹಾಗೂ ಪಕ್ಷೇತರವಾಗಿ ತಲಾ ಒಬ್ಬ ಸದಸ್ಯರು ಗೆದ್ದಿದ್ದಾರೆ. ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಪುರ ಸಭೆಗೆ ಹೊಸ ಮುಖ ಬೇಕು ಎಂಬುದು ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ ಹಾಗೂ ಘೊಟ್ನೇಕರ ಅವರು ಅಭಿಪ್ರಾಯ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದು, ಅಜರ ಆರ್. ಬಸರಿಕಟ್ಟಿ, ನವೀನ ಕಾಟ್ಕರ, ಫಯಾಜ್ ಶೇಖ್, ನುಸ್ರತಜಹಾ ಬಸಾಪುರ, ದ್ರೌಪದಿ ಅಗಸರ ದ್ರೌಪದಿ ಅಗಸರ, ಶಮಿಮಬಾನು ಜಂಬೂವಾಲೆ ಆಕಾಂಕ್ಷಿಗಳಾಗಿದ್ದಾರೆ. ಅಜರ್ ಬಗ್ಗೆ ಕೈ ನಾಯಕರ ಒಲವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ದ್ರೌಪದಿ ಅಗಸರ ಅವರ ಹೆಸರು ಕೇಳಿ ಬರುತ್ತಿದೆ.

    ಕಾರವಾರಕ್ಕೆ ಯಾರ ಕಾರುಬಾರು?: ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ11 ಸ್ಥಾನ ಪಡೆದುಕೊಳ್ಳುವ ಮೂಲಕ 31 ವಾರ್ಡ್​ಗಳಿರುವ ಕಾರವಾರ ನಗರಸಭೆ ಆಡಳಿತ ಅತಂತ್ರವಾಗಿದೆ. 4 ಜೆಡಿಎಸ್ ಹಾಗೂ 5 ಜನ ಪಕ್ಷೇತರು ಕಿಂಗ್ ಮೇಕರ್​ಗಳಾಗಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇಲ್ಲ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಎರಡೂ ಸ್ಥಾನಗಳಿಗೂ ಮೂರು ಪಕ್ಷಗಳಿಂದ ಹಾಗೂ ಪಕ್ಷೇತರವಾಗಿ ದೊಡ್ಡ ಆಕಾಂಕ್ಷಿಗಳ ದಂಡೇ ಇದೆ. 2018 ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಇದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡಲಿದೆ ಎಂಬುದರ ಮೇಲೆ ಅಧ್ಯಕ್ಷ ಉಪಾಧ್ಯಕ್ಷರ ಗಾದಿ ನಿಗದಿಯಾಗಲಿದೆ. ಸದ್ಯ ಬಿಜೆಪಿ 11 ರ ಜತೆ ಇನ್ನಿಬ್ಬರು ಪಕ್ಷೇತರರನ್ನು ಅಧಿಕೃತವಾಗಿ ಸೇರಿಸಿಕೊಂಡು ಬಲವನ್ನು 13 ಕ್ಕೇರಿಸಿಕೊಂಡಿದೆ. ಇನ್ನೂ ಮೂವರು ಪಕ್ಷೇತರರನ್ನು ಸೆಳೆದು, ಶಾಸಕ, ಸಂಸದರ ಮತ ಪಡೆದು ಗಾದಿ ಹಿಡಿಯುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಕೂಡ ಜೆಡಿಎಸ್ ಮತ್ತು ಪಕ್ಷೇತರ ಬೆಂಬಲ ಪಡೆದು ಅಧಿಕಾರಕ್ಕಾಗಿ ಪೈಪೋಟಿ ನಡೆಸಿದೆ. ಈ ನಡುವೆ ಅಧ್ಯಕ್ಷ ಸ್ಥಾನ ತಮಗೆ ಬಿಟ್ಟುಕೊಟ್ಟಲಲ್ಲಿ ಬೆಂಬಲ ನೀಡುವುದಾಗಿ ಜೆಡಿಎಸ್ ಬೇಡಿಕೆ ಇಟ್ಟಿದ್ದರಿಂದ ಪೈಪೋಟಿ ಇನ್ನಷ್ಟು ಹೆಚ್ಚಿದೆ.

    ರೇಣುಕಾ- ಜಯಸುಧಾ ಇಬ್ಬರಲ್ಲಿ ಯಾರಿಗೆ ಪಟ್ಟ?: ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದುಕೊಂಡಿದೆ. ಒಟ್ಟು 19ವಾರ್ಡ್​ಗಳ ಪಪಂನಲ್ಲಿ ಕಾಂಗ್ರೆಸ್9 ಸ್ಥಾನ ಗಳಿಸಿದ್ದರೆ, ಬಿಜೆಪಿ10 ಸ್ಥಾನ ಪಡೆದು ಅಧಿಕಾರ ಹಿಡಿಯಲು ಅರ್ಹವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಹಾವೇರಿ, ಜಯಸುಧಾ ಬೋವಿ ವಡ್ಡರ್ ನಡುವೆ ಪೈಪೋಟಿ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಸದಸ್ಯರು ಪೈಪೋಟಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts