More

    ಘಟ್ಟಿ ಬಸವಣ್ಣ ಅಣೆಕಟ್ಟೆಗೆ ಮಂಜೂರು

    ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರ ಛಲ, ಪ್ರಯತ್ನದಿಂದ ಅನೇಕ ವರ್ಷಗಳ ಬೇಡಿಕೆಯಾಗಿದ್ದ 990 ಕೋಟಿ ರೂ.ಗಳ ‘ಘಟ್ಟಿ ಬಸವಣ್ಣ ಅಣೆಕಟ್ಟೆ’
    ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ಪಟ್ಟಣದ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ 4,500 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳನ್ನು ರಮೇಶ ಜಾರಕಿಹೊಳಿ ಅವರು ಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದಾರೆ. ಸದ್ಯ ಕಾಮಗಾರಿ ಆರಂಭವಾಗಿವೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.

    ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಹಾಗೂ ಕೋಟೆ ಅಭಿವೃದ್ಧಿಗೆ 2010ರಲ್ಲಿ ನಾನು ಕನ್ನಡ ಸಂಸ್ಕೃತಿ ಮಂತ್ರಿಯಾಗಿದ್ದಾಗ 50 ಲಕ್ಷ ರೂ. ಮಂಜೂರು ಮಾಡಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದೆ. 2012ರಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಗೆ ನಾನೇ ಆದೇಶ ಮಾಡಿದ್ದೇನೆ. 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಈಗ ಛತ್ರಪತಿ ಶಿವಾಜಿ ಮಹಾರಾಜರ ನೆನಪು ಬಂದಿದೆ. ಇಷ್ಟು ದಿನ ಎಲ್ಲಿದ್ದರು? ನಾನು ಮಾಡಿರುವ ಆದೇಶಗಳನ್ನು ಬೇಕಾದರೆ ತೆಗೆದು ನೋಡಿ. ಶಿಷ್ಟಾಚಾರ ಮೂಲಕ ಮುಖ್ಯಮಂತ್ರಿ ಅವರಿಂದ ಮಾಡಿದ ಉದ್ಘಾಟನೆ ನಂತರ ಮರು ಉದ್ಘಾಟನೆ ಮಾಡಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಶಾಸಕ ಮಾಡಾಳ ವಿರೂಪಾಕ್ಷ ಪುತ್ರ ಪ್ರಶಾಂತ ಬಂಧನ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗುತ್ತದೆ. ಅವನೇನು ನಮ್ಮ ಪಕ್ಷದ ಪದಾಧಿಕಾರಿಯಲ್ಲ. ಆತ ಸರ್ಕಾರಿ ನೌಕರ. ಹೀಗಾಗಿ ನಮ್ಮ ಪಕ್ಷಕ್ಕೆ ಯಾವುದೇ ಮುಜುಗರವಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಬಂದ್ ಮಾಡಿ, ತಮ್ಮ ಮೇಲಿನ 60 ಹಗರಣಗಳನ್ನು ಮುಚ್ಚಿಹಾಕಿದ್ದಾರೆ. ಆದರೆ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.

    ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಕ್ಕೆ ಇದು ಸೂಕ್ತ ವೇದಿಕೆ ಅಲ್ಲ. ಅತಿ ಶೀಘ್ರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಠಿಣ ಉತ್ತರ ನೀಡುತ್ತೇನೆ. ಘಟ್ಟಿ ಬಸವಣ್ಣ ಅಣೆಕಟ್ಟೆ ನಿರ್ಮಾಣಕ್ಕೆ ಪೂಜೆ ಮಾಡಿದ್ದೇವೆೆ. ಸರ್ಕಾರದಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಶಿಷ್ಟಾಚಾರದ ಪ್ರಕಾರ ಅಡಿಗಲ್ಲು ಕಾರ್ಯಕ್ರಮ ಮಾಡಲಾಗುವುದು ಎಂದರು. ಬಿಜೆಪಿ ಮುಖಂಡರಾದ ಸಂಜಯ ಪಾಟೀಲ, ಅರುಣ ಶಹಾಪುರ, ವಿವೇಕ ಡಬ್ಬಿ, ಮಹಾಂತೇಶ ಬಾಳಿಕಾಯಿ, ಭೀಮಶಿ ಭರಮಣ್ಣವರ, ರಾಜೇಂದ್ರ ಗೌಡಪ್ಪಗೋಳ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದನ್ನವರ, ಲಕ್ಷ್ಮಣ ತಪಸಿ, ಸುರೇಶ ಪಾಟೀಲ, ಶಶಿಧರ ದೇಮಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts