More

    ಗ್ರಾಮೀಣ ಕ್ಷೇತ್ರದ ಜನ ಈ ಸಲ ಮರುಳಾಗಲ್ಲ

    ಬೆಳಗಾವಿ: ಗ್ರಾಮೀಣ ಕ್ಷೇತ್ರದ ಜನರು ಮುಗ್ಧರು, ಸ್ವಾಭಿಮಾನಿಗಳು ಅವರಿಗೆ ಕುಕ್ಕರ್, ಮಿಕ್ಸರ್ ನೀಡಿ ಅವಮಾನಿಸುವ ಕೆಲಸವನ್ನು ಸ್ಥಳೀಯ ಶಾಸಕರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಗ್ರಾಮೀಣ ಕ್ಷೇತ್ರದ ಉಚಗಾಂವಿಯಲ್ಲಿ ಮಂಗಳವಾರ ಅಭಿಮಾನಿಗಳು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದು ಚುನಾಯಿತಗೊಂಡಿರುವ ಶಾಸಕಿ ಇದೀಗ ಅಭಿವೃದ್ಧಿ ಬದಲಾಗಿ ಕುಕ್ಕರ್, ಮಿಕ್ಸರ್ ಹಂಚುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಹಣ ಹಂಚಿ ಇಡಿ ಮತಕ್ಷೇತ್ರ ನನ್ನ ಮನೆಯಲ್ಲಿರುತ್ತದೆ ಎಂದು ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರಿಗೆ ಕ್ಷೇತ್ರದ ಜನರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ನಾಯಕರೊಬ್ಬರು ಕನಕಪುರದಲ್ಲಿ ಡುಪ್ಲಿಕೇಟ್ ಕುಕ್ಕರ್, ಮಿಕ್ಸರ್ ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ಓರಿಜಿನಲ್ ಕುಕ್ಕರ್ 1,400 ರಿಂದ 1,500 ರೂ.ವರೆಗೆ ಇರುತ್ತದೆ. ಇಲ್ಲಿ ಹಂಚಿಕೆ ಮಾಡಿರುವುದು 200 ರೂ. ಬೆಲೆಬಾಳುವ ಕುಕ್ಕರ್. ಬಡ ಜನರು ಆಸೆಗೆ ಬಿದ್ದು ತೆಗೆದುಕೊಂಡರೆ ಪ್ರಾಣಕ್ಕೆ ಅಪಾಯವಾಗಬಹುದು. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಹಂಚಿದ ಕುಕ್ಕರ್‌ನಿಂದ ಸಾಕಷ್ಟು ಜನರಿಗೆ ಹಾನಿಯಾಗಿದೆ ಎಂದು ದೂರಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭವ್ಯವಾದ ಕಾರ್ಯಕ್ರಮ ನೋಡಿ ಜಿಲ್ಲೆ ಸೇರಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ರೋಮಾಂಚಿತರಾಗಿದ್ದಾರೆ.

    ಎಲ್ಲ ಕೇಸರಿಮಯವಾಗಿದ್ದು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ವಿತ. ಗ್ರಾಮೀಣ ಕ್ಷೇತ್ರದ ಮೂರು ಭಾಗದಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ವಿರೋಧಿಗಳು ಎಷ್ಟೇ ಹಣ ಹಂಚಿದರೂ ಅವರ ನಾಟಕಕ್ಕೆ ಜನರು ಮರಳಾಗುವುದಿಲ್ಲ. ಒಂದು ಬಾರಿ ಜನರು ಮೋಸ ಹೋಗಬಹುದು. ಪದೇ ಪದೆ ಮೋಸ ಹೋಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಖಂಡರಾದ ನಾಗೇಶ ಮನ್ನೋಳ್ಕರ್, ಕಿರಣ ಜಾಧವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts