More

    ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಅಸಮ್ಮತಿ : ಮುಳಬಾಗಿಲಿನಿಂದಲೇ ರಾಜಕೀಯ ಭವಿಷ್ಯ ಕಾಣಲು ಕೊತ್ತೂರು ಮಂಜುನಾಥ ಸಿದ್ಧತೆ

    ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಅಸಮ್ಮತಿ : ಮುಳಬಾಗಿಲಿನಿಂದಲೇ ರಾಜಕೀಯ ಭವಿಷ್ಯ ಕಾಣಲು ಕೊತ್ತೂರು ಮಂಜುನಾಥ ಸಿದ್ಧತೆ
    ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿಯಾತ್ರೆ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ಕೊತ್ತೂರು ಮಂಜುನಾಥ ಇದ್ದರು.

    ಮುಳಬಾಗಿಲು : ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒತ್ತಾಯಿಸುತ್ತಿದ್ದು ಅದಕ್ಕೆ ಕೊತ್ತೂರು ಅಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದ್ದು ಮುಳಬಾಗಿಲು ಕ್ಷೇತ್ರದಲ್ಲೇ ಕೊತ್ತೂರು ತಮ್ಮ ರಾಜಕೀಯ ಭವಿಷ್ಯ ಕಾಣಲು ಸಿದ್ಧತೆ ಮಾಡಿಕೊಂಡಿದ್ದಾರೆ.
    ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಕೊತ್ತೂರು ಮಂಜುನಾಥ್ ವೇದಿಕೆಯಲ್ಲಿ ಇದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಜಿ ಶಾಸಕರಾದ ಕೊತ್ತೂರು ಮತ್ತು ಚಿಂತಾಮಣಿ ಎಂ.ಸಿ.ಸುಧಾಕರ್ ಅವರು ಕಾಂಗ್ರೆಸ್ ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ. ಎಂಎಲ್‌ಸಿ ಚುನಾವಣೆ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಹೊಗಳಿದ್ದು, ಅಲ್ಲದೇ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಸೋಲಿಸಲು ಕೊತ್ತೂರು ಅಂತಹ ಅಭ್ಯರ್ಥಿಗಳು ಅವಶ್ಯವಿದೆ. ಒಗ್ಗಟ್ಟಿನಿಂದ ಪ್ರಬಲ ಅಭ್ಯರ್ಥಿಯನ್ನು ಸೂಚಿಸಿ ಸುಧಾಕರ್ ಅವರನ್ನು ಸೋಲಿಸಿ ಎಂಬ ಸಂದೇಶವನ್ನು ವೇದಿಕೆ ಮುಖಾಂತರ ರವಾನಿಸಿದ್ದರು. ಈ ಸಂದರ್ಭದಲ್ಲಿ ಕೊತ್ತೂರು ಅವರನ್ನು ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್ ಹುರಿದುಂಬಿಸಲು ಯತ್ನಿಸಿದಾಗ ಕೊತ್ತೂರು ನಿರಾಕರಿಸಿದ್ದಲ್ಲದೆ ಸಭಿಕರ ಘೋಷಣೆಗಳಿಗೂ ತಣ್ಣನೆಯ ಉತ್ತರ ನೀಡಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವುದಿಲ್ಲ ಎಂಬ ಸಂದೇಶವನ್ನು ಪಕ್ಷದ ವರಿಷ್ಠರು ಮತ್ತು ಚಿಕ್ಕಬಳ್ಳಾಪುರ ಮುಖಂಡರಿಗೆ ರವಾನಿಸಿದ್ದಾರೆ.


    ಮುಳಬಾಗಿಲಿನಲ್ಲೇ ಉಳಿಯಲು ಮನಸು: ಕೊತ್ತೂರು ಮಂಜುನಾಥ್ ಚಿಕ್ಕಬಳ್ಳಾಪುರದ ಕಡೆ ಹೋದರೆ ಮುಳಬಾಗಿಲಿನಲ್ಲಿ ಕಾಂಗ್ರೆಸ್ ದುರ್ಬಲವಾಗುವುದು ಖಚಿತ ಎಂಬುದು ತಿಳಿದ ವಿಷಯ. ಕೊತ್ತೂರು ಸಹ ಮುಳಬಾಗಿಲಿನಲ್ಲೇ ರಾಜಕಾರಣ ಮಾಡಲು ಮನಸ್ಸು ಮಾಡಿದ್ದು ಸ್ಪರ್ಧಿಸಲು ಅವಕಾಶ ಸಿಗದಿದ್ದಲ್ಲಿ ತಮ್ಮ ಕುಟುಂಬದ ಹತ್ತಿರದ ಸಂಬಂಧಿಕರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿಸುವ ಸಾಧ್ಯತೆಯಿದೆ. ಪಕ್ಷ ಇದಕ್ಕೆ ಸಮ್ಮತಿ ಸೂಚಿಸುವುದೋ ಅಥವಾ ಕೊತ್ತೂರು ಒಪ್ಪುವಂತಹ ಅಭ್ಯರ್ಥಿ ಹಾಕುವುದೋ ಎಂಬುದನ್ನು ಕಾದುನೋಡಬೇಕಿದೆ.
    ಈಗಾಗಲೇ ಮುಳಬಾಗಿಲು ಕ್ಷೇತ್ರದಿಂದ 12ಕ್ಕೂ ಅಧಿಕ ಆಕಾಂಕ್ಷಿ ಅಭ್ಯರ್ಥಿಗಳು ತೆರೆಮೆರೆಯಲ್ಲಿ ಕಸರತ್ತು ನಡೆಸಿದ್ದಾರೆ. ಅನೇಕಲ್‌ನ ಜಿಗಣಿ ಮೂಲದ ಸದ್ದಾಂ ಸಂಬಾಯ್ಯ, ಕೊತ್ತೂರು ಆರ್.ಅಂಜುಬಾಸ್ ಈಗಾಗಲೇ ಓಂಶಕ್ತಿ, ಅಯ್ಯಪ್ಪ ಭಕ್ತರಿಗೆ ಉಚಿತ ಬಸ್ ಸೇವೆ ಒದಗಿಸುವುದರ ಜತೆಗೆ ಕಳೆದ 6 ತಿಂಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಕೊತ್ತೂರಿಗೆ ಅವಕಾಶ ಸಿಗದಿದ್ದಲ್ಲಿ ಸ್ಪರ್ಧೆಗೆ ಸಿದ್ಧ, ಕೊತ್ತೂರು ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸುತ್ತೇವೆ ಎಂದು ಓಡಾಡುತ್ತಿದ್ದಾರೆ.


    ಚಿಕ್ಕಬಳ್ಳಾಪುರದಲ್ಲಿ ಅಧಿಕ ಆಕಾಂಕ್ಷಿಗಳು: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸಂಬಂಧಿ ಎನ್.ವಿನಯ್ ಶ್ಯಾಮ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್, ವಕೀಲ ನಾರಾಯಣಸ್ವಾಮಿ,
    ಗಂಗೇನಕಾಲುವೆ ನಾರಾಯಣಸ್ವಾಮಿ ಅಕಾಂಕ್ಷಿಗಳಾಗಿದ್ದು ವಿನಯ್‌ಶ್ಯಾಮ್ ಮತ್ತು ಎನ್.ರಮೇಶ್ ತೀವ್ರ ಪ್ರಯತ್ನದ ನಡುವೆ ಎಂ.ಎಸ್.ಸೀತಾರಾಮ್ ಪುತ್ರ ಎಂ.ಎಸ್. ರಕ್ಷಾರಾಮಯ್ಯ ಹೆಸರು ಸಹ ಕೊತ್ತೂರು ಹೆಸರೊಂದಿಗೆ ಕೇಳಿ ಬರುತ್ತಿದೆ. ಸ್ಪರ್ಧೆಗೆ ಕೊತ್ತೂರು ಮುಂದಾಗದೆ ನ್ಯಾಯಾಲಯದಲ್ಲಿ ಜಾತಿ ಪ್ರಮಾಣ ಪತ್ರದ ವಿವಾದ ಬಗೆಹರಿದರೆ ಮುಳಬಾಗಿಲಿನಿಂದ ಸ್ಪರ್ಧೆಗೆ ಸಿದ್ಧ . ಇಲ್ಲದಿದ್ದರೆ ಪಕ್ಷ ಹೇಳಿದರೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತೆಗೆದುಕೊಳ್ಳಲು ಅಣಿಯಾಗಿದ್ದಾರೆ.

    ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡುವುದಿಲ್ಲ. ಆ ಯೋಚನೆ ಇಲ್ಲ. ಮುಳಬಾಗಿಲಿನಲ್ಲೇ ಕಾರ್ಯ ನಿರ್ವಹಿಸುತ್ತೇನೆ. ನನ್ನ ರಾಜಕೀಯ ಅಸ್ತಿತ್ವ, ಜನರ ವಿಶ್ವಾಸವನ್ನು ಮುಳಬಾಗಿಲಿನಲ್ಲೇ ಪಡೆಯುತ್ತೇನೆ. ಕೊತ್ತೂರು ಜಿ.ಮಂಜುನಾಥ, ಮಾಜಿ ಶಾಸಕ, ಮುಳಬಾಗಿಲು

    ಮುಳಬಾಗಿಲ ಕ್ಷೇತ್ರದಲ್ಲಿ ಕೊತ್ತೂರು ಜಿ.ಮಂಜುನಾಥ್ ಅಭ್ಯರ್ಥಿಯಾಗುವುದು ಖಚಿತ. ರಾಜ್ಯ ಹೈಕೋರ್ಟ್ ನಲ್ಲಿ ಇವರ ಜಾತಿ ವಿವಾದ ಪ್ರಮಾಣಪತ್ರ ಬಗ್ಗೆ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಗಳಿದೆ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಹೋಗುವುದಿಲ್ಲ. ಎಂ.ಸಿ.ನೀಲಕಂಠೇಗೌಡ, ಅವಣಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುಳಬಾಗಿಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts