More

    ಗ್ರಾಮ ಸ್ವಚ್ಛತೆಗೆ ಅಧಿಕಾರಿಗಳ ನಿರ್ಲಕ್ಷ್ಯ; ಸಾಂಕ್ರಾಮಿಕ ಭೀತಿಯಲ್ಲಿ ಅಲಗದರೇನಹಳ್ಳಿ ಗ್ರಾಮಸ್ಥರು

    ಗುಡಿಬಂಡೆ: ತಿಂಗಳುಗಳೇ ಕಳೆದರೂ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಉಲ್ಲೋಡು ಗ್ರಾಪಂ ವ್ಯಾಪ್ತಿಯ ಅಲಗದರೇನಹಳ್ಳಿಯಲ್ಲ್ಲಿ ಇಂಥ ದುಸ್ಥಿತಿ ಎದುರಾಗಿದೆ. ಕಳೆದ ಹಲವು ತಿಂಗಳುಗಳಿಂದ ಗ್ರಾಮದ ಚರಂಡಿಗಳು ಅನೈರ್ಮಲ್ಯದಿಂದ ಕೂಡಿವೆ. ಎಲ್ಲೆಡೆ ಡೆಂಘೆ ಹಾಗೂ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಸ್ವಚ್ಛತೆ ಕಾಪಾಡುವಂತೆ ಆರೋಗ್ಯ ಇಲಾಖೆ ನೀಡುತ್ತಿರುವುದಲ್ಲದೆ, ಜಾಗೃತಿ ಮೂಡಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮ ನೈರ್ಮಲ್ಯಕ್ಕೆ ಸ್ಥಳೀಯ ಗ್ರಾಪಂ ಆಡಳಿತ ಗಮನ ಹರಿಸುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡಿ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿವೆ. ಆದರೆ, ಅನುದಾನಗಳು ಎಲ್ಲಿ ಹೋಗುತ್ತಿವೆ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬ, 250ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ಗ್ರಾಪಂ ಕೇಂದ್ರ ಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ಗ್ರಾಮದ ಸ್ಥಿತಿಯೇ ಹೀಗಾದರೆ ದೂರದ ಗ್ರಾಮಗಳ ಪರಿಸ್ಥಿತಿಯನ್ನು ಊಹಿಸುವುದೂ ಅಸಾಧ್ಯವಾಗಿದೆ.

    ನೀತಿಸಂಹಿತೆ ನೆಪ: ಗ್ರಾಮದಲ್ಲಿ ಇತ್ತೀಚೆೆಗೆ ಮಳೆ ಸುರಿದಿದ್ದರಿಂದ ಚರಂಡಿಯಲ್ಲಿದ್ದ ಕಸಕಡ್ಡಿ ತ್ಯಾಜ್ಯ ರಸ್ತೆಗೆ ಹರಿದು ಬಂದಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇಷ್ಟೆಲ್ಲ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದರೂ ಸ್ವಚ್ಛತೆ ಕೈಗೊಳ್ಳಬೇಕಾದ ಅಧಿಕಾರಿಗಳು ಚುನಾವಣೆ ನೀತಿಸಂಹಿತೆ ನೆಪ ಹೇಳಿ ಜನರನ್ನು ಸಾಂಕ್ರಾಮಿಕ ರೋಗಗಳತ್ತ ದೂಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಹೆಚ್ಚಿದ ಸೊಳ್ಳೆ ಕಾಟ: ಸಾರ್ವಜನಿಕರು ನಿತ್ಯ ಓಡಾಡುವ ರಸ್ತೆಯಲ್ಲಿ ಕೊಳಚೆ ನೀರು ತುಂಬಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ. ಚರಂಡಿ ಸ್ವಚ್ಛಗೊಳಿಸದೆ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ಭೀತಿಯಿಂದಾಗಿ ಸಂಜೆ ಹೊತ್ತಿನಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.


    ಚುನಾವಣೆ ನೀತಿಸಂಹಿತೆಯಿಂದ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ಕರೆಯಲು ಆಗಿರಲಿಲ್ಲ. ಮುಂದಿನ ಒಂದು ವಾರದೊಳಗೆ ಸಭೆ ಕರೆದು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಸ್ವಚ್ಛತೆಗೆ ಕ್ರಮ ಜರುಗಿಸಲಾಗುತ್ತದೆ.
    ಗೌಸ್‌ಪೀರ್, ಉಲ್ಲೋಡು ಗ್ರಾಪಂ ಪಿಡಿಒ


    ಮಳೆಗಾಲ ಶುರುವಾಗಿರುವ ಹಿನ್ನೆಲೆಯಿಂದಾಗಿ ಚರಂಡಿಗಳಲ್ಲಿ ಹೂಳು ತುಂಬಿದೆ. ಹೀಗಾಗಿ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ತಕ್ಷಣವೇ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸಬೇಕು.
    ದೇವರಾಜ್, ಅಲಗದರೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts