More

    ಚಿಣ್ಣರ ರೈಲು ಸಂಚಾರ ಆರಂಭಿಸಿ-ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಸೂಚನೆ

    ದಾವಣಗೆರೆ: ಜೆ.ಎಚ್.ಪಟೇಲ್ ಬಡಾವಣೆಯಲ್ಲಿನ ಜಿಲ್ಲಾ ಬಾಲಭವನದಲ್ಲಿರುವ ಚಿಣ್ಣರ ರೈಲು ಹಾಗೂ ಹಳಿಯನ್ನು ದುರಸ್ತಿಗೊಳಿಸಿ, ರೈಲು ಸಂಚಾರ ಪುನರಾರಂಭಕ್ಕೆ ಕ್ರಮ ವಹಿಸುವಂತೆ ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಾಲಭವನ ಹಾಗೂ ತಾಲ್ಲೂಕು ಬಾಲಭವನ ಸೊಸೈಟಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    2019ರಲ್ಲಿ ಉದ್ಘಾಟನೆಯಾಗಿದ್ದ ಟಾಯ್ ಟ್ರೈನ್ ಈವರೆಗೆ ಕಾರ್ಯಾರಂಭ ಮಾಡದಿರುವ ಬಗ್ಗೆ ಪರಿಶೀಲಿಸಿದ ಅವರು, ಟಾಯ್ ಟ್ರೈನ್‌ನ ಇಂಜಿನ್, ರೈಲು ಹಳಿಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದಿರುವ ಪತ್ರಗಳ ಬಗ್ಗೆ ಮರುಪರಿಶೀಲಿಸಿ ದುರಸ್ತಿಗೆ ಕ್ರಮ ವಹಿಸಬೇಕು ಎಂದರು.
    ಜಿಲ್ಲಾ ಬಾಲಭವನವು ಹೊರವಲಯದಲ್ಲಿರುವ ಕಾರಣ ಅಲ್ಲಿಗೆ ಮಕ್ಕಳು ಬರಬೇಕೆಂದರೆ ಬಾಲಭವನವನ್ನು ಅತ್ಯಂತ ಆಕರ್ಷಣೀಯವಾಗಿ ಅಭಿವೃದ್ಧಿ ಪಡಿಸಬೇಕು. ಅದಕ್ಕಾಗಿ ತೋಟಗಾರಿಕೆ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿ ಬಾಲಭವನ ಆವರಣ ಸೌಂದರ್ಯೀಕರಣಗೊಳಿಸಲು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕೆಂದು ಹೇಳಿದರು.
    ಜಿಲ್ಲಾ ಬಾಲಭವನ ಸೊಸೈಟಿ ಅಧ್ಯಕ್ಷ, ಜಿಪಂ ಸಿಇಒ ಡಾ.ಎ.ಚನ್ನಪ್ಪ ಮಾತನಾಡಿ ಬಾಲಭವನದ ಆವರಣದಲ್ಲಿ ವಾರಾಂತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಇವನ್ನು ಹೆಚ್ಚಿನ ರೀತಿಯಲ್ಲಿ ಅರ್ಥಪೂರ್ಣವನ್ನಾಗಿಸಲು ಕ್ರಿಯಾಯೋಜನೆಯನ್ನು ಪರಿಷ್ಕರಿಸಲಾಗುವುದೆಂದು ತಿಳಿಸಿದರು.
    ರಾಜ್ಯ ಬಾಲಭವನ ಸೊಸೈಟಿ ಕಾರ್ಯದರ್ಶಿ ರಾಜಮೂರ್ತಿ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಸಿಡಿಪಿಒ ಧರಣೀಶ್, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರರಿದ್ದರು.
    ಇದಕ್ಕೂ ಮುನ್ನ ಅಧ್ಯಕ್ಷರು ಬಾಲಭವನದ ಪರಿಸರವನ್ನು ಪರಿವೀಕ್ಷಿಸಿ, ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆಯೂ ಮಾರ್ಗದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts