More

    ಗ್ರಾಮಸ್ಥರಿಗೆ ನಿತ್ಯ ನರಕಯಾತನೆ

    ಕಾರವಾರ: ಭಟ್ಕಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಿಂದ ಸಮೀಪದ ಕಸಲಗದ್ದೆ ಹಾಗೂ ಬೆಳಲಖಂಡ ಗ್ರಾಮಸ್ಥರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

    ನಿಯಮಗಳನ್ನು ಮೀರಿ ಮಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ರಾಜ್ಯಮಟ್ಟದ ಸಮಿತಿ ಸೂಚಿಸಿದರೂ ಅವ್ಯವಸ್ಥೆ ಸರಿಪಡಿಸಲು ಪುರಸಭೆ ಮುಂದಾಗದ ಕಾರಣ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ದೊರೆಯದೇ ಇದ್ದರೆ ಫೆ.10ರಂದು ಪುರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ನೀಡಿದ್ದಾರೆ.

    ಸಮಸ್ಯೆ ಏನು..?: ಪುರಸಭೆಯ ತ್ಯಾಜ್ಯ ಭರ್ತಿ ಸ್ಥಳ ಗ್ರಾಮದ ಪಕ್ಕದಲ್ಲೇ ಇದೆ. ಪುರಸಭೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಅಧಿಕಾರ ಪತ್ರ 2015ರಲ್ಲೇ ಮುಕ್ತಾಯವಾಗಿದೆ. ಹಸಿ ಕಸದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರು (ಲಿಚೆಟ್) ಸಂಸ್ಕರಣೆಗೆ ವ್ಯವಸ್ಥೆ ಇಲ್ಲ. ದ್ರವ ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ಕ್ರಮವಿಲ್ಲ. ಇದರಿಂದ ಪಕ್ಕದ ಹಳ್ಳದ ಮೂಲಕ ಹರಿಯುವ ನೀರಿನ ಜತೆ ತ್ಯಾಜ್ಯ ಗ್ರಾಮಸ್ಥರ ಗದ್ದೆ, ತೋಟಗಳಿಗೆ ತಲುಪುತ್ತಿದೆ. ಅಲ್ಲದೆ, ಕುಡಿಯುವ ನೀರಿನ ಬಾವಿಗಳು ಕಲುಷಿತವಾಗುತ್ತಿವೆ. ಕೆಟ್ಟ ವಾಸನೆ ಬರುತ್ತಿದೆ.

    ಗ್ರಾಮಸ್ಥರು ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮವಾಗಿಲ್ಲ. ಜಿಲ್ಲಾಡಳಿತಕ್ಕೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರಿದರೂ ಕ್ರಮವಾಗಿಲ್ಲ. ಇದರಿಂದ ಹಸಿರು ಪೀಠ ರಚಿಸಿದ ನ್ಯಾ. ಸುಭಾಷ ಅಡಿ ಅವರ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ರಾಜ್ಯಮಟ್ಟದ ಸಮಿತಿಗೆ ದೂರು ನೀಡಲಾಗಿತ್ತು. ಸೂಕ್ತ ಕ್ರಮಕ್ಕೆ ಅವರು ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಕ್ರಮವಾಗಿಲ್ಲ ಎಂಬುದು ಗ್ರಾಮಸ್ಥರ ಗೋಳು.

    ಭಟ್ಕಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದೇವೆ. ಆದರೆ, ಈ ವಿಚಾರ ಈಗ ಹಸಿರು ನ್ಯಾಯಮಂಡಳಿಯಡಿ ಇರುವ ಕಾರಣ ಆ ವಿಷಯ ರ್ಚಚಿಸಲು ಸಾಧ್ಯವಿಲ್ಲ.
    | ಡಾ.ಎಚ್. ಲಕ್ಷ್ಮೀಕಾಂತ
    ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿ ಕೆಎಸ್​ಪಿಸಿಬಿ ಕಾರವಾರ

    ಅವೈಜ್ಞಾನಿಕ ತ್ಯಾಜ್ಯ ವಿಲೇ ವಾರಿಯಿಂದ ನಾವು ಊರು ಬಿಡುವ ಪರಿಸ್ಥಿತಿ ನಿರ್ವಣವಾಗಿದೆ. ಎಲ್ಲರಿಗೂ ಮನವಿ ಮಾಡಿ ಸೋತು ಈಗ ಪ್ರತಿಭಟನೆಗೆ ಮುಂದಾಗಿದ್ದೇವೆ.
    | ಜಟ್ಟಪ್ಪ ನಾಯ್ಕ ಸ್ಥಳೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts