More

    ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ

    ಸೋಮವಾರಪೇಟೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಜಿಲ್ಲಾ ಪಂಚಾಯಿತಿ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಹೇಳಿದರು.


    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.


    ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ. ಗ್ರಾಮ ಮಟ್ಟದಲ್ಲಿನ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಗ್ರಾಮ ಮಟ್ಟದ ವಾಸ್ತವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮತ್ತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಸಲುವಾಗಿ ಈ ಸಭೆ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.


    ವಿವಿಧ ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ವ್ಯಾಪ್ತಿಯ ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವಂತೆ ತಿಳಿಸಿದರು.


    ಕೂಡುಮಂಗಳೂರು ಗ್ರಾ.ಪಂ. ಕಟ್ಟಡಕ್ಕೆ ನಿವೇಶನ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷರು ಮನವಿ ಮಾಡಿದರು. ಗ್ರಾ.ಪಂ.ಗಳಲ್ಲಿ ಸಿಬ್ಬಂದಿ ಕೊರತೆ, ವಸತಿರಹಿತರು ಮತ್ತು ನಿವೇಶನ ರಹಿತರ ಸಮಸ್ಯೆಗಳು, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.


    ಮಹಿಳಾ ಸ್ವಸಹಾಯ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಎನ್‌ಆರ್‌ಎಲ್‌ಎಂ ಶೆಡ್ ನಿರ್ಮಾಣ, ನರೇಗಾ ಯೋಜನೆಯ ಸಾಮಗ್ರಿ ಬಿಲ್ಲುಗಳನ್ನು ಪ್ರತಿ ಒಂದು ತಿಂಗಳಿಗೊಮ್ಮೆ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಇದರೊಂದಿಗೆ ನರೇಗಾ ಯೋಜನೆಯಡಿ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಹೆಚ್ಚು ತೆಗೆದುಕೊಳ್ಳುವುದು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸಲಹೆ ನೀಡಲಾಯಿತು.


    ಪಿಡಿಒಗಳಿಗೆ ಸೂಚನೆ: ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಮೂಲ ಸೌಕರ್ಯಗಳ ಕುಂದುಕೊರತೆಗಳನ್ನು ನಿಗದಿತ ಕಾಲಮಿತಿಯೊಳಗೆ ಸರಿಪಡಿಸುವಂತೆ ಜಿ.ಪಂ.ಸಿಇಒ ಡಾ.ಎಸ್.ಮಹೇಶ್ ಸೂಚಿಸಿದರು.


    ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರಿಗೆ ವಸೂಲಾತಿ, 15ನೇ ಹಣಕಾಸು ಯೋಜನೆ, ನರೇಗಾ, ವಸತಿ, ಜೆ.ಜೆ.ಎಂ, ಡಿಜಿಟಲ್ ಗ್ರಂಥಾಲಯ, ದೂರದೃಷ್ಟಿ ಯೋಜನೆ ಮತ್ತು ಅಮೃತ ಸರೋವರ ಕಾಮಗಾರಿಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ಹೆಚ್ಚಿನ ಮುತುವರ್ಜಿ ವಹಿಸಿ ಗುರಿ ಸಾಧಿಸಲು ನಿರ್ದೇಶನ ನೀಡಿದರು.


    ಪ್ರಶಸ್ತಿ ವಿತರಣೆ: 2021-22ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದಿರುವ ಕೂಡುಮಂಗಳೂರು ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಡಾ.ಎಸ್.ಆಕಾಶ್ ಗೌರವಿಸಿದರು. ಕೂಡುಮಂಗಳೂರು ಮತ್ತು ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ ಸ್ವೀಕರಿಸಿದರು.


    ಜಿ.ಪಂ. ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಯೋಜನಾ ನಿರ್ದೇಶಕ ಜಗದೀಶ್, ತಾ.ಪಂ.ಇಒ ಜಯಣ್ಣ, ರಾಕೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts