More

    ಗ್ರಾಮೀಣ ರಸ್ತೆ ದುರಸ್ತಿ ಮಾಡಿ

    • ಧಾರವಾಡ: ನರೇಗಾ ಯೋಜನೆಯಡಿ ಲಭ್ಯ ಅನುದಾನವನ್ನು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯೊಂದಿಗೆ ಸೇರಿಸಿ ಅಗತ್ಯ ಇರುವಲ್ಲಿ ಗ್ರಾಮೀಣ ರಸ್ತೆಗಳ ದುರಸ್ತಿ ಮಾಡಿಸಬೇಕು. ಪ್ರಸಕ್ತ ವರ್ಷದಿಂದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ- 3ರ ಅಡಿ ಪ್ರತಿ ತಾಲೂಕಿನ 30 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅವಕಾಶ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಇಲ್ಲಿಯ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

    ಸ್ವಚ್ಛ ಭಾರತ ಮಿಷನ್ ಅಡಿ ಜಿಲ್ಲೆಯಲ್ಲಿ ಇದುವರೆಗೆ 11,000 ವೈಯಕ್ತಿಕ ಶೌಚಗೃಹ ನಿರ್ವಿುಸಲಾಗಿದೆ. ಬಾಕಿ ಇರುವ 9,000 ಶೌಚ ಗೃಹಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜತೆಗೆ ಶೌಚಗೃಹ ಬಳಸುವಂತಾಗಲು ಜಾಗೃತಿ ಮೂಡಿಸಬೇಕು ಎಂದರು.

    ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳ ಪ್ರಗತಿ ಪರಿಶೀಲಿಸಿದ ಸಚಿವರು, ಯಾರ ಮಧ್ಯಸ್ಥಿಕೆ ಇಲ್ಲದೆ ಅರ್ಹ ಫಲಾನುಭವಿಗಳಿಗೆ ನೇರವಾಗಿ ಮಾಸಾಶನ ಜಮೆ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಸೂಚಿಸಿದರು.

    ಆರ್​ಒ ಘಟಕಗಳು ಹೆಸರಿಗೆ ಮಾತ್ರ ಇದ್ದಂತಿವೆ. ಜನ ರಾಡಿಮಿಶ್ರಿತ ನೀರು ಕುಡಿಯುವುದು ತಪ್ಪುತ್ತಿಲ್ಲ. ಅವುಗಳನ್ನು ಬಂದ್ ಮಾಡಿಸುವುದೇ ಸೂಕ್ತ ಎಂದು ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು.

    ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗೆ ಕೆಲ ಪ್ರಯೋಗಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಜೋಶಿ ಸೂಚಿಸಿದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ 30 ಲಕ್ಷ ರೂ. ವಿಶೇಷ ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದುವರೆಗಿನ ಗುತ್ತಿಗೆ ರದ್ದುಪಡಿಸಿ, ಹೊಸ ಪ್ಯಾಕೇಜ್ ಅಡಿ ನೂತನ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಜಿಲ್ಲೆಯ 388 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅದಕ್ಕೆ ಸಂಪುಟದ ಅನುಮೋದನೆ ಬೇಕಿದ್ದು, ಸಚಿವ ಈಶ್ವರಪ್ಪ ಅವರೊಂದಿಗೆ ಮಾತನಾಡಿ, ಯೋಜನೆಯನ್ನು ಜಿಲ್ಲೆಗೆ ತರಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

    ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ದೀಪಾ ಚೋಳನ್ ವೇದಿಕೆಯಲ್ಲಿದ್ದರು.

    ಕ್ರಿಮಿನಲ್ ಪ್ರಕರಣ ದಾಖಲಿಸಿ

    ಕುಂದಗೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ನಡೆದ ಅವ್ಯವಹಾರ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಚಿವ ಜೋಶಿ ಅವರು ಜಿ.ಪಂ. ಸಿಇಒ ಡಾ. ಸತೀಶಗೆ ಸೂಚಿಸಿದರು.

    ಅನುಪಾಲನಾ ವರದಿ ಗಮನಿಸಿದ ಸಚಿವರು ಗರಂ ಆದರು. ವಾಲೀಕಾರ ಎಂಬ ಮಹಿಳೆ ಕೂಲಿಕಾರಳಿಗೆ ಕೆಲಸ ಒದಗಿಸದೆ ತಾನೇ ಸ್ವಂತ ಮನೆ ನಿರ್ವಿುಸಿಕೊಂಡರೂ, ಹಣ ತೆಗೆದು ಅವ್ಯವಹಾರ ಮಾಡಿದ್ದಾರೆ. ಸರ್ಕಾರಕ್ಕೆ ಹಣಕಾಸಿನ ನಷ್ಟ ಉಂಟು ಮಾಡಿದ್ದು ಕಂಡುಬಂದರೂ ಕ್ರಮ ಜರುಗಿಸಿಲ್ಲ. ನಿಮಗೆ ಗಂಭೀರತೆ ಇಲ್ಲವೇ? ಎಂದು ಪ್ರಶ್ನಿಸಿದರು.

    ಈ ಬಗ್ಗೆ ವಾರದಲ್ಲಿ ಕ್ರಮ ಜರುಗಿಸಿ ವರದಿ ನೀಡಲಾಗುವುದು ಎಂದು ಡಾ. ಸತೀಶ ತಿಳಿಸಿದರು.

    ಜಿಲ್ಲೆಗೆ ಅಗ್ರಸ್ಥಾನ

    ಕೇಂದ್ರ ಪುರಸ್ಕೃತ ಯೋಜನೆಗಳಾದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಫಸಲ್ ಬಿಮಾ ಯೋಜನೆಯಡಿ 149 ಕೋಟಿ ರೂ. ದೊರೆತಿದೆ. ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಮುತುವರ್ಜಿ ಅಭಿನಂದನೀಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ದಿಶಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಶೇ. 80 ರಷ್ಟು ರೈತರ ನೋಂದಣಿಯಾಗಿದೆ. ಬೆಳೆವಿಮೆ, ಬೆಳೆ ಪರಿಹಾರದ ಹಣ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಶೌಚಗೃಹ, ವಸತಿ ಸೌಲಭ್ಯಗಳನ್ನು ಪುನಃ ಪಡೆಯುತ್ತಿರುವುದು ಕಂಡುಬಂದಿದೆ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದರು.

    ಇಂದ್ರಧನುಷ್ ಸೇರಿ ವಿವಿಧ ಲಸಿಕೆಗಳ ಅಭಿಯಾನದಲ್ಲಿ ಜಿಲ್ಲೆ ಉತ್ತಮ ಸಾಧನೆಗೈದು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಸಚಿವ ಜೋಶಿ ಪ್ರಶಂಸಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts