More

    ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ

    ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣ ಸಂಧಿಸುವ ಹು-ಧಾ ರಸ್ತೆ, ನೀಲಿಜಿನ್ ರಸ್ತೆ ಹಾಗೂ ವಿಜಯಪುರ ರಸ್ತೆ (ಈದ್ಗಾ ಮೈದಾನ ಬಳಿ)ಯಲ್ಲಿ ಪಾದಚಾರಿಗಳ ಓಡಾಟಕ್ಕೆ ಸಬ್​ವೇ (ಸುರಂಗ ಮಾರ್ಗ) ನಿರ್ವಿುಸಬೇಕು. ಹಳೇ ಬಸ್ ನಿಲ್ದಾಣದಿಂದ ಕಾರ್ಯಾಚರಿಸುವ ಎಕ್ಸ್​ಪ್ರೆಸ್ ಬಸ್​ಗಳನ್ನು ಹೊಸೂರು ಅಥವಾ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು.

    ಹುಬ್ಬಳ್ಳಿಯ ಹೃದಯ ಭಾಗ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಕುರಿತು ವಾಕರಸಾ ಸಂಸ್ಥೆ ಅಧಿಕಾರಿಗಳ ತಂಡ ತಯಾರಿಸಿದ ವರದಿಯಲ್ಲಿ ಈ ಸಲಹೆ ನೀಡಲಾಗಿದೆ. ತಂಡದ ಸದಸ್ಯರು ಅಂತಿಮ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರಿಗೆ ಮಂಗಳವಾರ ಸಲ್ಲಿಸಿದರು.

    ಹು-ಧಾ ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ, ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್.ಎಲ್. ಕುಮಾರಸ್ವಾಮಿ ಅಧ್ಯಯನ ತಂಡದಲ್ಲಿ ಇದ್ದರು. ಅರ್ಬನ್ ಟ್ರಾನ್ಸಫೋರ್ಟ್ ಪ್ಲ್ಯಾನರ್ ವಿಜಯಾ ರೋಹಿಣಿ ಮಾರ್ಗದರ್ಶಕರಾಗಿದ್ದರು.

    ವರದಿಯಲ್ಲಿ ಚನ್ನಮ್ಮ ವೃತ್ತವನ್ನು ಸಂಧಿಸುವ 6 ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳ ಲೆಕ್ಕ ಹಾಕಲಾಗಿದೆ. ಪ್ರತಿ ನಿಮಿಷಕ್ಕೆ ಧಾರವಾಡ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸುವ ಪದಾಚಾರಿಗಳ ಸಂಖ್ಯೆ 33.6, ಕಾರವಾರ ರಸ್ತೆಯಲ್ಲಿ 12.7, ಬೆಂಗಳೂರು ರಸ್ತೆ (ಪಿ.ಬಿ. ರೋಡ್)ಯಲ್ಲಿ 7.2, ನೀಲಿಜಿನ್ ರಸ್ತೆಯಲ್ಲಿ 31.1, ವಿಜಯಪುರ ರಸ್ತೆಯಲ್ಲಿ 32.6 ಹಾಗೂ ಗದಗ ರಸ್ತೆಯಲ್ಲಿ 15.3 ಇದೆ ಎಂದು ವರದಿ ತಿಳಿಸಿದೆ. ಅತಿ ಹೆಚ್ಚು ಪಾದಚಾರಿಗಳ ಓಡಾಟವಿರುವ ಹು-ಧಾ ರಸ್ತೆ, ನೀಲಿಜನ್ ರಸ್ತೆ ಹಾಗೂ ವಿಜಯಪುರ ರಸ್ತೆಯಲ್ಲಿ ಸಬ್ ವೇ ನಿರ್ಮಾಣ ಸೂಕ್ತ ಎಂದು ಅಭಿಪ್ರಾಯಿಸಲಾಗಿದೆ.

    ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ನಿತ್ಯ ಅಂದಾಜು 3,817 ಬಸ್​ಗಳು ಸಂಚರಿಸುತ್ತವೆ. ಇದರಲ್ಲಿ 1,244 (ಶೇ. 33ರಷ್ಟು ) ಎಕ್ಸ್​ಪ್ರೆಸ್ ಬಸ್​ಗಳು ನಗರದಲ್ಲಿ ಸಂಚರಿಸುವ ಜನರಿಗೆ ಸಂಬಂಧಪಟ್ಟಿಲ್ಲ. ಈ ಬಸ್​ಗಳ ಕಾರ್ಯಾಚರಣೆಯನ್ನು ಹೊಸೂರು (ಬಿಆರ್​ಟಿಎಸ್) ಅಥವಾ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದರೆ ಚನ್ನಮ್ಮ ವೃತ್ತದಲ್ಲಿ ವಾಹನಗಳ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಹೇಳಿದೆ.

    ಚನ್ನಮ್ಮ ವೃತ್ತ ಸಂಧಿಸುವ ರಸ್ತೆಗಳಲ್ಲಿ ಫುಟ್​ಪಾತ್ ಅತಿಕ್ರಮಣ ತೆರವುಗೊಳಿಸಬೇಕು. ಫುಟ್​ಪಾತ್ ಮೇಲೆ ವಾಹನ ನಿಲುಗಡೆ ನಿರ್ಬಂಧಿಸಬೇಕು. ಸೈಕಲ್ ಪಾತ್ ನಿರ್ವಿುಸಬೇಕು. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಗರದೊಳಗೆ ಭಾರಿ ಹಾಗೂ ಸರಕು ವಾಹನಗಳ ಸಂಚಾರ ನಿಯಂತ್ರಿಸಬೇಕು. ಆಟೋ ರಿಕ್ಷಾ ಹಾಗೂ ಕ್ಯಾಬ್​ಗಳಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಹಾಗೂ ಇಳಿಸುವ ನಿಗದಿತ ಸ್ಥಳ ಗೊತ್ತುಪಡಿಸಬೇಕು ಎಂಬಿತ್ಯಾದಿ ಸಲಹೆ ನೀಡಲಾಗಿದೆ.

    ವರದಿಯನ್ನು ಈಗಾಗಲೇ ಪಾಲಿಕೆ ಹಾಗೂ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದು ತಂಡ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts