More

    ಚರಂಡಿ ಎತ್ತರ ಭೆಂಡಿಗೇರಿ ತತ್ತರ!

    ಬೆಳಗಾವಿ: ತಾಲೂಕಿನ ಭೆಂಡಿಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ನಿವಾಸಿಗಳು ರೋಶಿ ಹೋಗಿದ್ದಾರೆ.ಗ್ರಾಮದ ಈ ರಸ್ತೆಯ ಎರಡೂ ಬದಿಗೆ ಮನೆಗಳಿದ್ದು, ಮನೆಗಳ ಅರ್ಧಮಟ್ಟಕ್ಕೆ ಬರುವಂತೆ ಚರಂಡಿಯನ್ನು ನಿರ್ಮಿಸಲಾಗಿದೆ.

    ಕಳೆದ ಐದಾರು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಎರಡು ೂಟಗಳಷ್ಟು ರಸ್ತೆಯನ್ನು ಎತ್ತರಿಸಲಾಗಿದೆ. ಆ ಸಂದಭದಲ್ಲೇ ಮನೆಗಳಿಗೆ ಧಕ್ಕೆಯಾಗಿದೆ. ಈಗ ಮತ್ತೆ ಚರಂಡಿಗಳನ್ನು ಮನೆಗಳ ಅರ್ಧ ಭಾಗಕ್ಕೆ ಬರುವಂತೆ ನಿರ್ಮಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ನಿವಾಸಿಗಳು ಮನೆಗಳಿಗಿಂತ ಎತ್ತರದಲ್ಲಿ ಚರಂಡಿ ನಿರ್ಮಿಸಿದರೆ ಹೇಗೆ?. ಅದರಲ್ಲಿ ನೀರು ಹೋಗುವುದಿರಲಿ ಚರಂಡಿ ನೀರೇ ನಮ್ಮ ಮನೆಗಳಿಗೆ ನುಗ್ಗುತ್ತದೆ. ದುರ್ವಾಸನೆಯಿಂದ ಮನೆಗಳಲ್ಲಿ ವಾಸಮಾಡುವುದು ಕಷ್ಟವಾಗಲಿದೆ ಎಂದು ಮನವರಿಕೆ ಮಾಡಿದರೂ ಗುತ್ತಿಗೆದಾರರು ಕಾಮಗಾರಿಯನ್ನು ತಮ್ಮಿಚ್ಛೆಯಂತೆ ಮಾಡುತ್ತ ನಡೆದಿದ್ದಾರೆ.

    ಭೆಂಡಿಗೇರಿ ಗ್ರಾಮ ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲೂ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.ಕ್ಯಾರೆ ಎನ್ನದ ಗುತ್ತಿಗೆದಾರರು:ವಸತಿ ಮನೆಗಳಿಗಿಂತ ಎತ್ತರದಲ್ಲಿ ಚರಂಡಿಗಳು ನಿರ್ಮಾಣವಾಗಿದ್ದರಿಂದ ಜನ, ಜಾನುವಾರಗಳು ಮನೆಯಿಂದ ಹೊರಬರುವುದು ಕಷ್ಟವಾಗಿದೆ. ಚರಂಡಿ ನೀರು ನೇರವಾಗಿ ಮನೆಗಳ ಒಳಗೆ ನುಗ್ಗುವಂತಾಗಿದೆ. ಚರಂಡಿ ಮೇಲೆ ಹತ್ತಿ ಇಳಿದು ಹೋಗುವ ದುಸ್ಥಿತಿ ನಿವಾಸಿಗಳಿಗೆ ಎದುರಾಗಿದೆ. ಮನೆಯಲ್ಲಿರುವ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಮನೆಯಿಂದ ಹೊರಗೆ ಬರುವುದೂ ಕಷ್ಟವಾಗುತ್ತಿದೆ. ಹೊರಗೆ ಬಂದರೆ ಒಳಗೆ ಹೋಗುವುದಕ್ಕೂ ತೊಂದರೆಯಾಗುತ್ತಿವೆ. ಅಲ್ಲದೆ ಬೈಕ್​ಗಳನ್ನು ಮನೆಯೊಳಗೆ ದಾಟಿಸುವುದು ಹಾಗೂ ಹೊರಗೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗದೆ ಎಲ್ಲೆಂದರಲ್ಲಿ ನಿಲ್ಲಿಸುವಂತಾಗಿದೆ.

    ನಿವಾಸಿಗಳ ಈ ಸಮಸ್ಯೆಗಳಿಗೆ ಸ್ಪಂದಿಸಿದೆ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಚರಂಡಿ, ರಸ್ತೆ ನಿರ್ಮಿಸುತ್ತಿದ್ದಾರೆ.ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ:ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಕೂಡಲೇ ಕೆಲಸ ನಿಲ್ಲಿಸಬೇಕು. ಚರಂಡಿ ಹಾಗೂ ರಸ್ತೆಯ ಎತ್ತರ ಕಡಿಮೆ ಮಾಡಿ ಮೊದಲಿದ್ದಂತೆಯೇ ನಿರ್ಮಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವೇ ಸ್ಥಳಿಯ ನಿವಾಸಿಗಳಿಗೆ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು. ಇಂತಹ ಕಾಮಗಾರಿಗಳಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಸ್ಥಳಿಯ ನಿವಾಸಿಗಳು ದೂರಿದ್ದಾರೆ.

    ಜಿಲ್ಲಾಧಿಕಾರಿ ಮಧ್ಯೆಪ್ರವೇಶಿಸಲಿ: ಈಗಾಗಲೇ ಮನೆಗಳ ಮುಂಬಾಗಿಲು ಅರ್ಧ ಮಟ್ಟಕ್ಕೆ ಚರಂಡಿಗಳನ್ನು ನಿರ್ಮಿಸಿರುವುದರಿಂದ ಜಾನುವಾರುಗಳನ್ನು ಜಮೀನಿನಲ್ಲಿ ಬಿಟ್ಟು ಬರಲಾಗುತ್ತಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಜಾನುವಾರಗಳಿಗೆ ಮೇವು, ನೀರು ಕುಡಿಸಲು ಸಹಿತ ಸಾಧ್ಯವಾಗುತ್ತಿಲ್ಲ. ಹಸು, ಎಮ್ಮೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಹೈನುಗಾರಿಕೆ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಅಲ್ಲದೆ ಮನೆಗಳ ಮರ್ಯಾದೆಗೆ ಧಕ್ಕೆ ಬಾರುವಂತೆ ಚರಂಡಿ ನಿರ್ಮಿಸಲಾಗಿದೆ. ಈ ಬಗ್ಗೆ ಪಂಚಾಯಿತಿಯವರಿಗೂ ಹೇಳಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ, ಚರಂಡಿ ಎತ್ತರವನ್ನು ಸಂಪೂರ್ಣ ಕಡಿಮೆ ಮಾಡಬೇಕು ಎಂದು ಭೆಂಡಿಗೇರಿ ಗ್ರಾಮಸ್ಥರು ವಿನಂತಿಸಿದ್ದಾರೆ.

    ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯುತ್ತೇನೆ. ಎಲ್ಲೆಲ್ಲಿ ಕಾಮಗಾರಿ ನಡೆದಿದೆಯೋ ಅಲ್ಲಲ್ಲಿ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ತಿಳಿಸುತ್ತೇನೆ.

    | ನಿತೇಶ ಪಾಟೀಲ ಬೆಳಗಾವಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts