More

    ಚಳಿಗಾಲದ ಅಧಿವೇಶನ ನೇರಪ್ರಸಾರ – ಬಸವರಾಜ ಹೊರಟ್ಟಿ

    ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಕಲಾಪವನ್ನು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    2018ರ ಡಿಸೆಂಬರ್‌ನಲ್ಲಿ ಇಲ್ಲಿ ಅಧಿವೇಶನ ನಡೆದಿತ್ತು. 3 ವರ್ಷಗಳ ನಂತರ ಮತ್ತೆ ಅಧಿವೇಶನಕ್ಕೆ ಸಿದ್ಧತೆ ನಡೆದಿದೆ. ಪ್ರತಿ ವಿಷಯವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ವಿಧಾನಮಂಡಲ ಕಲಾಪವನ್ನೂ ನೇರಪ್ರಸಾರ ಮಾಡಲಾಗುತ್ತಿದೆ. ಅದೇ ಮಾದರಿ ಇಲ್ಲಿಯೂ ಅನುರಿಸಲಾಗುವುದು ಎಂದರು.

    20ರ ಒಳಗೆ ಪೂರ್ಣಗೊಳಿಸಲು ಸೂಚನೆ: ಅಧಿವೇಶನಕ್ಕೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನ.20ರೊಳಗೆ ಸಿದ್ಧತೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಉ.ಕ. ಸಮಸ್ಯೆ ಚರ್ಚೆಗೆ ಆದ್ಯತೆ: ಆಯಾ ದಿನದ ವಿಷಯಸೂಚಿ ಅನುಸಾರವೇ ಕಲಾಪ ನಡೆಸಲಾಗುವುದು. ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿ ತುರ್ತು ವಿಷಯಗಳ ಚರ್ಚೆಗೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗುವುದು. ಜತೆಗೆ, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದು ಹೊರಟ್ಟಿ ತಿಳಿಸಿದರು.

    ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಸೂಕ್ತ: ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಅಧಿವೇಶನ ವೇಳೆ ಆ ಕಚೇರಿಗಳ ಕೆಲಸಕ್ಕೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಗೆ ಜಿಲ್ಲಾಮಟ್ಟದ ಕಚೇರಿಗಿಂತ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವುದೇ ಸೂಕ್ತ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸರ್ಕಾರದ ಗಮನಕ್ಕೆ ತರುವೆ: ಪ್ರತಿವರ್ಷ ಅಧಿವೇಶನಕ್ಕೆ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಇಲ್ಲಿಯೇ ಶಾಸಕರ ಭವನ ನಿರ್ಮಿಸಬೇಕೆನ್ನುವ ಬೇಡಿಕೆ ಇದೆ. ಈ ಭಾಗದ ಜನರ ಭಾವನೆಯನ್ನು ಸರ್ಕಾರದ ಗಮನಕ್ಕೆ ತರುವೆ. ಇಲ್ಲಿ ಶಾಸಕರ ಭವನ ನಿರ್ಮಿಸಿದರೆ ಅನುಕೂಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೊರಟ್ಟಿ ತಿಳಿಸಿದರು.

    ಕಲಾಪದಲ್ಲಿ ಶಾಸಕರ ಹಾಜರಾತಿ ಕಡ್ಡಾಯಗೊಳಿಸಲು ಅವಕಾಶವಿಲ್ಲ. ಆದರೆ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಹಾಜರಿರುತ್ತಾರೆ.
    | ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts