More

    ಚಂದ್ರಮೌಳೇಶ್ವರನ ದರ್ಶನಕ್ಕೆ ಹರಿದುಬಂದ ಭಕ್ತರ ದಂಡು

    ಸೊರಬ: ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶಿವನ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
    ಪಟ್ಟಣದ ಸ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್‌ನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಭಕ್ತರು ಬಿಲ್ವಪತ್ರೆ, ಕುಂಸಲ, ಮುತ್ತುಗ, ಪಾರಿಜಾತ, ಎಕ್ಕ, ಗಂಟೆ, ಕಣಗಲ ಹೂವುಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಬೆಳಗ್ಗೆಯಿಂದ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
    ದಂಡಾವತಿ ನದಿ ತಟದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ 31ನೇ ವರ್ಷದ ಮಹಾಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಚಂದ್ರಮೌಳೇಶ್ವರ ಸ್ವಾಮಿಗೆ 14 ಋತ್ವಿಜರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರಿತು.
    ಹಬ್ಬದ ವಿಶೇಷವಾಗಿ ಶಿವದೇವಾಲಯಗಳಿಗೆ ಭಕ್ತರು ದಂಡೇ ಹರಿದು ಬಂದಿತ್ತು. ಚಂದ್ರಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣ ಶ್ರೀ ಹೊಳೆಲಿಂಗೇಶ್ವರ, ಉರುಗನಹಳ್ಳಿ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಕೋಟಿಪುರದ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts