More

    ಗ್ರಾಪಂ ಸದಸ್ಯರ ಸಂಬಂಧಿಗಳು ಪಂಚಾಯ್ತಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಕ್ರಮ: ತಾಪಂ ಇಒ ಎಚ್ಚರಿಕೆ

    ಆಯನೂರು: ಕೋಹಳ್ಳಿ ಗ್ರಾಪಂ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಪ್ರತಿಯೊಂದು ಕಾಮಗಾರಿ ಬಗ್ಗೆ ಎಲ್ಲಾ ಸದಸ್ಯರಿಗೂ ತಿಳಿಸಿ. ಆದರೆ ಸದಸ್ಯೆಯರ ಪತಿಯಂದಿರು ಹಾಗೂ ಬೇರೆಯವರು ಪಂಚಾಯಿತಿಯಲ್ಲಿ ಅಧಿಕಾರ ನಡೆಸುವಂತಿಲ್ಲ. ಈ ರೀತಿ ಏನಾದರೂ ನಡೆದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ದಾಖಲೆ ನೀಡಿದರೆ ಸ್ಥಳದಲ್ಲೇ ಕ್ರಮ ಜರುಗಿಸುತ್ತೇನೆ ಎಂದು ತಾಪಂ ಇಒ ಅವಿನಾಶ್ ಎಚ್ಚರಿಸಿದರು.
    ಗ್ರಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಒಂದು ತಂಡ ಇದ್ದಂತೆ. ಹೊಂದಾಣಿಕೆ ಮಾಡಿಕೊಂಡು ಹೋದರೆ ಅಭಿವೃದ್ಧಿ ಸಾಧ್ಯ. ವೈಯಕ್ತಿಕ ವಿಚಾರಗಳಿಗೆ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ ಅವಕಾಶವಿಲ್ಲ. ಸದಸ್ಯರ ಯಾವುದೇ ನ್ಯೂನ್ಯತೆಗಳು ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದರು.
    ಸದಸ್ಯ ನವೀನ್ ಮಾತನಾಡಿ, ಸುಮಾರು 30 ವರ್ಷಗಳಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಯಾಗಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದರು.
    ರೂಂ ಬುಕ್ಕಿಂಗ್ ವಾಗ್ವಾದ: ಪ್ರವಾಸಿ ಮಂದಿರದಲ್ಲಿ ಗ್ರಾಪಂನಿಂದ ರೂಂ ಬಾಡಿಗೆ ಪಡೆಯುವ ಹಾಗೂ ಅಡುಗೆ ಭಟ್ಟರನ್ನು ನೇಮಿಸುವ ವಿಚಾರವಾಗಿ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆಯಿತು.
    ಸದಸ್ಯ ರಾಮು ಮಾತನಾಡಿ, ಆಯನೂರಿನ ಪ್ರವಾಸಿ ಮಂದಿರದಲ್ಲಿ ಒಂದು ರೂಂ ಅನ್ನು ಕಾಯಂ ಆಗಿ ಬಾಡಿಗೆ ಪಡೆಯುವಂತೆ ಹಾಗೂ ಒಬ್ಬ ಅಡುಗೆ ಭಟ್ಟರನ್ನು ನೇಮಿಸುವಂತೆ ಅಧ್ಯಕ್ಷರು ಪಟ್ಟು ಹಿಡಿದಾಗ ನಾನು ವಿರೋಧಿಸಿದ್ದೆ. ರೂಂಗೆ ದಿನಕ್ಕೆ 250 ರೂ. ಬಾಡಿಗೆ ಹಾಗೂ ಅಡುಗೆ ಭಟ್ಟರಿಗೆ ತಿಂಗಳಿಗೆ 15 ಸಾವಿರ ರೂ.ನಂತೆ ಒಟ್ಟು 30 ಸಾವಿರ ರೂ. ಖರ್ಚು ಬರುತ್ತದೆ. ಇದನ್ನು ಭರಿಸುವುದು ಹೇಗೆ ಎಂದು ಪ್ರಶ್ನಿಸಿದ್ದೆ. ಈ ಕಾರಣಕ್ಕೆ ಮಹಿಳೆಯರಿಗೆ ಅಗೌರವ ತೋರಿದ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಮಿತ್ರಾ ಮೇಘನಾಯ್ಕ, ಅತಿಥಿಗಳು ಹಾಗೂ ಮೇಲಧಿಕಾರಿಗಳು ಬಂದಾಗ ಅವರಿಗೆ ಆತಿಥ್ಯ ನೀಡಲು ಕೊಠಡಿ ಹಾಗೂ ಅಡುಗೆ ಭಟ್ಟರನ್ನು ನೇಮಿಸಿಕೊಳ್ಳುವಂತೆ ಹೇಳಿದ್ದೆ ಎಂದರು. ಉತ್ತರ ನೀಡಿದ ಪಿಡಿಒ ಶಶಿಕಲಾ, ಅತಿಥಿಗಳು ಕಾರ್ಯಕ್ರಮಕ್ಕೆ ಬಂದು ಹೋಗುವಾಗ ಅವರಿಗೆ ಕೊಠಡಿ ಮತ್ತು ಭಟ್ಟರ ಅವಶ್ಯಕತೆ ಇಲ್ಲ ಎಂಬುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts