More

    ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ, ಬೇರೆಡೆ ನಿರ್ಮಾಣಕ್ಕೆ ರಾಹುತ್ತನಹಳ್ಳಿ ಜನರ ಪಟ್ಟು ಹಠ ಬಿಡದ ಗ್ರಾಪಂನಿಂದ ಭೂಮಿ ಪೂಜೆ

    ನೆಲಮಂಗಲ: ಬೆಂಗಳೂರು ಉತ್ತರ ತಾಲೂಕು ರಾಹುತ್ತನಹಳ್ಳಿ ಗ್ರಾಮದ ಕಾಲನಿ ಬಳಿ ಗ್ರಾಮ ಪಂಚಾಯಿತಿ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ.

    ಬುಧವಾರ ಬೆಳಗ್ಗೆ ದಾಸನಪುರ ಹೋಬಳಿ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಹುತ್ತನಹಳ್ಳಿ ಸ.ನಂ.57ರಲ್ಲಿನ 1.27 ಎಕರೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಉದ್ದೇಶದಿಂದ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಭೂಮಿಪೂಜೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ವಾಗ್ವಾದ ನಡೆದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

    ಗ್ರಾಮದ ಸ.ನಂ 60 ರಲ್ಲಿ 12 ಎಕರೆ ಜಾಗವನ್ನು ಕ್ರೀಡಾಂಗಣ, ಸ.ನಂ.58ರಲ್ಲಿನ 3 ಎಕರೆ ಜಾಗವನ್ನು ಸಾರ್ವಜನಿಕ ಆಸ್ಪತ್ರೆಗೆ, 59 ರಲ್ಲಿ ತಲಾ 2 ಎಕರೆ ಜಾಗವನ್ನು ಪಶುಆಸ್ಪತ್ರೆ ಮತ್ತು ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದ್ದು, ಅದರ ಪಕ್ಕದಲ್ಲೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಮೀಪದಲ್ಲೆ ಹರಿಯುವ ಅರ್ಕಾವತಿ ನದಿ ಕಲುಷಿತಗೊಳ್ಳುವುದು ಒಂದೆಡೆಯಾದರೆ ಅಂತರ್ಜಲಕ್ಕೂ ತೊಡಕಾಗಲಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಘನತ್ಯಾಜ್ಯ ಘಟಕವನ್ನು ಬೇರೆಡೆ ನಿರ್ಮಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಆದರೂ ಹಠಬಿಡದ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ನಿಗದಿ ಪಡಿಸಿದ್ದ ಜಾಗಬಿಟ್ಟು ಬೇರೆ ಕಡೆ ಪೂಜೆ ಮಾಡಿ ಸ್ಥಳದಿಂದ ಕಾಲ್ಕಿತ್ತರು. ಗ್ರಾಪಂ ಅಧ್ಯಕ್ಷ ನರಸೇಗೌಡ, ಸದಸ್ಯೆ ಆಂಜಿನಮ್ಮ, ಮಾಜಿ ಸದಸ್ಯ ಬಿ.ಕೆ.ರಾಮಯ್ಯ, ಹನುಮೇಗೌಡ, ಆರ್.ಜಿ.ಮಂಜಪ್ಪ, ಮುಖಂಡ ಧನಂಜಯ್‌ಗೌಡ, ಹನುಮಂತರಾಜು, ಆಂಜಿನಪ್ಪ, ವಕೀಲೆ ಪದ್ಮಾ ಮತ್ತಿತರರು ಇದ್ದರು.

    ಕಚೇರಿ ಮುಂದೆ ಪ್ರತಿಭಟನೆ: ವಿರೋಧದ ನಡುವೆಯೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಕಿತ್ತನಹಳ್ಳಿ ಗ್ರಾಪಂ ಕಚೇರಿ ಬಳಿ ತೆರಳಿದ ರಾಹುತ್ತನಹಳ್ಳಿ ಗ್ರಾಮಸ್ಥರು ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿನ ಸದರಿ ಜಾಗವನ್ನು ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅವರು ಮೀಸಲಿರಿಸಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತದ ನಿರ್ದೇಶನದಂತೆ ಭೂಮಿ ಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರ ವಿರೋಧ ಕುರಿತಾಗಿ ತಹಸೀಲ್ದಾರ್ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು.
    ಸಿದ್ದಪ್ಪ
    ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts